ಬಿಜೆಪಿ - ಜೆಡಿಯುಗೆ ಗೆಲುವಿನ ಬಿಹಾರ

KannadaprabhaNewsNetwork |  
Published : Nov 15, 2025, 01:45 AM IST
Modi

ಸಾರಾಂಶ

 ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದ ಬಿಹಾರ  ಚುನಾವಣೆಯ ಫಲಿತಾಂಶ  ಪ್ರಕಟವಾಗಿದೆ. ಬಿಜೆಪಿ- ಜೆಡಿಯು ಮೈತ್ರಿಕೂಟ 200ಕ್ಕಿಂತ ಹೆಚ್ಚಿನ ಸ್ಥಾನದಲ್ಲಿ ಗೆಲುವಿನೊಂದಿಗೆ ಅಧಿಕಾರಕ್ಕೆ ಮರಳಿದ್ದರೆ, ಆರ್‌ಜೆಡಿ- ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ 40ಕ್ಕಿಂತ ಕಡಿಮೆ ಸ್ಥಾನದೊಂದಿಗೆ ಸೋಲುಕಂಡಿದೆ.

ಪಟನಾ: ಭಾರೀ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದೆ. ಬಿಜೆಪಿ- ಜೆಡಿಯು ಮೈತ್ರಿಕೂಟ 200ಕ್ಕಿಂತ ಹೆಚ್ಚಿನ ಸ್ಥಾನದಲ್ಲಿ ಗೆಲುವಿನೊಂದಿಗೆ ಅಧಿಕಾರಕ್ಕೆ ಮರಳಿದ್ದರೆ, ಆರ್‌ಜೆಡಿ- ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ 40ಕ್ಕಿಂತ ಕಡಿಮೆ ಸ್ಥಾನದೊಂದಿಗೆ ಹೀನಾಯ ಸೋಲುಕಂಡಿದೆ. 

ವಿಪಕ್ಷಗಳ ಪ್ರಯತ್ನ ಮತ್ತೆ ವಿಫಲ

 ಇದರೊಂದಿಗೆ ದಶಕಗಳಿಂದ ಅಧಿಕಾರದಲ್ಲಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಕೆಳಗಿಳಿಸುವ ವಿಪಕ್ಷಗಳ ಪ್ರಯತ್ನ ಮತ್ತೆ ವಿಫಲವಾಗಿದೆ. ಅದರ ಬೆನ್ನಲ್ಲೇ ಪಕ್ಷವನ್ನು 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿದ ಜೆಡಿಯು ನಾಯಕ ನಿತೀಶ್‌, ಮತ್ತೊಮ್ಮೆ ಸಿಎಂ ಹುದ್ದೆಗೆ ಬಲವಾದ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. 

ರಾಜ್ಯ ವಿಧಾನಸಭೆಯ 243 ಸ್ಥಾನಗಳಿಗೆ 2 ಹಂತದಲ್ಲಿ ನಡೆದ ಚುನಾವಣೆ ಈ ಬಾರಿ ಹಲವು ಕಾರಣಗಳಿಂದ ಭಾರೀ ಚರ್ಚೆಯಲ್ಲಿತ್ತು. ದಶಕಗಳ ಬಳಿಕ ನಡೆದ ವಿಶೇಷ ಮತಪಟ್ಟಿ ಪರಿಷ್ಕರಣೆ, ಬಿಜೆಪಿ ಮತ್ತು ಚುನಾವಣಾ ಆಯೋಗದ ಮೇಲೆ ವಿಪಕ್ಷಗಳು ಹೊರಿಸಿದ್ದ ಮತಗಳವು ಆರೋಪ ಚುನಾವಣೆಯ ಕಾವನ್ನು ಏರಿಸಿತ್ತು. ಮತ್ತೊಂದೆಡೆ ನಿತೀಶ್‌ ವಿರುದ್ಧ ಕೇಳಿಬಂದ ಆಡಳಿತದ ವೈಫಲ್ಯ, ಅನಾರೋಗ್ಯ ಸಮಸ್ಯೆ ಎನ್‌ಡಿಎ ಪಾಲಿಗೆ ಆತಂಕ ಮೂಡಿಸಿತ್ತು. ಆದರೆ ಚುನಾವಣೆ ಘೋಷಣೆಗೆ ಮುನ್ನವೇ ಹಲವು ಜನಪ್ರಿಯ ಯೋಜನೆ, ಚುನಾವಣೆ ಘೋಷಣೆಯಾಗುತ್ತಲೇ ಮಿತ್ರಪಕ್ಷಗಳ ಜೊತೆ ತ್ವರಿತ ಸೀಟು ಹಂಚಿಕೆ, ಜನರ ಮನಮುಟ್ಟುವಂತ ಪ್ರಣಾಳಿಕೆ, ಭರ್ಜರಿ ಪ್ರಚಾರ ನಡೆಸಿದ ಎನ್‌ಡಿಎ ನಾಯಕರು, ಮೈತ್ರಿಕೂಟಕ್ಕೆ ಮತ್ತೊಮ್ಮೆ ಅಧಿಕಾರ ಖಚಿತಪಡಿಸಿಕೊಂಡಿದ್ದಾರೆ. 

ನಿತೀಶ್‌ ವೈಫಲ್ಯವನ್ನು ಮುಚ್ಚುವಂತೆ ಪ್ರಚಾರ ನಡೆಸಿದ ಪ್ರಧಾನಿ

ಅದರಲ್ಲೂ ನಿತೀಶ್‌ ವೈಫಲ್ಯವನ್ನು ಮುಚ್ಚುವಂತೆ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಕೇಂದ್ರ ಮತ್ತು ರಾಜ್ಯದ ಡಬಲ್‌ ಎಂಜಿನ್‌ ಸರ್ಕಾರದ ಸಾಧನೆ, ವಿಪಕ್ಷಗಳ ಕುಟುಂಬ ರಾಜಕಾರಣ, ಲಾಲು ಅವಧಿಯ ಭ್ರಷ್ಟಾಚಾರ, ಗೂಂಡಾರಾಜ್‌ ಆಡಳಿತವನ್ನು ಪ್ರಸ್ತಾಪಿಸುವ ಮೂಲಕ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

 ಇದರ ಜೊತೆಗೆ ಚುನಾವಣೆಗೆ ಮುನ್ನ ಮಹಿಳಾ ರೋಜ್‌ಗಾರ್‌ ಯೋಜನೆಯಡಿ 1 ಕೋಟಿ ಕುಟುಂಬಗಳಿಗೆ ತಲಾ 10000 ರು. ನೀಡಿಕೆ ಮತ್ತು ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ವಿದ್ಯುತ್‌, ಪಿಂಚಣಿ ಹೆಚ್ಚಳ, 1 ಕೋಟಿ ಉದ್ಯೋಗ ಸೃಷ್ಟಿಯಂಥ ಯೋಜನೆ ಘೋಷಿಸಿದ್ದು ಎನ್‌ಡಿಎ ಕೂಟವನ್ನು ಬಲವಾಗಿ ಕೈಹಿಡಿದೆ ಎಂದು ವಿಶ್ಲೇಷಿಸಲಾಗಿದೆ.ಜೊತೆಗೆ ವಿಶೇಷ ಮತಪಟ್ಟಿ ಪರಿಷ್ಕರಣೆ ಕುರಿತ ವಿಪಕ್ಷಗಳ ಆರೋಪವನ್ನು ಜನರ ಮನಸ್ಸಿನಿಂದ ತೆಗೆದು ಹಾಕಿದ್ದು, ಮಹಿಳೆಯರು, ಮೊದಲ ಸಲದ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಮತ ಚಲಾಯಿಸಿದ್ದು ಕೂಡಾ ಎನ್‌ಡಿಎ ಕೂಡಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ. 

ಇದೆಲ್ಲದರ ಪರಿಣಾಮ ಬಿಜೆಪಿ ತಾನು ಸ್ಪರ್ಧಿಸಿದ್ದ 101ರ ಪೈಕಿ 89ರಲ್ಲಿ, ಜೆಡಿಯು 101ರ ಪೈಕಿ 85ರಲ್ಲಿ, ಎಲ್‌ಜೆಪಿ 29ರ ಪೈಕಿ 19ರಲ್ಲಿ, ಎಚ್‌ಎಎಂ 6ರ ಪೈಕಿ 4ರಲ್ಲಿ ಜಯ ಸಾಧಿಸಿ ಎನ್‌ಡಿಎ ಕೂಟಕ್ಕೆ ಭರ್ಜರಿ ಜಯ ತಂದುಕೊಟ್ಟಿವೆ. ಮತ್ತೊಂದೆಡೆ ಆರ್‌ಜೆಡಿ 143ರ ಪೈಕಿ ಕೇವಲ 25, ಕಾಂಗ್ರೆಸ್‌ 61ರ ಪೈಕಿ ಕೇವಲ 6 ಸ್ಥಾನಗಳಲ್ಲಿ ಗೆದ್ದು ಹೀನಾಯ ಸೋಲಿಗೆ ಸಾಕ್ಷಿಯಾಗಿವೆ. ಇತರರು 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

PREV
Read more Articles on

Recommended Stories

ಎನ್‌ಡಿಎ ಜಯ : ಬಿಹಾರ ಬಳಿಕ ಮುಂದಿನ ಗುರಿ ಬಂಗಾಳ
ದಿಲ್ಲಿ ಸ್ಫೋಟ ರೂವಾರಿ ಡಾ.ನಬಿ ಪುಲ್ವಾಮ ಮನೆ ಪೂರ್ಣ ನೆಲಸಮ