ಪ್ರಸಕ್ತ ಸಾಲಿನ ನೊಬೆಲ್‌ ಪ್ರಶಸ್ತಿಗಳ ಘೋಷಣೆ : ಮೈಕ್ರೋ ಆರ್‌ಎನ್‌ಎ ಸಂಶೋಧಿಸಿದ ಇಬ್ಬರಿಗೆ ವೈದ್ಯಕೀಯ ನೊಬೆಲ್‌

KannadaprabhaNewsNetwork |  
Published : Oct 08, 2024, 01:09 AM ISTUpdated : Oct 08, 2024, 04:34 AM IST
RG Kar Hospital investigation

ಸಾರಾಂಶ

ಪ್ರಸಕ್ತ ಸಾಲಿನ ನೊಬೆಲ್‌ ಪ್ರಶಸ್ತಿಗಳ ಘೋಷಣೆಗೆ ಸೋಮವಾರ ಚಾಲನೆ ಸಿಕ್ಕಿದ್ದು, ಅಮೆರಿಕದ ವಿಕ್ಟರ್‌ ಆ್ಯಂಬ್ರೋಸ್‌ ಮತ್ತು ಗ್ಯಾರಿ ರುವ್ಕುನ್‌ ಅವರಿಗೆ ವೈದ್ಯಕೀಯ ನೊಬೆಲ್‌ ಪುರಸ್ಕಾರ ಘೋಷಿಸಲಾಗಿದೆ.

ಸ್ಟಾಕ್‌ಹೋಮ್‌: ಪ್ರಸಕ್ತ ಸಾಲಿನ ನೊಬೆಲ್‌ ಪ್ರಶಸ್ತಿಗಳ ಘೋಷಣೆಗೆ ಸೋಮವಾರ ಚಾಲನೆ ಸಿಕ್ಕಿದ್ದು, ಅಮೆರಿಕದ ವಿಕ್ಟರ್‌ ಆ್ಯಂಬ್ರೋಸ್‌ ಮತ್ತು ಗ್ಯಾರಿ ರುವ್ಕುನ್‌ ಅವರಿಗೆ ವೈದ್ಯಕೀಯ ನೊಬೆಲ್‌ ಪುರಸ್ಕಾರ ಘೋಷಿಸಲಾಗಿದೆ. ಮೈಕ್ರೋ ಆರ್‌ಎನ್‌ಎಗಳ ಸಂಶೋಧನೆ ಮಾಡಿದ್ದಕ್ಕಾಗಿ ಇಬ್ಬರಿಗೂ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಆಯ್ಕೆ ಸಮಿತಿ ಹೇಳಿದೆ.ಪ್ರಶಸ್ತಿ 84 ಲಕ್ಷ ರು. ನಗದು ಮತ್ತು ಪಾರಿತೋಷಕ ಹೊಂದಿದೆ.

ಇವರ ಸಂಶೋಧನೆ ಕ್ಯಾನ್ಸರ್‌ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಹೊಸ ರೀತಿಯಲ್ಲಿ ಚಿಕಿತ್ಸೆ ನೀಡಲು ವೈದ್ಯಕೀಯ ಸಮುದಾಯಕ್ಕೆ ಅನುವು ಮಾಡಿಕೊಟ್ಟಿತ್ತು.

ವಿಶೇಷವೆಂದರೆ ಕಳೆದ ವರ್ಷದ ವೈದ್ಯಕೀಯ ನೊಬೆಲ್‌ ಎಂಆರ್‌ಎನ್‌ಎ ಸಂಶೋಧನೆ ಮಾಡಿದ್ದಕ್ಕಾಗಿ ಹಂಗೇರಿಯ ಕ್ಯಾಟಲಿನ್‌ ಕರಿಕೋ ಮತ್ತು ಅಮೆರಿಕದ ಡ್ಯ್ರೂ ವೆಸ್ಸಿಮನ್‌ ಅವರಿಗೆ ನೀಡಲಾಗಿತ್ತು. ಇದರ ಆಧಾರದಲ್ಲೇ ಕೋವಿಡ್‌ ಲಸಿಕೆ ಕೂಡಾ ತಯಾರಾಗಿತ್ತು.

ಮೈಕ್ರೋ ಆರ್‌ಎನ್‌ಎ:

ಮೈಕ್ರೋ ಆರ್‌ಎನ್‌ಎಗಳು ಅತ್ಯಂತ ಸಣ್ಣ ಕಣಗಳಾಗಿದ್ದು, ಜೀನ್‌ (ವಂಶವಾಹಿ)ಗಳ ಕಣಗಳ ಮಟ್ಟದಲ್ಲಿ ಯಾವ ಸಂದರ್ಭದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ನಿಯಂತ್ರಿಸುತ್ತವೆ. ಹೀಗಾಗಿಯೇ ದೇಹದ ಎಲ್ಲಾ ಭಾಗಗಳಲ್ಲಿ ಒಂದೇ ರೀತಿಯ ಜೀನ್‌ಗಳು, ಜೀವಕೋಶಗಳು ಇದ್ದರೂ ಅವುಗಳ ಕಾರ್ಯನಿರ್ವಹಣೆ ಮಾತ್ರ ಬೇರೆ ಬೇರೆ ಆಗಿರುತ್ತದೆ. ಇಂಥ ಮೈಕ್ರೋ ಆರ್‌ಎನ್‌ಎಗಳನ್ನು ವಿಕ್ಟರ್‌ ಆ್ಯಂಬೋಸ್‌, ಗ್ಯಾರಿ ರುವ್ಕುನ್‌ ಸಂಶೋಧಿಸಿದ್ದರು.

ಮಹತ್ವ ಏನು?:

ಈ ಇಬ್ಬರ ಸಂಶೋಧನೆ ಜೀವಿಗಳು ಹೇಗೆ ಅಭಿವೃದ್ಧಿ ಹೊಂದುತ್ತವೆ ಮತ್ತು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಖಚಿತ ನಿಲುವಿಗೆ ಬರಲು ಅನುವು ಮಾಡಿಕೊಟ್ಟಿತ್ತು. ಜೊತೆಗೆ ಜೀನ್‌ಗಳ ಕಾರ್ಯನಿರ್ವಹಣೆ ಕುರಿತು ಪೂರ್ಣ ಹೊಸ ತತ್ವವನ್ನು ವಿಜ್ಞಾನ ಲೋಕದ ಮುಂದಿಟ್ಟಿತ್ತು. ಪರಿಣಾಮ ಕ್ಯಾನ್ಸರ್‌ ಸೇರಿದಂತೆ ವಿವಿಧ ರೋಗಗಳಿಗೆ ಹೊಸ ಹೊಸ ಮಾರ್ಗಗಳ ಮೂಲಕ ಚಿಕಿತ್ಸಾ ವಿಧಾನ ಅಭಿವೃದ್ಧಿಪಡಿಸಲು ನೆರವಾಗಿತ್ತು.

ಇನ್ನೂ 5 ನೊಬೆಲ್‌ ಪ್ರಶಸ್ತಿ ಪ್ರಕಟ

ಮಂಗಳವಾರ ಭೌತಶಾಸ್ತ್ರ, ಬುಧವಾರ ರಸಾಯನ ಶಾಸ್ತ್ರ, ಗುರುವಾರ ಸಾಹಿತ್ಯ, ಶುಕ್ರವಾರ ಶಾಂತಿ ಮತ್ತು ಅ.14ರ ಸೋಮವಾರ ಅರ್ಥಶಾಸ್ತ್ರ ನೊಬೆಲ್‌ ಪುರಸ್ಕಾರಗಳು ಪ್ರಕಟಗೊಳ್ಳಲಿವೆ. ಡಿ.10ರಂದು ನಡೆವ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ವಿತರಿಸಲಾಗುವುದು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ