ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಕುಂಭದ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು: ಹೊಸ ವರದಿ

KannadaprabhaNewsNetwork | Updated : Mar 10 2025, 04:10 AM IST

ಸಾರಾಂಶ

ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ 45 ದಿನ ನಡೆದ ಕುಂಭಮೇಳದ ವೇಳೆ ತ್ರಿವೇಣಿ ಸಂಗಮದಲ್ಲಿ ಭಕ್ತರು ಮಿಂದೇಳುತ್ತಿದ್ದ ನೀರಿನ ಶುದ್ಧತೆಯ ಬಗ್ಗೆ ಎದ್ದಿದ್ದ ನಾನಾ ಪ್ರಶ್ನೆಗಳಿಗೆ ಈಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) ತೆರೆ ಎಳೆದಿದೆ.  

 ನವದೆಹಲಿ : ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ 45 ದಿನ ನಡೆದ ಕುಂಭಮೇಳದ ವೇಳೆ ತ್ರಿವೇಣಿ ಸಂಗಮದಲ್ಲಿ ಭಕ್ತರು ಮಿಂದೇಳುತ್ತಿದ್ದ ನೀರಿನ ಶುದ್ಧತೆಯ ಬಗ್ಗೆ ಎದ್ದಿದ್ದ ನಾನಾ ಪ್ರಶ್ನೆಗಳಿಗೆ ಈಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) ತೆರೆ ಎಳೆದಿದೆ. ‘ನೀರು ಶುದ್ಧವಾಗಿಲ್ಲ’ ಎಂಬ ಫೆ.17ರ ತನ್ನದೇ ವರದಿಗೆ ವ್ಯತಿರಿಕ್ತವಾಗಿ ಫೆ.28ರಂದು ವರದಿ ನೀಡಿರುವ ಅದು, ‘ಕುಂಭಮೇಳದ ವೇಳೆ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು’ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಅದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಹೊಸ ವರದಿ ಸಲ್ಲಿಸಿದೆ,

‘ಈ ಹಿಂದೆ ವಿವಿಧೆಡೆಗಳಿಂದ ಸಂಗ್ರಹಿಸಿದ ನೀರಿನ ಅಂಕಿಅಂಶಗಳಲ್ಲಿ ವ್ಯತ್ಯಾಸವಿತ್ತು. ಹೀಗಾಗಿ ಹೊಸದಾಗಿ ವಿಶ್ಲೇಷಣೆ ಮಾಡಿ ವರದಿ ನೀಡಲಾಗಿದೆ’ ಎಂದು ಅದು ಫೆ.28ರ ವರದಿಯಲ್ಲಿ ಸ್ಪಷ್ಪಪಡಿಸಿದ್ದು, ಇದನ್ನು ನ್ಯಾಯಾಧಿಕರಣ ವೆಬ್‌ಸೈಟ್‌ನಲ್ಲಿ ಮಾ.7ರಂದು ಅಪ್‌ಲೋಡ್‌ ಮಾಡಲಾಗಿದೆ. ಇದರ ವಿಚಾರಣೆಯನ್ನು ಎ.7ರಂದು ನಡೆಸಲಾಗುವುದು ಎಂದು ನ್ಯಾಯಾಧಿಕರಣ ಹೇಳಿದೆ.

5 ಪುಣ್ಯಸ್ನಾನಗಳ ದಿನಗಳು ಸೇರಿದಂತೆ ಜ.12ರಿಂದ ವಾರಕ್ಕೊಮ್ಮೆ ಗಂಗಾ ನದಿಯ 5 ಹಾಗೂ ಯಮುನಾ ನದಿಯ 2 ಕಡೆಗಳಲ್ಲಿ ನೀರಿನ ಪರೀಕ್ಷೆ ನಡೆಸಲಾಗಿದೆ ಎಂದು ವರದಿ ಹೇಳಿದೆ.

ಹೊಸ ವರದಿಯಲ್ಲೇನಿದೆ?:

ಈ ಹಿಂದೆ ಫೆ.17ರಂದು ಸಿಪಿಸಿಬಿ ಸಲ್ಲಿಸಿದ್ದ ವರದಿಯಲ್ಲಿ, ನೀರಿನಲ್ಲಿ ಮಲದಲ್ಲಿರುವ ಕೋಲಿಫಾರ್ಮ್ ಮಟ್ಟ ಅಧಿಕವಿರುವ ಕಾರಣ ಆ ನೀರು ಸ್ನಾನಕ್ಕೆ ಯೋಗ್ಯವಲ್ಲ ಎನ್ನಲಾಗಿತ್ತು. ಇದು ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.ಆದರೆ ಹೊಸ ವರದಿಯ ಪ್ರಕಾರ ನೀರಿನಲ್ಲಿ, ’ಪಿಎಚ್‌, ನೀರಿನಲ್ಲಿ ಕರಗಿರುವ ಆಮ್ಲಜನಕ (ಡಿಒ), ಜೀವರಾಸಾಯನಿಕ ಆಮ್ಲಜನಕದ ಬೇಡಿಕೆ (ಬಿಒಡಿ), ಮಲದಲ್ಲಿರುವ ಕೋಲಿಫಾರ್ಮ್ ಎಣಿಕೆ (ಎಫ್‌ಸಿ) ಗಳಂತಹ ಅಂಶಗಳು ಮಾನದಂಡಗಳಲ್ಲಿ ತಿಳಿಸಲಾಗಿರುವ ಮಿತಿಯ ಒಳಗೇ ಇವೆ. 100 ಎಂ.ಎಲ್‌. ನೀರಿನಲ್ಲಿ 2,500 ಯೂನಿಟ್‌ನಷ್ಟು ಎಫ್‌ಸಿ ಇರಬಹುದಾಗಿದ್ದು, ನದಿ ನೀರಲ್ಲಿ ಇದು 1,400 ಯೂನಿಟ್‌ ಅಷ್ಟೇ ಇತ್ತು. ಉಳಿದಂತೆ ಡಿಒ 8.7, ಬಿಒಡಿ 2.56 ಇತ್ತು’ ಎಂದು ತಿಳಿಸಿದೆ. ಅರ್ಥಾತ್ ನದಿಯ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು’ ಎಂದು ಸ್ಪಷ್ಟಪಡಿಸಿದೆ.

ಡೇಟಾದಲ್ಲಿ ಬದಲಾವಣೆ ಏಕೆ?: 

ಇನ್ನು ತನ್ನದೇ ವೈರುಧ್ಯದ ವರದಿಗೆ ಸ್ಪಷ್ಟನೆ ನೀಡಿರುವ ಅದು, ‘ಬೇರೆಬೇರೆ ದಿನಗಳಂದು ಒಂದೇ ಜಾಗದಿಂದ ಸಂಗ್ರಹಿಸಲಾದ ನೀರಿನ ಹಾಗೂ ಒಂದೇ ದಿನ ಅನೇಕ ಕಡೆಗಳಲ್ಲಿ ಸಂಗ್ರಹಿಸಲಾದ ನೀರಿನಲ್ಲಿ ವ್ಯತ್ಯಾಸಗಳಿದ್ದವು. ಹೀಗಾಗಿ ಆಗಿನ ಸಮಗ್ರ ವರದಿಯಲ್ಲಿ ಕೂಡ ವ್ಯತ್ಯಾಸವಾಗಿತ್ತು’ ಎಂದಿದೆ.

‘ನೀರಿನ ಶುದ್ಧತೆಯ ಮಾನದಂಡವಾದ ‘ಪಿಎಚ್‌’, ನೀರಿನಲ್ಲಿ ಕರಗಿರುವ ಆಮ್ಲಜನಕ (ಡಿಒ), ಜೀವರಾಸಾಯನಿಕ ಆಮ್ಲಜನಕದ ಬೇಡಿಕೆ (ಬಿಒಡಿ), ಮಲದಲ್ಲಿರುವ ಕೋಲಿಫಾರ್ಮ್ ಎಣಿಕೆ (ಎಫ್‌ಸಿ) ಯಂತಹ ಅಂಶಗಳು ಒಂದೇ ರೀತಿ ಇರಲಿಲ್ಲ. ಮಾನವ ಚಟುವಟಿಕೆಗಳು, ಹರಿಯುವಿಕೆ, ಮಾದರಿ ಸಂಗ್ರಹಿಸಲಾದ ಆಳ, ಸಂಗ್ರಹದ ಸಮಯ, ಸ್ಥಳ ಸೇರಿದಂತೆ ಇತರೆ ಅಂಶಗಳು ಇದಕ್ಕೆ ಕಾರಣ,. ಇದರಿಂದಾಗಿ ನದಿಯುದ್ದಕ್ಕೂ ನೀರಿನ ಗುಣಮಟ್ಟ ಎಷ್ಟಿದೆ ಎಂದು ನಿಖರವಾಗಿ ಹೇಳಲು ಆಗಿರಲಿಲ್ಲ. ಹೀಗಾಗಿ ಮತ್ತೆ ಅಧ್ಯಯನ ಮಾಡಿ ಹೊಸ ಸಮಗ್ರ ವರದಿ ನೀಡಲಾಗಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

Share this article