ನೀಟ್‌ ಸೋರಿಕೆ ಕಿಂಗ್‌ಪಿನ್‌ ರಾಕಿ ಬಂಧನ

KannadaprabhaNewsNetwork | Updated : Jul 12 2024, 05:23 AM IST

ಸಾರಾಂಶ

ನೀಟ್‌-ಯುಜಿ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಎಂದು ನಂಬಲಾದ ರಾಕೇಶ್ ರಂಜನ್ ಅಲಿಯಾಸ್ ರಾಕಿ ಎಂಬಾತನನ್ನು ಸಿಬಿಐ ಬಂಧಿಸಿದೆ.

 ನವದೆಹಲಿ ;  ನೀಟ್‌-ಯುಜಿ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಎಂದು ನಂಬಲಾದ ರಾಕೇಶ್ ರಂಜನ್ ಅಲಿಯಾಸ್ ರಾಕಿ ಎಂಬಾತನನ್ನು ಸಿಬಿಐ ಬಂಧಿಸಿದೆ.

ರಾಕಿ ಈ ಪ್ರಕರಣದ ಮತ್ತೊಬ್ಬ ರೂವಾರಿಯಾದ ಸಂಜೀವ್ ಮುಖಿಯಾ ಎಂಬಾತನ ಬಂಧು. ಈತನನ್ನು ಬಿಹಾರದ ಪಟನಾ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಯಿತು. ಆಗ ಕೋರ್ಟು ಈತನನ್ನು 10 ದಿನ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.

ಈ ನಡುವೆ, ಗುರುವಾರ ಸಿಬಿಐ ಪಟನಾದ 2 ಹಾಗೂ ಕೋಲ್ಕತಾದ 2 ಕಡೆ ದಾಳಿ ನಡೆಸಿದೆ. ಜಾರ್ಖಂಡ್‌ನ ಹಜಾರಿಬಾಗ್‌ನ ಶಾಲೆಯೊಂದರ ಪ್ರಾಂಶುಪಾಲರು ಮತ್ತು ಉಪಪ್ರಾಂಶುಪಾಲರು ಸೇರಿದಂತೆ ಈವರೆಗೆ ಸಿಬಿಐ 12 ಜನರನ್ನು ಬಂಧಿಸಿದೆ.

61 ನೀಟ್‌ ಟಾಪರ್‌ಗಳಲ್ಲಿ 17 ಜನ ಮಾತ್ರ ನೈಜ ಟಾಪರ್ಸ್: ಕೇಂದ್ರ

ನವದೆಹಲಿ: ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ), ನೀಟ್‌ ಮರುಪರೀಕ್ಷೆ ತಪ್ಪಿಸಲು ದಿನಕ್ಕೊಂದು ನೆಪ ಹೇಳತೊಡಗಿವೆ. ಟಾಪರ್‌ಗಳ ಬಗ್ಗೆ ಹೊಸ ಅಂಶವೊಂದನ್ನು ಅವು ಈಗ ಬಹಿರಂಗಪಡಿಸಿವೆ ಎಂದು ನೀಟ್‌ ಪರೀಕ್ಷಾರ್ಥಿಗಳ ಪರ ವಕೀಲ ಧೀರಜ್ ಸಿಂಗ್ ಆರೋಪಿಸಿದ್ದಾರೆ.ಸುಪ್ರೀಂ ಕೋರ್ಟ್‌ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈಗ ಕೆಲವು ಹೊಸ ಸಂಗತಿಗಳು ಮುಂಚೂಣಿಗೆ ಬಂದಿವೆ. ಮೊದಲು ಅವರು 67 ಟಾಪರ್‌ಗಳು ಎಂದು ಕೇಂದ್ರ ಸರ್ಕಾರ ಹಾಗೂ ಎನ್‌ಟಿಎ ಹೇಳಿದವು. ಕೃಪಾಂಕಿತರ ಮರು ಪರೀಕ್ಷೆಯ ನಂತರ ಇದನ್ನು 61ಕ್ಕೆ ಇಳಿಸಲಾಯಿತು. ಈಗ ಹೊಸ ವಿಷಯವನ್ನು ಕೇಂದ್ರ ಬಹಿರಂಗಪಡಿಸಿದೆ. 61ರಲ್ಲಿ ಕೇವಲ 17 ಜನ ನೈಜ ಟಾಪರ್‌ಗಳಾಗಿದ್ದಾರೆ ಮತ್ತು 44 ಇತರರು ತಪ್ಪು ಪ್ರಶ್ನೆಗೆ ಕೃಪಾಂಕ ನೀಡಿದ್ದಕ್ಕೆ 720ಕ್ಕೆ 720 ಅಂಕ ಪಡೆದಿದ್ದಾರೆ ಎಂದು ಹೇಳಿದೆ’ ಎಂದರು.

Share this article