ಸಾರಾಂಶ
ಜೈಪುರ: ಅನಾರೋಗ್ಯ ಕಾರಣ ನೀಡಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದ ಜಗದೀಪ್ ಧನಕರ್ ಅವರು ಮಾಜಿ ಶಾಸಕ ಕೋಟಾದಡಿ ತಮಗೆ ಸಿಗಬೇಕಿರುವ ಪಿಂಚಣಿ ನೀಡುವಂತೆ ಕೋರಿ ರಾಜಸ್ಥಾನದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.
ಧನಕರ್ ಅವರು ಈ ಹಿಂದೆ ಕಿಶನ್‌ಗಢ ಕ್ಷೇತ್ರದಿಂದ 1993 ರಿಂದ 1998ರ ತನಕ ಕಾಂಗ್ರೆಸ್ ಶಾಸಕರಾಗಿದ್ದರು. ಆ ಬಳಿಕ 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳುವ ತನಕ ಪಿಂಚಣಿ ಪಡೆಯುತ್ತಿದ್ದರು. ನಂತರ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮತ್ತೆ ಪಿಂಚಣಿ ಪುನಾರಂಭಿಸುವಂತೆ ಕೋರಿ ರಾಜಸ್ಥಾನ ವಿಧಾನಸಭಾ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.ಸಚಿವಾಲಯವು ಈ ಪ್ರಕ್ರಿಯೆ ಪ್ರಾರಂಭಿಸಿದ್ದು, ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಅಂಗೀಕರಿಸಲ್ಪಟ್ಟ ದಿನದಿಂದ ಪಿಂಚಣಿ ಅನ್ವಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜಸ್ಥಾನದಲ್ಲಿ ಒಮ್ಮೆ ಶಾಸಕರಾದವರಿಗೆ ತಿಂಗಳಿಗೆ 35,000 ರು. ಪಿಂಚಣಿ ಸಿಗಲಿದೆ. ಆ ಬಳಿಕ 70 ವರ್ಷ ಮೇಲ್ಪಟ್ಟವರಿಗೆ ಶೇ.20ರಷ್ಟು ವೇತನ ಹೆಚ್ಚಳವಾಗುತ್ತದೆ. ಈಗ ಧನಕರ್ ಅವರಿಗೆ 74 ವರ್ಷ ಆಗಿರುವುದರಿಂದ ಆ ಪ್ರಕಾರ ತಿಂಗಳಿಗೆ 42 ಸಾವಿರ ರು. ಪಡೆಯಲಿದ್ದಾರೆ.
ಬೆಲ್ಜಿಯಂನಲ್ಲಿ ವಂಚಕ ಮೆಹುಲ್ ಚೋಕ್ಸಿ ಜಾಮೀನು ಅರ್ಜಿ ವಜಾ
ನವದೆಹಲಿ: 6300 ಕೋಟಿ ರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ, ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯ ಜಾಮೀನು ಅರ್ಜಿಯನ್ನು ಬೆಲ್ಜಿಯಂನ ಮೇಲ್ಮನವಿ ನ್ಯಾಯಾಲಯ ಮತ್ತೆ ತಿರಸ್ಕರಿಸಿದೆ. ಗಡೀಪಾರು ವಿಚಾರಣೆ ಆರಂಭವಾಗುವ ಮುನ್ನವೇ ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ.ಚೋಕ್ಸಿ ಈಗಾಗಲೇ ಬೆಲ್ಜಿಯಂ ಜೈಲಲ್ಲಿದ್ದಾನೆ. ಜಾಮೀನು ಸಿಕ್ಕರೆ ಬೇರೆ ದೇಶಕ್ಕೆ ಪಲಾಯನ ಮಾಡುವ ಸಾಧ್ಯತೆ ಇದೆ ಎಂದು ಸಿಬಿಐ ಬೆಲ್ಜಿಯಂ ಪ್ರಾಸಿಕ್ಯೂಷನ್‌ಗೆ ಬಲವಾದ ಕಾರಣ ನೀಡಿತ್ತು. ಇದರ ಆಧಾರದ ಮೇಲೆ ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿದೆ.
ವಿವಾದಿತ ಧರ್ಮಗುರು ಅಸಾರಾಂ ಬಾಪು ಮತ್ತೆ ಜೈಲು ಪಾಲು
ಜೋಧಪುರ : ಬಾಲಕಿ ಮೇಲೆ ಅತ್ಯಾ*ರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿವಾದಿತ ಧರ್ಮಗುರು ಅಸಾರಾಂ ಬಾಪು ಮತ್ತೆ ಜೈಲು ಸೇರಿದ್ದಾರೆ. ಇವರಿಗೆ ನೀಡಿದ್ದ ಜಾಮೀನು ಮುಂದುವರೆಸಲು ಹೈಕೋರ್ಟ್ ನಿರಾಕರಿಸಿದಕ್ಕಾಗಿ ಮತ್ತೆ ಜೈಲಿಗೆ ಬಂದಿದ್ದಾರೆ.
12 ವರ್ಷಗಳಿಂದ ಜೈಲಿನಲ್ಲಿದ್ದ ಅಸಾರಾಂ ಅವರಿಗೆ ಜ.7ರಂದು ಆರೋಗ್ಯದ ದೃಷ್ಟಿಯಿಂದ ಜಾಮೀನು ಮಂಜೂರಾಗಿತ್ತು. ಇದರ ಅವಧಿಯು ಮುಕ್ತಾಯಗೊಂಡ ಕಾರಣ, ಅದನ್ನು ವಿಸ್ತರಿಸಬೇಕು ಎಂದು ಅಸಾರಾಂ ಪರ ವಕೀಲರು ಹೈಕೋರ್ಟ್‌ನಲ್ಲಿ ಆ.27ರಂದು ವಾದಿಸಿದ್ದರು. ಆದರೆ ಇವರ ವಾದವನ್ನು ತಿರಸ್ಕರಿಸಿದ ಪೀಠ, ‘ವೈದ್ಯರ ವರದಿಯಲ್ಲಿ ಅಸಾರಾಂ ಅವರ ಆರೋಗ್ಯ ಸರಿಯಿದೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಜಾಮೀನು ವಿಸ್ತರಣೆ ಅಸಾಧ್ಯ’ ಎಂದಿದೆ. ಹೀಗಾಗಿ ಶನಿವಾರ ಬಾಪು ಮತ್ತೆ ಜೈಲು ಸೇರಿದ್ದಾರೆ.
ಮಹುವಾ ಚಾರಿತ್ರ್ಯದ ಬಗ್ಗೆ ಅಶ್ಲೀಲ ನುಡಿ: ಬಿಧೂರಿ ವಿವಾದ
ನವದೆಹಲಿ: ಅಕ್ರಮ ನುಸುಳುಕೋರರನ್ನು ತಡೆಗಟ್ಟದೇ ಇದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತಲೆ ಕತ್ತರಿಸಬೇಕು ಎಂದು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ನೀಡಿದ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಬಿಜೆಪಿ ವಿವಾದಿತ ಮುಖಂಡ ರಮೇಶ್ ಬಿಧೂರಿ ಅಶ್ಲೀಲ ಕಮೆಂಟ್ ಮಾಡಿದ್ದಾರೆ ಹಾಗೂ ಬಳಿಕ ಅದನ್ನು ಟ್ವೀಟರ್‌ನಿಂದ ಡಿಲೀಟ್ ಮಾಡಿದ್ದಾರೆ.‘ಅಮಿತ್ ಶಾ ಬಗ್ಗೆ ಹೇಳಿಕೆ ನೀಡಿರುವ ಮಹುವಾ ಚಾರಿತ್ರ್ಯ ಏನೆಂದು ಎಲ್ಲರಿಗೂ ಗೊತ್ತು. ಆಕೆಯೊಬ್ಬ ಛಿ***’ ಎಂದು ಬಿಧೂರಿ ಅಶ್ಲೀಲ ಕಮೆಂಟ್ ಮಾಡಿದ್ದರು. ಅವರ ಪದಬಳಕೆ ಬಗ್ಗೆ ವಿವಾದ ಉಂಟಾದ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.ಇದನ್ನು ಟಿಎಂಸಿ ಪ್ರಶ್ನಿಸಿದ್ದು, ‘ಅವರನ್ನು ಶಿಕ್ಷಿಸಲು ಧೈರ್ಯ ಮಾಡುತ್ತದೆಯೇ?’ ಎಂದು ಪ್ರಶ್ನಿಸಿದೆ.
ಈ ಹಿಂದೆಯೂ ಬಿಧೂರಿ ಅನೇಕ ವಿವಾದಿತ ಹೇಳಿಕೆಗಳನ್ನು ನೀಡಿದ್ದರು. ಹೀಗಾಗಿ ಅವರಿಗೆ ಬಿಜೆಪಿ ದಿಲ್ಲಿ ಲೋಕಸಭಾ ಟಿಕೆಟ್ ನೀಡಿರಲಿಲ್ಲ.