ಭಗವಂತನಾಗುವ ಆಸೆ ಇರೋರಿಗೆ ಮುಂದೇನು ಅಂತ ಗೊತ್ತಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

KannadaprabhaNewsNetwork |  
Published : Jul 19, 2024, 12:50 AM ISTUpdated : Jul 19, 2024, 05:19 AM IST
Mohan Bhagwath

ಸಾರಾಂಶ

‘ಸ್ವಯಂ ಅಭಿವೃದ್ಧಿಯ ಹಾದಿಯಲ್ಲಿ, ಒಬ್ಬ ವ್ಯಕ್ತಿಯು ‘ಸೂಪರ್ ಮ್ಯಾನ್‌’ ಆಗಲು ಬಯಸಬಹುದು, ನಂತರ ‘ದೇವತೆ’ ಮತ್ತು ‘ಭಗವಾನ್’ ಮತ್ತು ‘ವಿಶ್ವರೂಪ’ ಆಗಲು ಹಾತೊರೆಯಬಹುದು, ಆದರೆ ಮುಂದೆ ಏನಾಗುತ್ತದೆ ಎಂಬ ಅರಿವು ಇರುವುದಿಲ್ಲ.

  ಗುಮ್ಲಾ (ಜಾರ್ಖಂಡ್‌) :  ‘ಸ್ವಯಂ ಅಭಿವೃದ್ಧಿಯ ಹಾದಿಯಲ್ಲಿ, ಒಬ್ಬ ವ್ಯಕ್ತಿಯು ‘ಸೂಪರ್ ಮ್ಯಾನ್‌’ ಆಗಲು ಬಯಸಬಹುದು, ನಂತರ ‘ದೇವತೆ’ ಮತ್ತು ‘ಭಗವಾನ್’ ಮತ್ತು ‘ವಿಶ್ವರೂಪ’ ಆಗಲು ಹಾತೊರೆಯಬಹುದು, ಆದರೆ ಮುಂದೆ ಏನಾಗುತ್ತದೆ ಎಂಬ ಅರಿವು ಯಾರಿಗೂ ಇರಲ್ಲ. ಹೀಗಾಗಿ ಮಹತ್ವಾಕಾಂಕ್ಷೆಗೆ ಅಂತ್ಯವಿಲ್ಲದ ಕಾರಣ ಜನರು ಮನುಕುಲದ ಕಲ್ಯಾಣಕ್ಕಾಗಿ ಪಟ್ಟುಬಿಡದೆ ಶ್ರಮಿಸಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ವೇಳೆ ‘ನಾನು ಜೈವಿಕವಾಗಿ ಜನಿಸಿದಂತೆ ಭಾಸವಾಗುತ್ತಿಲ್ಲ. ನನ್ನನ್ನು ಭಗವಂತನೇ ಕಳಿಸಿದ್ದಾನೆ ಎಂಬಂತೆ ಭಾಸವಾಗುತ್ತಿದೆ’ ಎಂಬ ಹೇಳಿಕೆ ನೀಡಿದ್ದರು. ಈಗ ಭಾಗವತ್ ಆಡಿದ ಮಾತು ಮೋದಿಗೆ ಪರೋಕ್ಷ ಟಾಂಗ್‌ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೂ ಮುನ್ನ ಭಾಗವತ್‌ ಅವರು, ‘ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಗೆ ಬಿಜೆಪಿ ನಾಯಕರ ಅಹಂಕಾರವೇ ಕಾರಣ ಎಂದು ಕಿಡಿಕಾರಿದ್ದರು’ ಎಂಬುದು ಇಲ್ಲಿ ಗಮನಾರ್ಹ.

ಗುರುವಾರ ಗ್ರಾಮ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು, ‘ಮನುಷ್ಯರಾಗಿದ್ದರೂ ಮಾನವೀಯ ಗುಣಗಳ ಕೊರತೆ ಕೆಲವರಿಗೆ ಇರುತ್ತದೆ. ಅದನ್ನು ಮೊದಲು ಮೈಗೂಡಿಸಿಕೊಳ್ಳಬೇಕು. ಮಾನವ ಗುಣಗಳನ್ನು ಸಾಧಿಸಿದ ನಂತರ, ಮನುಷ್ಯನು ಅಲೌಕಿಕ ಶಕ್ತಿಗಳೊಂದಿಗೆ ಸೂಪರ್‌ಮ್ಯಾನ್‌ ಆಗಲು ಮತ್ತು ನಂತರ ದೇವತಾ ಮತ್ತು ಭಗವಾನ್ ಸ್ಥಾನಮಾನವನ್ನು ಪಡೆಯಲು ಹಾತೊರೆಯುತ್ತಾನೆ. ನಂತರ ಅವನು ವಿಶ್ವರೂಪ ಆಗಲು ಹಂಬಲಿಸುತ್ತಾನೆ. ಆದರೆ ಅದಾದ ನಂತರ ಮುಂದಿನ ಹಾದಿ ಗೊತ್ತಿರುವುದಿಲ್ಲ’ ಎಂದರು.‘ಅಂತರಂಗದ ಅಭಿವೃದ್ಧಿಗೆ ಕೊನೆಯಿಲ್ಲ, ಮಾನವೀಯತೆಗಾಗಿ ಅವಿರತವಾಗಿ ದುಡಿಯಬೇಕು’ ಎಂದ ಅವರು, ‘ಕೆಲಸಗಾರನು ತನ್ನ ದುಡಿಮೆಯಿಂದ ಎಂದಿಗೂ ತೃಪ್ತನಾಗಬಾರದು. ಸಮಾಜದ ಏಳ್ಗೆಗೆ ಶ್ರಮಿಸಬೇಕು’ ಎಂದರು.

ಜೈರಾಂ ಟಾಂಗ್‌:

ಭಾಗವತ್‌ ಹೇಳಿಕೆಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಪ್ರತಿಕ್ರಿಯಿಸಿ, ‘ಇದು ನಾಗಪುರದಿಂದ (ಆರೆಸ್ಸೆಸ್‌ ಕಚೇರಿಯಿಂದ) ಲೋಕಕಲ್ಯಾಣ ಮಾರ್ಗದತ್ತ (ಪ್ರಧಾನಿ ನಿವಾಸದತ್ತ) ಹಾರಿಸಿದ ಅಗ್ನಿಕ್ಷಿಪಣಿ’ ಎಂದು ವ್ಯಂಗ್ಯವಾಡಿದ್ದಾರೆ.

PREV

Recommended Stories

ಜಾತಿಗಣತಿ ‘ಧರ್ಮಕಾಲಂ’ನಲ್ಲಿ ಹಿಂದು ಎಂದೇ ಬರೆಸಲು ಕರೆ
ಮಾಲೂರು ಶಾಸಕ ನಂಜೇಗೌಡಆಯ್ಕೆ ರದ್ದತಿಗೆ ಹೈಕೋರ್ಟ್‌ ಆದೇಶ