ಜಾತ್ಯತೀತತೆ ಭಾರತದ ಸಂಸ್ಕೃತಿಯ ಮೂಲ ಅಲ್ಲ : ಕೇಂದ್ರ ಸಚಿವ ಚೌಹಾಣ್‌

KannadaprabhaNewsNetwork |  
Published : Jun 29, 2025, 01:33 AM ISTUpdated : Jun 29, 2025, 04:34 AM IST
Shivraj Singh Chouhan

ಸಾರಾಂಶ

ಸಂವಿಧಾನದ ಪೀಠಿಕೆ ಬದಲಾವಣೆ ಕುರಿತ ಆರ್‌ಎಸ್‌ಎಸ್‌ ಹಿರಿಯ ನಾಯಕ ದತ್ತಾತ್ರೇಯ ಹೊಸಬಾಳೆ ನೀಡಿದ್ದ ಹೇಳಿಕೆಯನ್ನು ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಸಮರ್ಥಿಸಿಕೊಂಡಿದ್ದಾರೆ.

ನವದೆಹಲಿ: ಸಂವಿಧಾನದ ಪೀಠಿಕೆ ಬದಲಾವಣೆ ಕುರಿತ ಆರ್‌ಎಸ್‌ಎಸ್‌ ಹಿರಿಯ ನಾಯಕ ದತ್ತಾತ್ರೇಯ ಹೊಸಬಾಳೆ ನೀಡಿದ್ದ ಹೇಳಿಕೆಯನ್ನು ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ‘ಭಾರತದಲ್ಲಿ ಸಮಾಜವಾದದ ಅಗತ್ಯವಿಲ್ಲ. ಜಾತ್ಯತೀತತೆ ನಮ್ಮ ಸಂಸ್ಕೃತಿಯ ಮೂಲವಲ್ಲ’ ಎಂದು ಚೌಹಾಣ್ ಹೇಳಿದ್ದಾರೆ.

ವಾರಾಣಸಿಯಲ್ಲಿ ನಡೆದ ಸಂವಿಧಾನ ಹತ್ಯಾ ದಿನ ಕಾರ್ಯಕ್ರಮದಲ್ಲಿ ತುರ್ತುಪರಿಸ್ಥಿತಿ ಸ್ಮರಿಸಿದ ಸಚಿವರು, ‘ತುರ್ತುಸ್ಥಿತಿ ಹೇರಿಕೆಯು ದೇಶದ ಭದ್ರತೆಗೆ ಹೊರಗಿಂದ ಅಥವಾ ಆಂತರಿಕವಾಗಿ ಬೆದರಿಕೆ ಉಂಟಾದಾಗ. ಆದರೆ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಧಾನಿ ಇಂದಿರಾ ಗಾಂಧಿ, ಸಚಿವ ಸಂಪುಟ ಸಭೆಯನ್ನೂ ಕರೆಯದೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು’ ಎಂದು ಟೀಕಿಸಿದ್ದಾರೆ.

ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುತ್ತಾ, ‘ತುರ್ತುಸ್ಥಿತಿ ಹೇರಿಕೆಯಾದಾಗ 16 ವರ್ಷದವನಾಗಿದ್ದ ನನ್ನನ್ನೂ ಜೈಲಿಗಟ್ಟಲಾಗಿತ್ತು. ತುರ್ಕ್‌ಮನ್‌ ಗೇಟ್‌ ಬಳಿಯ ಮನೆಗಳನ್ನು ಧ್ವಂಸಗೊಳಿಸಿ, ಜನರ ಮೇಲೆ ಬುಲ್ಡೋಜರ್‌ ಹತ್ತಿಸಲಾಯಿತು. ಪ್ರತಿಭಟಿಸಿದವರಿಗೆ ಗುಂಡಿಕ್ಕಲಾಯಿತು. ಹೀಗೆ ಸಂವಿಧಾನವನ್ನು ಹತ್ಯೆ ಮಾಡಲಾಯಿತು. ಕಾಂಗ್ರೆಸ್‌ ಸಂವಿಧಾನದ ಹಂತಕ’ ಎಂದರು.

ಅತ್ತ ಈ ಬಗ್ಗೆ ಮಾತನಾಡಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌, ‘ಸಂವಿಧಾನದ ಪೀಠಿಕೆ ಬದಲಾವಣೆ ಸಾಧ್ಯವಿಲ್ಲ. ಪೀಠಿಕೆಯು ಬೀಜವಾಗಿದ್ದು, ಅದರ ಮೇಲೆಯೇ ಸಂವಿಧಾನ ಬೆಳೆಯುತ್ತದೆ’ ಎಂದು ಹೇಳಿದ್ದಾರೆ. ಜತೆಗೆ, ಭಾರತದಲ್ಲಿ ಬಿಟ್ಟರೆ ಬೇರೆ ಯಾವ ಸಂವಿಧಾನದ ಪೀಠಿಕೆಯೂ ಬದಲಾಗಿಲ್ಲ ಎಂದು ನೆನಪಿಸಿದ್ದಾರೆ.

‘1976ರಲ್ಲಿ 42ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಸಮಾಜವಾದಿ, ಜಾತ್ಯತೀತ, ಮತ್ತು ಸಮಗ್ರ ಎಂಬ ಪದಗಳನ್ನು ಸೇರಿಸಲಾಗಿತ್ತು. ಅದರ ಬಗ್ಗೆ ಚಿಂತನೆ ನಡೆಸಬೇಕಿದೆ. ಅಂಬೇಡ್ಕರ್ ಅವರು ಸಂವಿಧಾನದ ಮೇಲೆ ಶ್ರಮವಹಿಸಿ ಕೆಲಸ ಮಾಡಿದರು, ಹೀಗಿರುವಾಗ ಅವರು ಖಂಡಿತವಾಗಿಯೂ ಅದರ ಮೇಲೆ ಗಮನಹರಿಸಿರಬೇಕು’ ಎಂದು ಅವರು ಹೇಳಿದರು.

ಮುಂದುವರೆದ ವಿಪಕ್ಷಗಳ ವಾಗ್ದಾಳಿ:

ಉತ್ತರಪ್ರದೇಶದ ಕಾಂಗ್ರೆಸ್‌ ಮುಖ್ಯಸ್ಥ ಅಜಯ್‌ ರಾಯ್‌ ಮಾತನಾಡಿ, ‘ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂಬುದನ್ನು ಇಂತಹ ಹೇಳಿಕೆಗಳು ದೃಢಪಡಿಸುತ್ತವೆ. ಈ ದೇಶ ಎಲ್ಲರಿಗೂ ಸೇರಿದ್ದು. ಕಾಂಗ್ರೆಸ್‌ ಸಂವಿಧಾನವನ್ನು ರಕ್ಷಿಸುತ್ತದೆ’ ಎಂದರು.

ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಜೇಂದ್ರ ಚೌಧರಿ, ‘ಇಂತಹ ಹೇಳಿಕೆಗಳು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ ಎಂಬುದನ್ನು ತೋರಿಸುತ್ತವೆ. ಅವು ಸಂವಿಧಾನವನ್ನು ದುರ್ಬಲಗೊಳಿಸಲು ಯತ್ನಿಸುತ್ತಿವೆ’ ಎಂದು ಕಿಡಿ ಕಾರಿದರು.

ಬಿಜೆಪಿಯಿಂದ ತಿರುಗೇಟು:

‘ಬಿಜೆಪಿಗೆ ಸಂವಿಧಾನವೇ ಬೇಡ’ ಎಂಬ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿರುವ ಬಿಜೆಪಿ, ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಸಂವಿಧಾನದ ಉಪಯೋಗದ ಬಗ್ಗೆ ಎತ್ತಿದ್ದ ಪ್ರಶ್ನೆಯನ್ನು ಹಾಗೂ ಅದಕ್ಕೆ ಮಾಡಲಾದ ಬದಲಾವಣೆಯನ್ನು ನೆನಪಿಸಿದೆ.

‘ಕಾಂಗ್ರೆಸ್‌ ತುರ್ತುಸ್ಥಿತಿ ವೇಳೆ ಜನರ ಮೇಲೆ ನಡೆಸಿದ್ದ ದೌರ್ಜನ್ಯದ ಕಡೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯದೆ, ಅದಕ್ಕೆ ಕ್ಷಮೆ ಯಾಚಿಸಬೇಕು’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಆಗ್ರಹಿಸಿದ್ದಾರೆ. ಜತೆಗೆ, ಸಂವಿಧಾನಕ್ಕೆ ಬದಲಾವಣೆ ಮಾಡುವ ಬಗ್ಗೆ ಇಂದಿರಾ ಆಡಿದ ಮಾತುಗಳನ್ನು ಅವರು ಉಲ್ಲೇಖಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ