ನವದೆಹಲಿ: ಯುದ್ಧದ ಆತಂಕದ ಈ ಸಂದರ್ಭದಲ್ಲಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್‌ಗಾಗಲಿ ಅಥವಾ ಗ್ಯಾಸ್‌ಗಾಗಲಿ ಯಾವುದೇ ಕೊರತೆ ಇಲ್ಲ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ ಸಾಕಷ್ಟು ದಾಸ್ತಾನು ಇದೆ ಎಂದು ಭಾರತದ ತೈಲ ಸಂಸ್ಥೆಗಳು ಸ್ಪಷ್ಟೀಕರಣ ನೀಡಿವೆ.
ಭಾರತ-ಪಾಕ್ ನಡುವೆ ಯುದ್ಧದ ಕಾರ್ಮೋಡ ಮನೆಮಾಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಕೊರತೆಯಾಗಬಹುದೆಂದು ಕೆಲವರಲ್ಲಿ ಆತಂಕಕ್ಕೊಳಗಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿ ನಂಬಿ ಜನ ಭಯಭೀತರಾಗಿ ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲು ನಿಂತ ಘಟನೆಗಳು ವರದಿಯಾಗಿತ್ತು. ವಿಶೇಷವಾಗಿ ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌ನ ಕೆಲಕಡೆ ಇಂಥ ದೃಶ್ಯಗಳು ಕಂಡುಬಂದಿದ್ದವು.
ಈ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಇಂಡಿಯನ್ ಆಯಿಲ್ ಕಾರ್ಪೊರೆಷನ್(ಐಒಸಿ) ಮತ್ತು ಭಾರತ್ ಪೆಟ್ರೋಲಿಯಂ ಲಿಮಿಟೆಡ್(ಬಿಪಿಸಿಎಲ್) ಯಾರೂ ಆತಂಕಪಡಬೇಕಿಲ್ಲ ಎಂದು ತಿಳಿಸಿದೆ.
ಆಹಾರ ಸಾಮಗ್ರಿ ಅಕ್ರಮ ದಾಸ್ತಾನು: ವ್ಯಾಪಾರಿಗಳಿಗೆ ಸಚಿವ ಜೋಶಿ ಎಚ್ಚರಿಕೆ
ನವದೆಹಲಿ: ಭಾರತ-ಪಾಕಿಸ್ತಾನದ ನಡುವೆ ಯುದ್ಧದಂತಹ ಸ್ಥಿತಿ ನಿರ್ಮಾಣವಾಗಿರುವ ಹೊತ್ತಿನಲ್ಲಿ, ಜನ ಹಾಗೂ ವ್ಯಾಪಾರಿಗಳು ಅಗತ್ಯ ಆಹಾರ ಸಾಮಾಗ್ರಿಗಳನ್ನು ಅಕ್ರಮವಾಗಿ ಕೂಡಿಟ್ಟುಕೊಳ್ಳುತ್ತಿದ್ದಾರೆ. ಇದನ್ನು ಅನಗತ್ಯ ಎಂದಿರುವ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ, ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.‘ದೇಶದ ಆಹಾರ ದಾಸ್ತಾನು ಬಗೆಗಿನ ಸುದ್ದಿಗಳನ್ನು ನಂಬಬೇಡಿ.
ನಮ್ಮಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಆಹಾರ ಸಂಗ್ರಹವಿದೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಚಿವ ಜೋಶಿ, ‘ಅಗತ್ಯ ವಸ್ತುಗಳ ವ್ಯಾಪಾರದಲ್ಲಿ ತೊಡಗಿರುವ, ಸಗಟು, ಚಿಲ್ಲರೆ ವ್ಯಾಪಾರಿಗಳು ಅಥವಾ ವ್ಯಾಪಾರ ಸಂಸ್ಥೆಗಳು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸಿ. ಆಹಾರ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಡಿ. ಹೀಗೆ ಮಾಡಿದಲ್ಲಿ, ಅಗತ್ಯ ಸರಕುಗಳ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಯುದ್ಧಕಾಲದಲ್ಲಿ ನಿರಂತರ ಸೇವೆ : ಬ್ಯಾಂಕ್‌ಗಳಿಗೆ ನಿರ್ಮಲಾ ಸೂಚನೆ
ನವದೆಹಲಿ: ಭಾರತ- ಪಾಕಿಸ್ತಾನ ಸಂಘರ್ಷ ಹಿನ್ನೆಲೆಯಲ್ಲಿ ‘ಸವಾಲಿನ ಸಂದರ್ಭದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಎಲ್ಲಾ ಬ್ಯಾಂಕುಗಳು ಗ್ರಾಹಕರಿಗೆ ನಿರಂತರ ಸೇವೆ ನೀಡಬೇಕು’ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದ್ದಾರೆ.ಸೈಬರ್ ಭದ್ರತೆಯ ಕುರಿತು ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳ ಸಿಇಒಗಳ ಜೊತೆಗೆ ನಡೆಸಿದ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಈ ಸೂಚನೆ ನೀಡಿದ್ದಾರೆ.
ಸವಾಲಿನ ಸಂದರ್ಭದಲ್ಲಿ ಆರ್ಥಿಕತ ಸ್ಥಿರತೆ ಕಾಪಾಡಿಕೊಳ್ಳಬೇಕು ಎಂದಿರುವ ಅವರು ‘ಭದ್ರತಾ ಸಂಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸುವ ಮೂಲಕ ಬ್ಯಾಂಕುಗಳು ತಮ್ಮ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಯೂ ನಾಗರಿಕರಿಗೆ ಮತ್ತು ವ್ಯವಹಾರಗಳಿಗೆ ತೊಂದರೆಯಾಗದಂತೆ ಬ್ಯಾಂಕುಗಳು ಗಮನವಹಿಸಬೇಕು. ಎಟಿಎಂಗಳಲ್ಲಿ ನಗದು ಲಭ್ಯತೆ ಇರಬೇಕು . ಯುಪಿಐ, ಇಂಟರ್ನೆಟ್ ಬ್ಯಾಕಿಂಗ್ ಸೇವೆಗಳು ಮತ್ತು ಅಗತ್ಯ ಬ್ಯಾಂಕಿಂಗ್ ಸೇವೆಗಳಿಗೆ ಯಾವುದೇ ಅಡೆತಡೆ ಇರಬಾರದು’ ಎಂದಿದ್ದಾರೆ.
2 ದಿನ ಎಟಿಎಂ ಬಂದ್ ಎಂಬುದು ಸುಳ್ಳು: ಸರ್ಕಾರ
ನವದೆಹಲಿ: ಭಾರತ-ಪಾಕ್ ಯುದ್ಧದ ಕಾರಣ ಭಾರತದಲ್ಲಿ ಇನ್ನು 2-3 ದಿನ ಎಲ್ಲಾ ಎಟಿಎಂಗಳು ಮುಚ್ಚಲಿವೆ. ಈಗಲೇ ಜನರು ದುಡ್ಡು ತೆಗೆದಿರಿಸಿಕೊಳ್ಳಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಆದರೆ ಇವೆಲ್ಲ ಸುಳ್ಳು ಎಂದು ಭಾರತ ಸರ್ಕಾರದ ಮಾಹಿತಿ ವಿಭಾಗ (ಪಿಐಬಿ) ಸ್ಪಷ್ಟಪಡಿಸಿದೆ.ಅತ್ತ, ಪಾಕಿಸ್ತಾನದಲ್ಲಿ ಎಟಿಎಂಗಳಿಂದ ಹಣ ತೆಗೆಯಲು 3,000 ರು. ಮಿತಿ ಹೇರಲಾಗಿದೆ ಎಂದೂ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು, ಇದು ಧೃಡಪಟ್ಟಿಲ್ಲ.