ತ್ರಿಶೂರ್: ಶಾಲೆ- ಕಾಲೇಜುಗಳಲ್ಲಿ ಮೊದಲ ಬೆಂಚ್‌ನಲ್ಲಿ ಕುಳಿತುಕೊಳ್ಳುವವರು ಬುದ್ಧಿವಂತರು, ಕೊನೆಯ ಬೆಂಚ್‌ನಲ್ಲಿ ಕುಳಿತುಕೊಳ್ಳುವವರು ಶಿಕ್ಷಣದಲ್ಲಿ ಹಿಂದುಳಿದವರು ಹಾಗೂ ತರಲೆಗಳು ಎಂಬ ಭಾವನೆ ಬಹಳ ಹಿಂದಿನಿಂದಲೂ ಬೇರೂರಿಬಿಟ್ಟಿದೆ. ಕಲಿಕೆಯಲ್ಲಿ ಹಿಂದೆ ಬಿದ್ದವರನ್ನು ಲಾಸ್ಟ್ ಬೆಂಚರ್ಸ್ ಎಂದು ಹೀಯಾಳಿಸುವುದೂ ಉಂಟು. ಇದೀಗ ಕೇರಳ ಅಂತಹ ಅಪಮಾನಕ್ಕೇ ಅಂತ್ಯ ಹಾಡಲು ಮುಂದಾಗಿದೆ. ಕೇರಳದ ಹಲವು ಶಾಲೆಗಳಲ್ಲಿ ಈಗ ‘ಲಾಸ್ಟ್ ಬೆಂಚ್’ ಇಲ್ಲ!
ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಗೊಳಿಸುವ ಸಲುವಾಗಿ ಇಲ್ಲಿನ ಹಲವು ಶಾಲೆಗಳ ತರಗತಿಗಳಲ್ಲಿ ಬೆಂಚುಗಳ ವಿನ್ಯಾಸವನ್ನೇ ಬದಲಿಸಲಾಗಿದೆ. ಸಾಮಾನ್ಯವಾಗಿ ಸಾಲಲ್ಲಿ ಒಂದರ ಹಿಂದೊಂದು ಇರುತ್ತಿದ್ದ ಡೆಸ್ಕ್‌ಗಳನ್ನೀಗ ಶಿಕ್ಷಕರ ಸುತ್ತ ಅರ್ಧವೃತ್ತಾಕಾರದಲ್ಲಿ ಜೋಡಿಸಲಾಗುತ್ತಿದೆ. ಈ ಮೂಲಕ ‘ಲಾಸ್ಟ್ ಬೆಂಚರ್ಸ್’ ಎಂಬ ಟೀಕೆಗೆ ಕಡಿವಾಣ ಹಾಕಿ ಸಮಾನ ಅವಕಾಶದ ಶಿಕ್ಷಣದತ್ತ ಗಮನ ಹರಿಸಲು ಉದ್ದೇಶಿಸಲಾಗಿದೆ.
ಕಳೆದ ವರ್ಷ ಬಿಡುಗಡೆಯಾದ ‘ಸ್ಥಾನಾರ್ಥಿ ಶ್ರೀಕುಟ್ಟನ್’ ಮಲಯಾಳ ಸಿನಿಮಾದಲ್ಲಿ ಈ ಮಾದರಿಯನ್ನು ತೋರಿಸಲಾಗಿತ್ತು. ಈಗ ಶಾಲೆಗಳು ಆ ಸಿನಿಮಾದಿಂದ ಸ್ಫೂರ್ತಿ ಪಡೆದು ಸ್ವಯಂಪ್ರೇರಿತವಾಗಿ ಇದನ್ನೇ ಅಳವಡಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ತ್ರಿಶ್ಶೂರಿನ ವಡಕ್ಕಂಚೇರಿ ಪೂರ್ವ ಮಾಂಗಾಡ್‌ನಲ್ಲಿರುವ ಆರ್‌ಸಿಸಿ ಎಲ್‌ಪಿ ಸೇರಿದಂತೆ ರಾಜ್ಯದ ಕೆಲವು ಶಾಲೆಯಲ್ಲಿ ಈಗಾಗಲೇ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.
ಈ ವ್ಯವಸ್ಥೆಯ ಬಗ್ಗೆ ಮಾತನಾಡಿದ ಕೇರಳ ಸಾಮಾನ್ಯ ಶಿಕ್ಷಣ ನಿರ್ದೇಶಕ ಎಸ್. ಶನವಾಸ್, ‘ತರಗತಿಯ ಗಾತ್ರ ಮತ್ತು ವಿದ್ಯಾರ್ಥಿಗಳ ಸಂಖ್ಯೆಯಂತಹ ಅಂಶಗಳನ್ನು ಅಧ್ಯಯನ ಮಾಡಿದ ಬಳಿಕ ಈ ವಿಧಾನವನ್ನು ವ್ಯಾಪಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.
ಲಾಭವೇನು?:
ಈ ವ್ಯವಸ್ಥೆಯಲ್ಲಿ ಮೊದಲ ಬೆಂಚ್, ಕೊನೆಯ ಬೆಂಚ್ ಎಂದ ತಾರತಮ್ಯ ಇರುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಪಾಠದ ಕಡೆ ಗಮನ ಹರಿಸಬಹುದು. ಮಾತ್ರವಲ್ಲದೆ, ಎಲ್ಲಾ ವಿದ್ಯಾರ್ಥಿಗಳ ಮೇಲೆ ಏಕಕಾಲದಲ್ಲಿ ಕಣ್ಣಿಡಲು ಹಾಗೂ ಎಲ್ಲರಿಗೂ ಸಮಾನ ಆದ್ಯತೆ ಕೊಡಲು ಶಿಕ್ಷಕರಿಗೂ ಸುಲಭವಾಗುತ್ತದೆ. ಕೊನೆಯ ಬೆಂಚಲ್ಲಿ ಕುಳಿತು ಮಕ್ಕಳು ಮಾಡುವ ಕಿತಾಪತಿಯಿಂದಲೂ ಮುಕ್ತಿ ಸಿಗುತ್ತದೆ.
ಕುತ್ತಿಗೆ ನೋವು ಬರುತ್ತೆ- ಟೀಕೆ:
ಆದರೆ ಹೊಸ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವೂ ಆಗುತ್ತದೆ. ಕಪ್ಪು ಹಲಗೆಯನ್ನು ಅವರು ನೇರವಾಗಿ ನೋಡಲು ಆಗದೇ ಕತ್ತು ತಿರುಗಿಸಿ ನೋಡಬೇಕಾಗುತ್ತದೆ. ಇದು ಕತ್ತು ನೋವಿಗೆ ಕಾರಣ ಆಗಬಹುದು ಎಂಬ ಆಕ್ಷೇಪಗಳೂ ಕೇಳಿಬಂದಿವೆ.