ನರ್ಸಿಂಗ್ ಕ್ಷೇತ್ರ ಕೇವಲ ರೋಗಿಗಳ ಸೇವೆಗಷ್ಟೇ ಸೀಮಿತವಾಗಿಲ್ಲ. ಅದು ನಿರಂತರವಾಗಿ ಜ್ಞಾನವನ್ನು ಅನ್ವೇಷಿಸುವ ಮತ್ತು ರೋಗಿಗಳ ಆರೈಕೆಯನ್ನು ಉತ್ತಮಗೊಳಿಸುವ ಒಂದು ವೈಜ್ಞಾನಿಕ ಕ್ಷೇತ್ರವಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಮಾಜಿ ಕುಲಪತಿ ಹಾಗೂ ಎಸ್ಎಂಸಿಆರ್ಐ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್. ಸಚ್ಚಿದಾನಂದ ಅಭಿಪ್ರಾಯಪಟ್ಟರು
ಕನ್ನಡಪ್ರಭ ವಾರ್ತೆ ತುಮಕೂರು
ನರ್ಸಿಂಗ್ ಕ್ಷೇತ್ರ ಕೇವಲ ರೋಗಿಗಳ ಸೇವೆಗಷ್ಟೇ ಸೀಮಿತವಾಗಿಲ್ಲ. ಅದು ನಿರಂತರವಾಗಿ ಜ್ಞಾನವನ್ನು ಅನ್ವೇಷಿಸುವ ಮತ್ತು ರೋಗಿಗಳ ಆರೈಕೆಯನ್ನು ಉತ್ತಮಗೊಳಿಸುವ ಒಂದು ವೈಜ್ಞಾನಿಕ ಕ್ಷೇತ್ರವಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಮಾಜಿ ಕುಲಪತಿ ಹಾಗೂ ಎಸ್ಎಂಸಿಆರ್ಐ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್. ಸಚ್ಚಿದಾನಂದ ಅಭಿಪ್ರಾಯಪಟ್ಟರು
ನಗರದ ಎಸ್ಐಟಿ ಕಾಲೇಜಿನ ಬಿರ್ಲಾ ಆಡಿಟೋರಿಯಂನಲ್ಲಿ ಶ್ರೀ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ನರ್ಸಿಂಗ್ ಸಂಶೋಧನಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಜಗತ್ತಿನಲ್ಲಿ ವೈದ್ಯರು ರೋಗಕ್ಕೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದರೆ, ದಾದಿಯರು ರೋಗಿಯ ಪಕ್ಕದಲ್ಲೇ ಇದ್ದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸತತವಾಗಿ ಗಮನಿಸುತ್ತಾರೆ. ತುರ್ತು ಸಂದರ್ಭಗಳಲ್ಲಿ, ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ಮತ್ತು ಶಸ್ತ್ರಚಿಕಿತ್ಸೆಗಳ ವೇಳೆ ದಾದಿಯರ ಸೇವೆ ಅನಿವಾರ್ಯವಾದುದು ಎಂದ ಅವರು, ನರ್ಸಿಂಗ್ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಸಂಶೋಧನೆಗಳು ನಡೆಯುವ ಅಗತ್ಯವಿದೆ ಎಂದು ತಿಳಿಸಿದರು.
ಸಂಶೋಧನೆಯಿಂದ ದೊರೆತ ಫಲಿತಾಂಶಗಳು ಆಸ್ಪತ್ರೆ ಹಾಗೂ ವಿವಿಧ ಕಾರ್ಯ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬರಬೇಕು. ಆಗ ಮಾತ್ರ ಸಂಶೋಧನೆಯ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಹೇಳಿದರು.
ನರ್ಸಿಂಗ್ ಕ್ಷೇತ್ರ ಎನ್ನುವುದು ಕರುಣೆ ಮತ್ತು ವಿಜ್ಞಾನದ ಅದ್ಭುತ ಸಂಗಮ. ದಾದಿಯರು ಅನುಭವಗಳನ್ನು ಕೇವಲ ಕೆಲಸಕ್ಕೆ ಸೀಮಿತಗೊಳಿಸದೆ, ಅವುಗಳನ್ನು ಸಂಶೋಧನಾ ಪ್ರಬಂಧಗಳಾಗಿ ಪರಿವರ್ತಿಸಬೇಕು ಎಂದು ಸಲಹೆ ನೀಡಿದರು.
ಅತ್ಯುತ್ತಮ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿದ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ಎಸ್ಐಟಿ ಸಿಇಓ ಡಾ. ಶಿವಕುಮಾರಯ್ಯ ಮಾತನಾಡಿ, ನರ್ಸಿಂಗ್ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಯ ಮಹತ್ವವನ್ನು ವಿವರಿಸಿ, ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ಸಂಶೋಧನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಶಿಕ್ಷಕರು ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಪ್ರಶ್ನೆ ಕೇಳಲು ಪ್ರೋತ್ಸಾಹಿಸುವ ಮೂಲಕ ಅವರಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.
ಸಮ್ಮೇಳನದಲ್ಲಿ ಬೆಂಗಳೂರಿನ ನಿಮ್ಹಾನ್ಸ್ ನರ್ಸಿಂಗ್ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರಾದ ಡಾ. ಬಿ.ವಿ. ಕ್ಯಾತ್ಯಾಯಿನಿ, ನಿಮ್ಹಾನ್ಸ್ ನರ್ಸಿಂಗ್ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವಿಜಯಲಕ್ಷ್ಮೀ ಪೊರೆಡ್ಡಿ, ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿಯ ಮಣಿಪಾಲ್ ನರ್ಸಿಂಗ್ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಪಿಎಚ್ಡಿ ಸಂಯೋಜಕರಾದ ಡಾ. ಬೇಬಿ ಎಸ್. ನಾಯಕ್, ರಾಜ್ಯ ನರ್ಸಿಂಗ್ ಮಂಡಳಿಯ ವೀಕ್ಷಕರಾದ ಮಲ್ಲಪ್ಪ, ಸಂಸ್ಥೆ ಪ್ರಾಂಶುಪಾಲರಾದ ಮೈತ್ರೇಯಿ ಎಚ್.ಆರ್. ಮತ್ತಿತರರು ಉಪಸ್ಥಿತರಿದ್ದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.