ಎನ್‌ಸಿಇಆರ್‌ಟಿ ಪುಸ್ತಕದಲ್ಲಿ ಬಾಬ್ರಿ ಹೆಸರು ಮಾಯ!

KannadaprabhaNewsNetwork |  
Published : Jun 17, 2024, 01:30 AM ISTUpdated : Jun 17, 2024, 05:14 AM IST
ಬಾಬ್ರಿ ಮಸೀದಿ | Kannada Prabha

ಸಾರಾಂಶ

ಎನ್‌ಸಿಇಆರ್‌ಟಿ ಪಠ್ಯಕ್ರಮದ 11, 12ನೇ ತರಗತಿಯ ರಾಜಕೀಯ ವಿಜ್ಞಾನ ಮತ್ತು ಇತರೆ ಕೆಲ ಪರಿಷ್ಕೃತ ಪುಸ್ತಕಗಳು ಬಿಡುಗಡೆಯಾಗಿದ್ದು, ಅದರಲ್ಲಿನ ಕೆಲ ಬದಲಾವಣೆಗಳು ಭಾರೀ ಚರ್ಚೆಗೆ ಕಾರಣವಾಗಿದೆ.

ನವದೆಹಲಿ: ಎನ್‌ಸಿಇಆರ್‌ಟಿ ಪಠ್ಯಕ್ರಮದ 11, 12ನೇ ತರಗತಿಯ ರಾಜಕೀಯ ವಿಜ್ಞಾನ ಮತ್ತು ಇತರೆ ಕೆಲ ಪರಿಷ್ಕೃತ ಪುಸ್ತಕಗಳು ಬಿಡುಗಡೆಯಾಗಿದ್ದು, ಅದರಲ್ಲಿನ ಕೆಲ ಬದಲಾವಣೆಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಪುಸ್ತಕದಲ್ಲಿ ಈ ಹಿಂದೆ ಇದ್ದ ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಇದೀಗ, ಕೇವಲ ಮೂರು ಗೋಪುರಗಳ ಕಟ್ಟಡ ಎಂದು ಪ್ರಸ್ತಾಪಿಸಲಾಗಿದ್ದು ‘ಬಾಬ್ರಿ ಮಸೀದಿ’ ಎಂಬ ಹೆಸರನ್ನು ಕೈಬಿಡಲಾಗಿದೆ.

ಇದು ಪಠ್ಯಕ್ರಮದ ಕೇಸರೀಕರಣ ಎಂದು ಒಂದು ವರ್ಗ ಕಿಡಿಕಾರಿದೆ. ಆದರೆ ಇದು ಕೇಸರೀಕರಣವಲ್ಲ. ಮಕ್ಕಳಿಗೆ ಶಾಲಾ ಪಠ್ಯದಲ್ಲಿ ದಂಗೆ, ಧ್ವಂಸದ ಕುರಿತು ಪಾಠ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್‌ ಪ್ರಸಾದ್‌ ಸಕ್ಲಾನಿ ಸ್ಪಷ್ಟಪಡಿಸಿದ್ದಾರೆ.ಏನು ಬದಲಾವಣೆ?:

12ನೇ ತರಗತಿಯ ಈ ಹಿಂದಿನ ಪಠ್ಯದಲ್ಲಿ ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸ ಕುರಿತು 4 ಪುಟಗಳಷ್ಟು ವಿಸ್ತೃತ ಮಾಹಿತಿ ಇತ್ತು. ಅದು, ಬಾಬ್ರಿ ಮಸೀದಿ ಧ್ವಂಸ. ಭಾರತದ ರಾಜಕೀಯ, ರಾಷ್ಟ್ರೀಯತೆ ಮತ್ತು ಜಾತ್ಯತೀತತೆ ಮೇಲೆ ಧ್ವಂಸದ ಪರಿಣಾಮ; ಹಿಂದುತ್ವ ಎಂಬೆಲ್ಲಾ ಅಂಶಗಳನ್ನು ಒಳಗೊಂಡಿತ್ತು.ಆದರೆ ಹೊಸ ಪಠ್ಯದಲ್ಲಿ ಅಯೋಧ್ಯೆ ಕುರಿತ ಪಠ್ಯ 2 ಪುಟಕ್ಕೆ ಇಳಿದಿದೆ. 

ಜೊತೆಗೆ ಬಾಬ್ರಿ ಮಸೀದಿ ಎಂಬ ಹೆಸರು ಬಿಟ್ಟು ಮೂರು ಗೋಪುರಗಳ ಕಟ್ಟಡ ಎಂದು ಬರೆಯಲಾಗಿದೆ. ಜೊತೆಗೆ, ‘ರಾಮಜನ್ಮಭೂಮಿ ಕುರಿತ ದಶಕಗಳ ಕಾನೂನು ಮತ್ತು ರಾಜಕೀಯ ವಿವಾದವು, ಭಾರತೀಯ ರಾಜಕೀಯದ ಮೇಲೆ ಪರಿಣಾಮ ಬೀರಿದೆ. ಜೊತೆಗೆ ಅದು 2019ರ ನ.9ರ ಸುಪ್ರೀಂಕೋರ್ಟ್‌ ತೀರ್ಪಿನ ಅನ್ವಯ ರಾಮಮಂದಿರ ನಿರ್ಮಾಣದೊಂದಿಗೆ ಅಂತ್ಯಗೊಂಡಿದೆ’ ಎಂದು ಬರೆಯಲಾಗಿದೆ. 

ಅಲ್ಲದೆ ‘ಹಿಂದುತ್ವ’ ಎಂಬ ಪದ ಕೈಬಿಡಲಾಗಿದೆ.ಇನ್ನು 11ನೇ ತರಗತಿಯ ರಾಜಕೀಯ ಸಿದ್ಧಾಂತದ ಪುಸ್ತಕದಲ್ಲಿ, 2002ರ ಗುಜರಾತ್ ದಂಗೆ ಕುರಿತ ಪಠ್ಯದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ.ಈ ಹಿಂದಿನ ಪುಸ್ತಕದಲ್ಲಿ ಗೋಧ್ರಾ ದಂಗೆ ವೇಳೆ 1000 ಜನರು, ಈ ಪೈಕಿ ಹೆಚ್ಚಿನ ಮುಸ್ಲಿಮರು ಸಾವಿಗೀಡಾದರು ಎಂದು ಪ್ರಸ್ತಾಪಿಸಲಾಗಿತ್ತು. ಹೊಸ ಪುಸ್ತಕದಲ್ಲಿ, 1000 ಜನರು ಸಾವನ್ನಪ್ಪಿದ್ದಾರೆ. ಯಾವುದೇ ದಂಗೆ ಸಮಾಜದಲ್ಲಿನ ಎಲ್ಲಾ ಸಮುದಾಯದ ಜನರು ಸಂಕಷ್ಟ ಎದುರಿಸುವಂತೆ ಮಾಡುತ್ತದೆ’ ಎಂದು ಬರೆಯಲಾಗಿದೆ.

ಇನ್ನೊಂದು ಪಠ್ಯದಲ್ಲಿ ಈ ಹಿಂದೆ ‘ಬಹುಸಂಖ್ಯಾತ ಸಮುದಾಯದ ಕೋಮುವಾದವು ರಾಷ್ಟ್ರೀಯ ಐಕ್ಯತೆಗೆ ಅಪಾಯಕಾರಿ’ ಎಂಬ ಪ್ರಧಾನಿ ನೆಹರು ಅವರ ಟೀಕೆಯನ್ನು ಒಳಗೊಂಡಿದ್ದರೆ, ಹೊಸ ಪುಸ್ತಕದಲ್ಲಿ ‘ಕೋಮುವಾದ ರಾಷ್ಟ್ರೀಯ ಐಕ್ಯತೆಗೆ ಅಪಾಯಕಾರಿ’ ಎಂದು ಪರಿಷ್ಕೃರಿಸಲಾಗಿದೆ. ಇನ್ನೊಂದು ಪಠ್ಯದಲ್ಲಿ, ‘ಈ ಹಿಂದೆ ಎಡಪಂಥೀಯ ಎಂದರೆ ಬಡವರ ಪರ ಇರುವವರು ಮತ್ತು ಬಡವರ ಪರವಾದ ಸರ್ಕಾರದ ನೀತಿ ಬಯಸುವವರು’ ಎಂದಿತ್ತು. ಅದನ್ನು ಇದೀಗ ಎಡಪಂಥೀಯ ಎಂದರೆ‘ ಮುಕ್ತ ಅರ್ಥಿಕತೆ ಬದಲಾಗಿ ಆರ್ಥಿಕತೆ ಮೇಲೆ ಸರ್ಕಾರದ ನಿಯಂತ್ರಣ ಬಯಸುವವರು’ ಎಂದು ಉಲ್ಲೇಖಿಸಲಾಗಿದೆ.ಎನ್‌ಸಿಇಆರ್‌ಟಿ ಸ್ಪಷ್ಟನೆ:

ಈ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿರುವ ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್‌ ಪ್ರಸಾದ್‌ ಸಕ್ಲಾನಿ, ‘ಇದು ಪ್ರತಿ ವರ್ಷ ಮಾಡುವ ಪರಿಷ್ಕರಣೆ ಅನ್ವಯ ಆದ ಬದಲಾವಣೆ. ಇದರ ಬಗ್ಗೆ ಅಪಸ್ವರ ಬೇಕಿಲ್ಲ. ಅಷ್ಟಕ್ಕೂ ನಾವು ಮಕ್ಕಳಿಗೆ ಶಾಲೆಯಲ್ಲಿ ದಂಗೆ, ಧ್ವಂಸದಂಥ ವಿಷಯಗಳನ್ನು ಏಕೆ ಬೋಧಿಸಬೇಕು? ನಾವು ಸಮಾಜದಲ್ಲಿ ಧನಾತ್ಮಕ ಪ್ರಜೆಗಳನ್ನು ಸೃಷ್ಟಿಸಲು ಬಯಸುತ್ತೇವೆಯೇ ಹೊರತೂ ಹಿಂಸಾತ್ಮಕ ಅಥವಾ ಮನಶ್ಯಾಂತಿ ಕಳೆದುಕೊಂಡ ಪ್ರಜೆಗಳನ್ನಲ್ಲ’ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ