ನಮ್ಮ ಸರ್ಕಾರ 4 ಬಾರಿಗೂ ಅಧಿಕಾರಕ್ಕೆ ಬರುವುದು ಖಚಿತವಿಲ್ಲ: ಕೇಂದ್ರ ಸಚಿವ ಗಡ್ಕರಿ ‘ತಮಾಷೆ’!

KannadaprabhaNewsNetwork | Updated : Sep 24 2024, 06:53 AM IST

ಸಾರಾಂಶ

‘ನಮ್ಮ ಸರ್ಕಾರ (ಮೋದಿ ಸರ್ಕಾರ) 4 ಬಾರಿಗೂ ಅಧಿಕಾರಕ್ಕೆ ಬರುವುದು ಖಚಿತವಿಲ್ಲ. ಆದರೂ ರಾಮದಾಸ್‌ ಅಠಾವಳೆ ಅವರು ಮಂತ್ರಿಯಾಗುವುದು ಖಂಡಿತ’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಮ್ಮದೇ ಪಕ್ಷದ ಸಚಿವರನ್ನು ಕುರಿತು ತಮಾಷೆ ಮಾಡಿದ್ದಾರೆ.

ನಾಗ್ಪುರ: ‘ನಮ್ಮ ಸರ್ಕಾರ (ಮೋದಿ ಸರ್ಕಾರ) 4 ಬಾರಿಗೂ ಅಧಿಕಾರಕ್ಕೆ ಬರುವುದು ಖಚಿತವಿಲ್ಲ. ಆದರೂ ರಾಮದಾಸ್‌ ಅಠಾವಳೆ ಅವರು ಮಂತ್ರಿಯಾಗುವುದು ಖಂಡಿತ’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಮ್ಮದೇ ಪಕ್ಷದ ಸಚಿವರನ್ನು ಕುರಿತು ತಮಾಷೆ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮಹಾಯುತಿ ಮೈತ್ರಿ ಸರ್ಕಾರದ ಭಾಗವಾಗಿರುವ ತಮ್ಮ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಎ) ಪಕ್ಷಕ್ಕೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 10-12 ಸೀಟುಗಳಲ್ಲಿ ಸ್ಪರ್ಧಿಸಲು ಅವಕಾಶ ಕೊಡಬೇಕು ಎಂದು ಅಠಾವಳೆ ಆಗ್ರಹಿಸಿದ ಬೆನ್ನಲ್ಲೇ ಗಡ್ಕರಿ ಹೀಗೆ ಹೇಳಿದ್ದು, ‘ಇದು ಬರಿ ತಮಾಷೆ’ ಎಂದು ಸ್ಪಷ್ಟಪಡಿಸಿದ್ದಾರೆ.

3 ಬಾರಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಅಠಾವಳೆ, ಈ ಮುಂಚೆ ಬಿಜೆಪಿಯೇತರ ಪಕ್ಷಗಳ ಜತೆಗೆ ಕೈಜೋಡಿಸಿ ಅಧಿಕಾರದಲ್ಲಿದ್ದರು. ಮೋದಿ ಅಧಿಕಾರಕ್ಕೆ ಬಂದಾಗ ಎನ್‌ಡಿಎಗೆ ಜಿಗಿದು ಸತತವಾಗಿ 3 ಸಲ ಮಂತ್ರಿಯಾಗಿದ್ದಾರೆ.

==

ಜಾತ್ಯತೀತತೆ ದೊಡ್ಡ ವಂಚನೆ, ಭಾರತಕ್ಕೆ ಅಗತ್ಯವಿಲ್ಲ: ತ.ನಾ. ಗೌರ್ನರ್‌

ಚೆನ್ನೈ: ‘ಜಾತ್ಯತೀತ ಎಂಬುದು ಭಾರತೀಯರ ಮೇಲಿನ ಅತಿ ದೊಡ್ಡ ಮೋಸ. ಅದು ಐರೋಪ್ಯ ದೇಶಗಳಲ್ಲಿ ಸರಿ. ಆದರೆ ಇದು ಭಾರತಕ್ಕೆ ಅಗತ್ಯವಿಲ್ಲ’ ಎಂದು ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಹೇಳಿದ್ದಾರೆ.

ಕನ್ಯಾಕುಮಾರಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಭಾರತೀಯರಿಗೆ ಹಲವು ಮೋಸ ಮಾಡಲಾಗಿದೆ. ಅವುಗಳಲ್ಲಿ ಜಾತ್ಯತೀತತೆಯೂ ಒಂದು. ಜಾತ್ಯತೀತತೆ ಎಂಬುದು ಯೂರೋಪ್ ಖಂಡದಲ್ಲಿ ಚರ್ಚ್‌ ಮತ್ತು ರಾಜರ ನಡುವೆ ಸಂಘರ್ಷ ಉಂಟಾದಾಗ ಉದ್ಭವಿಸಿದ ವಿಷಯ. ಆದರೆ ಇದು ಭಾರತಕ್ಕೆ ಹೇಗೆ ಪ್ರಸ್ತುತವಾಗುತ್ತದೆ’ ಎಂದು ಪ್ರಶ್ನಿಸಿದರು.

ಆದರೆ, ‘ಭಾರತವು ಧರ್ಮದಿಂದ ಹುಟ್ಟಿದೆ. ಧರ್ಮದಲ್ಲಿ ಸಂಘರ್ಷ ಉಂಟಾಗುವುದು ಹೇಗೆ? ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕೆಲ ವರ್ಗಗಳನ್ನು ಓಲೈಕೆ ಮಾಡುವ ಕಾರಣ ಬಲವಂತವಾಗಿ ಜಾತ್ಯಾತೀತ ಎಂಬುದನ್ನು ಸಂವಿಧಾನಕ್ಕೆ ಸೇರಿಸಿದರು. ಜಾತ್ಯತೀತ ಎಂಬುದು ಯೂರೋಪ್‌ನ ಪರಿಕಲ್ಪನೆ, ಅದು ಅಲ್ಲಿಯೇ ಇರಬೇಕು ಹೊರತು ಭಾರತದಲ್ಲಿ ಅಲ್ಲ’ ಎಂದರು.

Share this article