ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಶನಿವಾರ ಎರಡು ಹೊಸ ಸೌಲಭ್ಯಗಳನ್ನು ಬಿಡುಗಡೆ ಮಾಡಿದ್ದು, ಇದು ಅದರ 7.6 ಕೋಟಿ ಸದಸ್ಯರಿಗೆ ಅನುಕೂಲ ಮಾಡಿಕೊಡಲಿದೆ. ಈ ಹೊಸ ಸೌಲಭ್ಯದಿಂದಾಗಿ ಇನ್ನು ಮುಂದೆ ಸದಸ್ಯರು ತಮ್ಮ ಹೆಸರು, ಹುಟ್ಟಿದ ದಿನಾಂಕದಂಥ ವೈಯಕ್ತಿಕ ಮಾಹಿತಿಯನ್ನು ಕಂಪನಿಯ ಅಥವಾ ಇಪಿಎಫ್‌ಒದ ಒಪ್ಪಿಗೆಯಿಲ್ಲದೆ ಬದಲಾಯಿಸಬಹುದಾಗಿದೆ.
ಕೆಲಸ ಮಾಡುವ ಸಂಸ್ಥೆಯ ಅಥವಾ ಇಪಿಎಫ್‌ಒದ ಅನುಮತಿಯೂ ಬೇಕಿಲ್ಲ ಎಂದು ಈ ಎರಡು ಸೇವೆಗಳನ್ನು ಲೋಕಾರ್ಪಣೆ ಮಾಡಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್‌ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಇಪಿಎಫ್‌ಒ ಸದಸ್ಯರು ಪ್ರತಿಬಾರಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಬದಲಾವಣೆ ಮಾಡಬೇಕೆಂದಾಗ ಸುದೀರ್ಘ ಪ್ರಕ್ರಿಯೆಯನ್ನು ದಾಟಬೇಕಿತ್ತು. ಇದೀಗ ಮಾಡಲಾದ ಬದಲಾವಣೆಗಳಿಂದಾಗಿ ನೌಕರರು ಇಪಿಎಫ್‌ಒನ ಡಿಜಿಟಲ್ ಫ್ಲ್ಯಾಟ್‌ಫಾರಂನಲ್ಲೇ ಸುಲಭವಾಗಿ ತಿದ್ದಬಹುದಾಗಿದೆ ಎಂದು ಸಚಿವ ಹೇಳಿದರು.ಇಪಿಎಫ್‌ಒಗೆ ಸಂಬಂಧಿಸಿದ ಶೇ.27ರಷ್ಟು ದೂರುಗಳು ಸದಸ್ಯರ ಪ್ರೊಫೆಲ್ ಮತ್ತು ಕೆವೈಸಿ ವಿಚಾರಗಳಿಗೆ ಸಂಬಂಧಿಸಿದ್ದೇ ಆಗಿತ್ತು. ಈ ಹೊಸ ಸೇವೆಗಳ ಜಾರಿಯಿಂದಾಗಿ ಇನ್ನು ಆ ದೂರುಗಳು ಕಡಿಮೆಯಾಗಲಿವೆ. ಇದರಿಂದ ಉದ್ಯೋಗದಾತರಿಗೂ ಅನಗತ್ಯ ಕಿರಿಕಿರಿ ತಪ್ಪಿ, ಅನುಕೂಲ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2017, ಅ.1ರ ನಂತರ ಯುಎಎನ್ ಸಂಖ್ಯೆ ಯಾರಿಗೆಲ್ಲ ನೀಡಲಾಗಿದೆಯೋ ಅವರಿಗೆಲ್ಲ ಈ ವ್ಯವಸ್ಥೆಯ ಅನುಕೂಲ ದೊರಕಲಿದೆ. ಆಧಾರ್‌ನೊಂದಿಗೆ ಯುಎಎನ್ ಲಿಂಕ್ ಆಗಿರದಿದ್ದರೆ ಯಾವುದೇ ತಿದ್ದುಪಡಿ ಭೌತಿಕವಾಗಿ ಉದ್ಯೋಗದಾತರಿಗೆ ವರ್ಗಾವಣೆಯಾಗಲಿದ್ದು, ಪರಿಶೀಲನೆ ಬಳಿಕ ಇಪಿಎಫ್‌ಒ ಒಪ್ಪಿಗೆಗೆ ಕಳುಹಿಸಿಕೊಡಲಾಗುತ್ತದೆ.