ನಿರೀಕ್ಷೆಯಂತೆ ವಿಶ್ವಾಸ ಮತ ಗೆದ್ದ ಸಿಎಂ ನಿತೀಶ್‌ ಕುಮಾರ್‌

KannadaprabhaNewsNetwork | Updated : Feb 13 2024, 07:29 AM IST

ಸಾರಾಂಶ

ಇಂಡಿಯಾ ಮೈತ್ರಿಕೂಟದಿಂದ ಹೊರಬಂದು ಎನ್‌ಡಿಎ ಜತೆಗೂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ನೇತೃತ್ವದ ಜೆಡಿಯು- ಬಿಜೆಪಿ ಮೈತ್ರಿ ಸರ್ಕಾರ ಸೋಮವಾರ ನಿರೀಕ್ಷೆಯಂತೆ ಸಂಪೂರ್ಣ ವಿಶ್ವಾಸಮತ ಸಾಬೀತು ಮಾಡಿದೆ.

ಪಟನಾ: ಇಂಡಿಯಾ ಮೈತ್ರಿಕೂಟದಿಂದ ಹೊರಬಂದು ಎನ್‌ಡಿಎ ಜತೆಗೂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ನೇತೃತ್ವದ ಜೆಡಿಯು- ಬಿಜೆಪಿ ಮೈತ್ರಿ ಸರ್ಕಾರ ಸೋಮವಾರ ನಿರೀಕ್ಷೆಯಂತೆ ಸಂಪೂರ್ಣ ವಿಶ್ವಾಸಮತ ಸಾಬೀತು ಮಾಡಿದೆ. 

ಧ್ವನಿಮತದ ಮೂಲಕ ವಿಶ್ವಾಸಮತ ಅಂಗೀಕರಿಸಲಾಗಿದ್ದು, ಒಟ್ಟು 243 ಬಲದ ವಿಧಾನಸಭೆಯಲ್ಲಿ 129 ಶಾಸಕರು ನಿತೀಶ್‌ ಅವರ ಪರವಾಗಿ ಮತ ಚಲಾಯಿಸಿದ್ದಾರೆ. ಈ ವೇಳೆ ವಿಪಕ್ಷಗಳ ಸದಸ್ಯರು ಸದನದಿಂದ ಹೊರ ನಡೆದರು.

ಇನ್ನು ವಿಶ್ವಾಸಮತ ಯಾಚನೆ ವೇಳೆ ಮಾತನಾಡಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ‘ನಾನು ಯಾವಾಗಲೂ ನಿತೀಶ್‌ ಕುಮಾರ್‌ ಅವರನ್ನು ತಂದೆಯ ಸ್ಥಾನದಲ್ಲಿರುವ ವ್ಯಕ್ತಿ ಎಂದು ನೋಡುತ್ತಿದ್ದೆ. ಅವರನ್ನು ನಾನು ದಶರಥ ಎಂದು ಪರಿಗಣಿಸಿದ್ದೇನೆ. 

ಯಾವ ಕಾರಣಕ್ಕೆ ಅವರು ಇಂಡಿಯಾ ಕೂಟ ತೊರೆದರು ಎಂದು ನನಗೆ ಗೊತ್ತಿಲ್ಲ. ಅವರು ಎನ್‌ಡಿಎಗೆ ಮರಳಿದ್ದು ನನಗೆ ಆಶ್ಚರ್ಯವಾಗಿದೆ’ ಎಂದರು.

ಈ ಹಿಂದೆ ಬಿಹಾರದಲ್ಲಿ ಆರ್‌ಜೆಡಿ- ಜೆಡಿಯು ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಈ ಎರಡೂ ಪಕ್ಷಗಳು ಇಂಡಿಯಾ ಕೂಟದ ಭಾಗವಾಗಿದ್ದವು. 

ಆದರೆ ದಿಢೀರನೇ ನಿತೀಶ್‌ ಇಂಡಿಯಾ ತೊರೆದು ತಮ್ಮ ಹಳೆಯ ಪಾಲುದಾರ ಎನ್‌ಡಿಎ ಜತೆ ಕೈಗೂಡಿಸಿ, ಆರ್‌ಜೆಡಿಯೊಂದಿಗೆ ಮೈತ್ರಿ ಮುರಿದುಕೊಂಡು ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿದ್ದಾರೆ.

Share this article