ಈಗ ಜೆಡಿಯು ಕ್ವಿಟ್‌ ಇಂಡಿಯಾ । ವಿಪಕ್ಷಗಳ ಕೂಟಕ್ಕೆ ಮುಖಭಂಗನಿತೀಶ್‌ ಎನ್‌ಡಿಎ ವಾಪ್ಸಿ

KannadaprabhaNewsNetwork | Published : Jan 29, 2024 1:30 AM

ಸಾರಾಂಶ

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇಂಡಿಯಾ ಕೂಟವನ್ನು ತೊರೆದು ಎನ್‌ಡಿಎ ಸೇರಿ 9ನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ನಿತೀಶ್‌ಗೆ ಮತ್ತೆ ಬಿಜೆಪಿ ಬಾಗಿಲು ತೆರೆದಿದ್ದು ಏಕೆ?

- ಕಳೆದ ಬಾರಿ ಎನ್‌ಡಿಎ ತೊರೆದಾಗ ನಿತೀಶ್‌ಗೆ ಇನ್ನು ಬಾಗಿಲು ಬಂದ್‌ ಎಂದಿದ್ದ ಬಿಜೆಪಿ. ಈಗ ತಂತ್ರ ಬದಲು- ‘ಇಂಡಿಯಾ’ ಪ್ರಬಲ ಕೂಟ ಅಲ್ಲ, ಅದು ದುರ್ಬಲ ಎಂಬ ಸಂದೇಶ ಸಾರಲು ನಿತೀಶ್‌ಗೆ ಬಿಜೆಪಿ ಮುಕ್ತ ಸ್ವಾಗತ- ‘ಇಂಡಿಯಾ’ಕ್ಕೆ ನಿತೀಶ್‌ ಪ್ರಮುಖ ನಾಯಕ. ಅವರನ್ನೇ ಸೆಳೆದರೆ ಇಂಡಿಯಾ ಕೂಟದಲ್ಲಿ ಬಿರುಕು ಮೂಡಬಹುದು- ನಿತೀಶ್‌ ಬಿಹಾರದ ಜನಪ್ರಿಯ ನಾಯಕ. ಅವರನ್ನು ಬಳಸಿ ಹೆಚ್ಚು ಲೋಕಸಭೆ ಸೀಟು ಗೆಲ್ಲಬಹುದು ಎಂಬ ಲೆಕ್ಕ- ನಿತೀಶ್‌ ಜನಪ್ರಿಯರಾಗಿದ್ದರೂ ಜೆಡಿಯು ಪ್ರಭಾವ ಮೊದಲಿನಷ್ಟಿಲ್ಲ. ಸರ್ಕಾರದಲ್ಲಿ ಪ್ರಾಬಲ್ಯ ಸಾಧಿಸುವ ಲೆಕ್ಕಾಚಾರನಿತೀಶ್‌ ನಡೆಗೆ ‘ಪಿಎಂ ಅಭ್ಯರ್ಥಿ ಖರ್ಗೆ’ ಕಾರಣ!ಪಟನಾ: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ನಡೆಸಿದ ಯತ್ನವೇ ನಿತೀಶ್‌ ಕುಮಾರ್‌ ಅವರು ಇಂಡಿಯಾ ಕೂಟಕ್ಕೆ ಗುಡ್‌ಬೈ ಹೇಳಲು ನಾಂದಿ ಹಾಡಿತು ಎಂದು ಜೆಡಿಯು ನಾಯಕ ಕೆ.ಸಿ. ತ್ಯಾಗಿ ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷವು ಇಂಡಿಯಾ ಮೈತ್ರಿಕೂಟದ ನಾಯಕತ್ವ ಕಸಿದುಕೊಳ್ಳಲು ಬಯಸಿದ್ದೇ ನಿತೀಶ್‌ ಮೈತ್ರಿಕೂಟದಿಂದ ಹೊರಬರಲು ಕಾರಣ ಎಂದಿದ್ದಾರೆ. ಮುಂಬೈನಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ಬೇಡ ಎಂದು ತೀರ್ಮಾನಿಸಲಾಗಿದ್ದರೂ, ನಂತರದ ದಿನಗಳಲ್ಲಿ ಖರ್ಗೆ ಹೆಸರು ಪ್ರಸ್ತಾಪಿಸಲಾಗಿತ್ತು ಎಂದಿದ್ದಾರೆ.ನಿರೀಕ್ಷೆಗೆ ತಕ್ಕಂತೆ ಇಂಡಿಯಾ ಇರಲಿಲ್ಲ

ಇಂಡಿಯಾ ಮೈತ್ರಿಕೂಟ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ರಾಜ್ಯದ ಮೈತ್ರಿ ಸರ್ಕಾರದಲ್ಲೂ ಎಲ್ಲವೂ ಸರಿ ಇರಲಿಲ್ಲ. ಹೀಗಾಗಿ ಮೈತ್ರಿಕೂಟ ತೊರೆಯುವುದು ಅನಿವಾರ್ಯವಾಗಿತ್ತು. ಈಗ ಮತ್ತೆ ಮನೆಗೆ ಮರಳಿದಂತಾಗಿದೆ.- ನಿತೀಶ್‌ ಕುಮಾರ್‌ ಬಿಹಾರ ಮುಖ್ಯಮಂತ್ರಿ

ನಿತೀಶ್‌ ಕೈಕೊಡುವ ಬಗ್ಗೆ ಮಾಹಿತಿ ಇತ್ತು

ನಿತೀಶ್‌ ‘ಇಂಡಿಯಾ’ ಕೂಟ ಬಿಡುವ ಬಗ್ಗೆ ನನಗೆ ಲಾಲು, ತೇಜಸ್ವಿ ಮೊದಲೇ ಮಾಹಿತಿ ನೀಡಿದ್ದರು. ಆದರೆ ಮೈತ್ರಿಕೂಟವನ್ನು ಕಾಪಾಡುವ ನಿಟ್ಟಿನಲ್ಲಿ ಮೊದಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.- ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷ

ಲೋಕಸಭೆ ಎಲೆಕ್ಷನಲ್ಲಿ ಜೆಡಿಯು ನಿರ್ನಾಮ2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಸಂಪೂರ್ಣ ನಿರ್ನಾಮವಾಗಲಿದೆ. ನಿತೀಶ್‌ ಒಳ್ಳೆಯ ವ್ಯಕ್ತಿ ನಿಜ. ಆದರೆ ಕೆಲಸದ ಶ್ರೇಯಸ್ಸು ಬೇರೆಯವರಿಗೆ ಹೋದರೆ ಸಹಿಸಿಲ್ಲ. ಬಿಜೆಪಿ ಬಹಳ ಎಚ್ಚರಿಂದ ಇರಬೇಕು.- ತೇಜಸ್ವಿ ಯಾದವ್‌ ಆರ್‌ಜೆಡಿ ನಾಯಕ

ಪಟನಾ: ಕಳೆದ ಮೂರು ದಿನಗಳಿಂದ ಬಿಹಾರದಲ್ಲಿ ಆರಂಭವಾಗಿದ್ದ ದಿಢೀರ್‌ ರಾಜಕೀಯ ಕ್ಷಿಪ್ರಕ್ರಾಂತಿ, ಭಾನುವಾರ ಜೆಡಿಯು-ಆರ್‌ಜೆಡಿ- ಕಾಂಗ್ರೆಸ್‌ (ಇಂಡಿಯಾ ಕೂಟ) ಸರ್ಕಾರದ ಪತನ ಮತ್ತು ನೂತನ ಜೆಡಿಯು-ಬಿಜೆಪಿ ಸರ್ಕಾರ ರಚನೆಯೊಂದಿಗೆ ತಾರ್ಕಿಕ ಅಂತ್ಯ ಕಂಡಿದೆ. ನೂತನ ಎನ್‌ಡಿಎ ಸರ್ಕಾರದ ಮುಖ್ಯಮಂತ್ರಿಯಾಗಿ ಜೆಡಿಯು ನಾಯಕ ನಿತೀಶ್‌ ಕುಮಾರ್‌ (72) ದಾಖಲೆಯ 9ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನಿತೀಶ್‌ರೊಂದಿಗೆ ಬಿಜೆಪಿಯ ಸಾಮ್ರಾಟ್‌ ಚೌಧರಿ ಮತ್ತು ವಿಜಯ್‌ ಸಿನ್ಹಾ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಒಟ್ಟಾರೆ 8 ಜನರ ಸಂಪುಟ ರಚನೆಯಾಗಿದೆ.ಭಾನುವಾರದ ಈ ಬೆಳವಣಿಗೆಯೊಂದಿಗೆ ನಿತೀಶ್‌ ಕುಮಾರ್ ಅಧಿಕೃತವಾಗಿ ‘ಇಂಡಿಯಾ’ ಮೈತ್ರಿಕೂಟಕ್ಕೆ ವಿದಾಯ ಹೇಳಿ, ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದಂತಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ನಡೆದ ಈ ದಿಢೀರ್‌ ಬೆಳವಣಿಗೆ ‘ಇಂಡಿಯಾ’ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ಎಂದೇ ಬಣ್ಣಿಸಲಾಗಿದೆ.

ಈ ನಡುವೆ ನಿತೀಶ್‌ ನಿರ್ಧಾರವನ್ನು ದ್ರೋಹ ಎಂದು ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷಗಳಾದ ಆರ್‌ಜೆಡಿ, ಕಾಂಗ್ರೆಸ್‌, ಡಿಎಂಕೆ, ಟಿಎಂಸಿ, ಎನ್‌ಸಿಪಿ ಟೀಕಿಸಿವೆ. ಆದರೆ ‘ಇಂಡಿಯಾ’ ಮೈತ್ರಿಕೂಟ ನಿರೀಕ್ಷೆಗೆ ತಕ್ಕಹಾಗಿರಲಿಲ್ಲ, ಜೊತೆಗೆ ರಾಜ್ಯದ ಮೈತ್ರಿ ಸರ್ಕಾರದಲ್ಲೂ ಎಲ್ಲವೂ ಸರಿ ಇರಲಿಲ್ಲ. ಹೀಗಾಗಿ ಮೈತ್ರಿಕೂಟ ತೊರೆಯುವುದು ಅನಿವಾರ್ಯವಾಗಿತ್ತು. ಈಗ ಮತ್ತೆ ಮನೆಗೆ ಮರಳಿದಂತಾಗಿದೆ ಎಂದು ನಿತೀಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ನಿತೀಶ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.ಸರ್ಕಾರ ಪತನ, ರಾಜೀನಾಮೆ:ಭಾನುವಾರ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಅವರನ್ನು ಭೇಟಿ ಮಾಡಿದ ನಿತೀಶ್‌, ಜೆಡಿಯು-ಆರ್‌ಜೆಡಿ-ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರದಲ್ಲೂ ಎಲ್ಲವೂ ಸರಿ ಇಲ್ಲ. ಹೀಗಾಗಿ ಜನರ ಅಭಿಪ್ರಾಯ ಆಧರಿಸಿ ಸರ್ಕಾರವನ್ನು ವಿಸರ್ಜಿಸಿ ಎಂದು ಮನವಿ ಸಲ್ಲಿಸಿದರು. ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಕಳೆದೊಂದು ದಶಕದಲ್ಲಿ ನಿತೀಶ್‌ ಕುಮಾರ್‌ ಹೀಗೆ ಬಣ ಬದಲಿಸಿದ್ದು ಇದು 4ನೇ ಬಾರಿ ಎಂಬುದು ವಿಶೇಷ.6 ತಾಸು ಬಳಿಕ ಮತ್ತೆ ಪ್ರಮಾಣ ವಚನ:ರಾಜೀನಾಮೆ ಸಲ್ಲಿಸಿದ 6 ತಾಸು ಬಳಿಕ ಅಂದರೆ, ಸಂಜೆ 5 ಗಂಟೆಗೆ ನಿತೀಶ್‌ ದಾಖಲೆಯ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರೊಂದಿಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ, ರಾಜ್ಯದ ಪ್ರಮುಖ ಒಬಿಸಿ ಸಮುದಾಯಗಳ ಪೈಕಿ ಒಂದಾದ ಕುಶ್ವಾಹಾ ಸಮುದಾಯದ ಸಾಮ್ರಾಟ್‌ ಚೌಧರಿ ಮತ್ತು ಮೇಲ್ವರ್ಗದ ಭೂಮಿಹಾರ್‌ ಸಮುದಾಯದ ಅಶೋಕ್‌ ಸಿನ್ಹಾ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.ಇವರ ಜೊತೆಗೆ ಬಿಜೆಪಿಯ ಪ್ರೇಮ್‌ ಕುಮಾರ್‌, ಜೆಡಿಯುನ ವಿಜಯ್‌ ಕುಮಾರ್‌ ಚೌಧರಿ, ಶ್ರವಣ್‌ ಕುಮಾರ್‌ ಮತ್ತು ಮಾಜಿ ಸಿಎಂ ಜೀತನ್ ಕುಮಾರ್‌ ಮಾಂಝಿ ಅವರ ಪಕ್ಷದ ಸಂತೋಷ್‌ ಕುಮಾರ್‌ ಸುಮನ್‌, ಪಕ್ಷೇತರ ಸದಸ್ಯ ಸುಮಿತ್‌ ಸಿಂಗ್‌ ಕೂಡಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.

ನಿತೀಶ್‌-ಬಿಜೆಪಿ ಸಂಧಾನ ಸೂತ್ರ:ಬಿಹಾರದಲ್ಲಿ ಮುಂದಿನ ವರ್ಷ ಮತ್ತೆ ವಿಧಾನಸಭಾ ಚುನಾವಣೆಯ ನಡೆಯಲಿದ್ದು, ಅಲ್ಲಿಯವರೆಗೂ ನಿತೀಶ್‌ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಬಳಿಕ ಸಿಎಂ ಸ್ಥಾನ ಬಿಜೆಪಿಗೆ ನೀಡುವ ಹಾಗೂ ನಿತೀಶ್‌ಗೆ ರಾಷ್ಟ್ರ ಮಟ್ಟದ ಸ್ಥಾನಮಾನ ನೀಡುವ ಕುರಿತು ಉಭಯ ಪಕ್ಷಗಳ ನಡುವೆ ಮಾತುಕತೆ ಆಗಿದೆ ಎಂದು ಮೂಲಗಳು ತಿಳಿಸಿವೆ.ಬಿಹಾರ ವಿಧಾನಸಭೆ ಬಲಾಬಲ ಪಕ್ಷಶಾಸಕರ ಸಂಖ್ಯೆ

ಒಟ್ಟು 243ಬಹುಮತ 122

ಆರ್‌ಜೆಡಿ 79

ಕಾಂಗ್ರೆಸ್‌ 19

ಎಡಪಕ್ಷ 16

ಎಐಎಂಐಎಂ 1

ಬಿಜೆಪಿ 78

ಜೆಡಿಯು 45

ಹಮ್‌ 4

ಪಕ್ಷೇತರ 1

Share this article