ಮೈಸೂರು ಮುಡಾ ಹಗರಣ ಪಾದಯಾತ್ರೆಗೆ ಜೆಡಿಎಸ್‌ ಬೆಂಬಲವಿಲ್ಲ: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

KannadaprabhaNewsNetwork |  
Published : Aug 01, 2024, 01:46 AM ISTUpdated : Aug 01, 2024, 07:16 AM IST
hd kumaraswamy

ಸಾರಾಂಶ

ಮುಡಾ ಹಗರಣ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರುವರೆಗೆ ಆ.3ರಿಂದ ಬಿಜೆಪಿ ನಡೆಸಲುದ್ದೇಶಿಸಿರುವ ಪಾದಯಾತ್ರೆಯಿಂದ ಮಿತ್ರಪಕ್ಷವಾದ ಜೆಡಿಎಸ್‌ ದೂರವುಳಿಯುವುದಷ್ಟೇ ಅಲ್ಲ, ನೈತಿಕ ಬೆಂಬಲವನ್ನೂ ನೀಡುವುದಿಲ್ಲ - ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

 ನವದೆಹಲಿ : ಮುಡಾ ಹಗರಣ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರುವರೆಗೆ ಆ.3ರಿಂದ ಬಿಜೆಪಿ ನಡೆಸಲುದ್ದೇಶಿಸಿರುವ ಪಾದಯಾತ್ರೆಯಿಂದ ಮಿತ್ರಪಕ್ಷವಾದ ಜೆಡಿಎಸ್‌ ದೂರವುಳಿಯುವುದಷ್ಟೇ ಅಲ್ಲ, ನೈತಿಕ ಬೆಂಬಲವನ್ನೂ ನೀಡುವುದಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆಗಳ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಪಾದಯಾತ್ರೆಗೆ ಸಂಬಂಧಿಸಿ ಮಿತ್ರಪಕ್ಷವಾದ ನಮ್ಮನ್ನು ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ. ಜತೆಗೆ ರಾಜ್ಯದಲ್ಲಿ ಮಳೆ, ನೆರೆ, ಭೂಕುಸಿತ ಆಗುತ್ತಿರುವ ಈ ಸಂದರ್ಭದಲ್ಲಿ ಇಂಥ ಹೋರಾಟ ಸೂಕ್ತವೂ ಅಲ್ಲ ಎಂದಿರುವ ಅವರು, ದೇವೇಗೌಡರ ಕುಟುಂಬಕ್ಕೆ ವಿಷವಿಕ್ಕಿದ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ? ಎಂದು ಪ್ರೀತಂಗೌಡ ಅವರ ಉಪಸ್ಥಿತಿ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ದೆಹಲಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ವಿರೋಧಿಸಿ ಪಾದಯಾತ್ರೆ ಮಾಡುವ ಬದಲು ಕಾನೂನು ಹೋರಾಟ ಮಾಡಬೇಕು. ಇದರಲ್ಲಿ ನಮಗೆ ರಾಜಕೀಯ ಮಾಡುವ ಉದ್ದೇಶವಿಲ್ಲ. ಬಿಜೆಪಿ ಪಾದಯಾತ್ರೆಗೆ ನಾವು ನೈತಿಕ ಬೆಂಬಲವನ್ನೂ ನೀಡುವುದಿಲ್ಲ. ಬಿಜೆಪಿ ನಾಯಕರು ಪಾದಯಾತ್ರೆಗೆ ಸಿದ್ಧತೆ ಮಾಡಿಕೊಂಡ ನಂತರ ನಮಗೂ ಮಾಹಿತಿ ಇರಲಿ ಎಂದು ಹೇಳಿದ್ದಾರಷ್ಟೆ. ಬೆಂಗಳೂರಿನಿಂದ ಮೈಸೂರುವರೆಗೂ ಶಕ್ತಿ ಇರುವ ನಮ್ಮನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಬೆಂಬಲ ಯಾಕೆ ಕೊಡಬೇಕು? ಈ ವಿಚಾರದಲ್ಲಿ ನನ್ನ ಮನಸ್ಸಿಗೆ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದು ಸೂಕ್ತ ಸಮಯ ಅಲ್ಲ:

ಬಿಜೆಪಿ ನಾಯಕರು ಮುಡಾ ಹಗರಣ ವಿರೋಧಿಸಿ ಪಾದಯಾತ್ರೆಗೆ ಸಿದ್ಧತೆ ಮಾಡುತ್ತಿದ್ದಾರೆ. ಆದರೆ ಪಾದಯಾತ್ರೆ ಮಾಡಲು ಇದು ಸೂಕ್ತ ಸಂದರ್ಭವಲ್ಲ. ರಾಜ್ಯದಲ್ಲಿ ಮಳೆ, ನೆರೆ, ಭೂ ಕುಸಿತ, ಬೆಳೆನಾಶವಾಗಿದ್ದು, ಜನ ಸಂಕಷ್ಟದ್ದಲ್ಲಿದ್ದಾರೆ. ಅಲ್ಲದೆ, ಬಿಡದಿಯಿಂದ ಮೈಸೂರುವರೆಗೆ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಈ ಪರಿಸ್ಥಿತಿಯಲ್ಲಿ ಪಾದಯಾತ್ರೆ ಮಾಡಿದರೆ ಟೀಕೆಗಳು ಬರುತ್ತವೆ. ಹಾಗಾಗಿ ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ ಎಂದು ವಿವರಿಸಿದರು.ಕೋರ್‌ ಕಮಿಟಿಯಲ್ಲಿ ವಿಸ್ತೃತ ಚರ್ಚೆ:

ಮೈಸೂರು ಪಾದಯಾತ್ರೆಯಲ್ಲಿ ಜೆಡಿಎಸ್ ನಾಯಕರು ದೂರವುಳಿಯುವ ಸಂಬಂಧ ಮಾಜಿ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯ ಕೋರ್ ಕಮಿಟಿ ಸಭೆ ಬೆಂಗಳೂರಿನಲ್ಲಿ ಮಂಗಳವಾರ ತೀರ್ಮಾನ ಕೈಗೊಂಡಿದೆ. ಈ ಬಗ್ಗೆ ಸಭೆಯಲ್ಲಿ ನಾಯಕರು ವಿಸ್ತೃತವಾಗಿ ಚರ್ಚಿಸಿದ್ದಾರೆ. ಎಲ್ಲರ ಅಭಿಪ್ರಾಯವೂ ಪಾದಯಾತ್ರೆ ಸದ್ಯಕ್ಕೆ ಬೇಡ, ಸ್ವಲ್ಪ ದಿನದ ನಂತರ ಮಾಡೋಣ ಎನ್ನುವುದೇ ಆಗಿದೆ. ಕೊಡಗು ಜಿಲ್ಲೆ ಪಕ್ಕದಲ್ಲಿರುವ ಕೇರಳದ ವಯನಾಡಿನಲ್ಲಿ ಭೂ ಕುಸಿತವಾಗಿ ನೂರಾರು ಜನ ಮೃತಪಟ್ಟಿದ್ದು, ಅನೇಕರು ಕಣ್ಮರೆಯಾಗಿದ್ದಾರೆ. ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಇದೆ. ಇಂಥ ಪರಿಸ್ಥಿತಿಯಲ್ಲಿ ಪಾದಯಾತ್ರೆ ಬೇಡ ಎನ್ನುವುದು ಜೆಡಿಎಸ್ ಅಭಿಪ್ರಾಯ ಎಂದು ಕುಮಾರಸ್ವಾಮಿ ಅವರು ತಿಳಿಸಿದರು. ಪ್ರೀತಂ ಗೌಡ ವಿರುದ್ಧ ಕಿಡಿ:

ಕಾಂಗ್ರೆಸ್ ವಿರುದ್ಧದ ಮೈಸೂರುವರೆಗಿನ ಪಾದಯಾತ್ರೆಯ ಪೂರ್ವಭಾವಿ ಸಭೆಗೆ ಹಾಸನ ಮಾಜಿ ಶಾಸಕ ಪ್ರೀತಂಗೌಡ ಆಗಮಿಸಿದ್ದಕ್ಕೆ ಈ ಸಂದರ್ಭದಲ್ಲಿ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರೀತಂಗೌಡ ಯಾರು? ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬಕ್ಕೆ ವಿಷವಿಟ್ಟು ನಾಶ ಮಾಡಲು ಹೊರಟವನನ್ನು ಕೂರಿಸಿಕೊಂಡು ನನ್ನನ್ನು ಸಭೆಗೆ ಕರೆಯುತ್ತೀರಾ? ಹಾಸನದ ಹಾದಿಬೀದಿಯಲ್ಲಿ ಪೆನ್‌ಡ್ರೈವ್‌ಗಳನ್ನು ಹಂಚಿದವರು ಯಾರೆಂದು ಗೊತ್ತಿದೆ. ಅಂಥ ವ್ಯಕ್ತಿ ಜತೆಗೆ ನಾನು ಕೂರಲು ಸಾಧ್ಯವೇ ಇಲ್ಲ. ಚುನಾವಣೆ ಮೈತ್ರಿಯೇ ಬೇರೆ, ರಾಜಕೀಯವೇ ಬೇರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.ಈ ವೇಳೆ ಕೋಲಾರ ಸಂಸದ ಮಲ್ಲೇಶ್ ಬಾಬು, ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟ ಶಿವಾರೆಡ್ಡಿ ಇದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸ್ಟಾರ್‌ವಾರ್‌ ರೀತಿ ಲೇಸರ್‌ ಅಸ್ತ್ರ ರಾಜ್ಯದಲ್ಲಿ ಅಭಿವೃದ್ಧಿ!
ಗೌರಿ ಲಂಕೇಶ್‌ ಹತ್ಯೆ ಆರೋಪಿ ಮಹಾರಾಷ್ಟ್ರ ಪಾಲಿಕೆ ಚುನಾವಣೆಗೆ