ನವದೆಹಲಿ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಮಮಂದಿರ ಚಳವಳಿಯನ್ನು ಮಾತ್ರ ಬೆಂಬಲಿಸಿತು. ಹಾಗೆಂದು ಮತ್ತೆ ಇಂಥ ಯಾವುದೇ ಆಂದೋಲನವನ್ನು ನಾವು ಬೆಂಬಲಿಸುವುದಿಲ್ಲ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಸಂಘಟನೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಲ್ಲಿನ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ 3 ದಿನಗಳ ಕಾರ್ಯಕ್ರಮದ ಅಂತಿಮ ದಿನವಾದ ಗುರುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಭಾಗವತ್, ‘ಕಾಶಿ- ಮಥುರಾ ದೇಗುಲಗಳ ಮರುವಶ ಸೇರಿದಂತೆ ಮತ್ಯಾವುದೇ ಅಭಿಯಾನವನ್ನು ನಾವು ಬೆಂಬಲಿಸುವುದಿಲ್ಲ. ಆದರೆ ನಮ್ಮ ಸ್ವಯಂಸೇವಕರಿಗೆ ಯಾವುದೇ ನಿರ್ಬಂಧ ಇಲ್ಲ. ಕಾರ್ಯಕರ್ತರು ಅಂಥ ಹೋರಾಟಗಳನ್ನು ಬೆಂಬಲಿಸಬಹುದು’ ಎಂದು ಹೇಳಿದರು.
ಆರೆಸ್ಸೆಸ್ ಅಯೋಧ್ಯೆ ರಾಮಮಂದಿರದ ಪುನಃಸ್ಥಾಪನೆಯನ್ನು ಬೆಂಬಲಿಸಿದ್ದಷ್ಟೇ ಅಲ್ಲದೆ, ಅದರ ಮುಖ್ಯಸ್ಥ ಭಾಗವತ್ ದೇವಸ್ಥಾನದ ಪ್ರಾಣಪ್ರತಿಷ್ಠೆಯಲ್ಲೂ ಭಾಗವಹಿಸಿದ್ದರು.