ವಿಂಗಡಣೆಯಿಂದ ಉತ್ತರದಲ್ಲಿ ಸ್ಥಾನ ಹೆಚ್ಚಳಕ್ಕೆ ಬಿಜೆಪಿ ಹವಣಿಕೆ : ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್

KannadaprabhaNewsNetwork | Updated : Mar 13 2025, 04:39 AM IST

ಸಾರಾಂಶ

ಕ್ಷೇತ್ರ ಮರುವಿಂಗಡಣೆ ಮೂಲಕ, ತನ್ನ ಪ್ರಾಬಲ್ಯ ಇರುವ ಉತ್ತರದ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ.

ಚೆನ್ನೈ: ಕ್ಷೇತ್ರ ಮರುವಿಂಗಡಣೆ ಮೂಲಕ, ತನ್ನ ಪ್ರಾಬಲ್ಯ ಇರುವ ಉತ್ತರದ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ.

ಬುಧವಾರ ಸಭೆಯೊಂದರಲ್ಲಿ ಮಾತನಾಡಿದ ಅವರು, ‘ನೂತನ ಶಿಕ್ಷಣ ನೀತಿ (ಎನ್‌ಇಪಿ) ಹಿಂದಿಯನ್ನು ಅಭಿವೃದ್ಧಿಪಡಿಸುವ ಕೇಸರಿ ನೀತಿಯಾಗಿತ್ತು. ಈಗ ಬಿಜೆಪಿ, ಕ್ಷೇತ್ರ ಮರುವಿಂಗಡಣೆ ಮೂಲಕ ತನ್ನ ಪ್ರಾಬಲ್ಯವಿರುವ ಉತ್ತರದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸಿಕೊಳ್ಳಲು, ಆ ಮೂಲಕ ತಮ್ಮ ಪಕ್ಷವನ್ನು ಬಲಪಡಿಸಲು ಯೋಜಿಸಿದೆ. ಡಿಎಂಕೆ ಅದನ್ನು ನಿಲ್ಲಿಸುತ್ತದೆ’ ಎಂದರು.

‘ತಮಿಳುನಾಡಿನ ಶೈಕ್ಷಣಿಕ ಬೆಳವಣಿಗೆಯನ್ನು ನಾಶ ಮಾಡುವ ಎನ್‌ಇಪಿಯನ್ನು ನಾವು ವಿರೋಧಿಸುತ್ತೇವೆ. ಸಾಮಾಜಿಕ ನ್ಯಾಯ ನೀಡುವ ಮೀಸಲಾತಿಯನ್ನು ಎನ್‌ಇಪಿ ಒಪ್ಪಿಕೊಳ್ಳುವುದಿಲ್ಲ. ವೃತ್ತಿಪರ ಶಿಕ್ಷಣದ ಹೆಸರಿನಲ್ಲಿ, ಕೇಂದ್ರವು ಜಾತಿ ಆಧರಿತ ಶಿಕ್ಷಣವನ್ನು ಪರಿಚಯಿಸಲು ಪ್ರಯತ್ನಿಸುತ್ತಿತ್ತು’ ಎಂದು ಆರೋಪಿಸಿದರು.

ನವದಂಪತಿ ಬೇಗ ಮಕ್ಕಳ ಮಾಡ್ಕೊಳ್ಳಿ: ಉದಯನಿಧಿ ಕರೆ

ಚೆನ್ನೈ: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಡಿಎಂಕೆ ವಿರೋಧ ಮುಂದುವರಿದಿದ್ದು, ಹೊಸದಾಗಿ ಮದುವೆಯಾದ ದಂಪತಿಗಳು ತಕ್ಷಣ ಮಕ್ಕಳನ್ನು ಹೆರಬೇಕು ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಕರೆ ನೀಡಿದ್ದಾರೆ. 

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹೊಸದಾಗಿ ಮದುವೆಯಾದ ದಂಪತಿಗಳು ಸಾಧ್ಯವಾದಷ್ಟು ಬೇಗ ಮಕ್ಕಳನ್ನು ಮಾಡಿಕೊಳ್ಳುವಂತೆ ನಾನು ವಿನಂತಿಸುತ್ತೇನೆ. ನಮ್ಮ ರಾಜ್ಯವೇ ಮೊದಲು ಜನಸಂಖ್ಯಾ ನಿಯಂತ್ರಣ ಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತಂದಿತು. ಆದರೆ ಈಗ ಕೇಂದ್ರ ಸರ್ಕಾರದ ನೀತಿಯಿಂದಾಗಿ ನಮ್ಮ ರಾಜ್ಯವೇ ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಹಾಗಾಗಿ ಬೇಗ ಮಕ್ಕಳನ್ನು ಮಾಡಿಕೊಳ್ಳಿ’ ಎಂದರು.

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಾದರೆ ಜನಸಂಖ್ಯಾ ನಿಯಂತ್ರಣ ಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತಂದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬುದು ಕಾಂಗ್ರೆಸ್, ಡಿಎಂಕೆ ಆರೋಪ.

Share this article