2029ಕ್ಕೆ ಒಂದು ದೇಶ, ಒಂದು ಚುನಾವಣೆ ಜಾರಿ?

KannadaprabhaNewsNetwork |  
Published : Feb 29, 2024, 02:07 AM ISTUpdated : Feb 29, 2024, 11:07 AM IST
Election

ಸಾರಾಂಶ

ಸಂವಿಧಾನಕ್ಕೆ ಒಂದು ದೇಶ, ಒಂದು ಚುನಾವಣೆ ಅಧ್ಯಾಯ ಸೇರ್ಪಡೆ ಮಾಡುವ ಕುರಿತು ಕಾನೂನು ಆಯೋಗದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಂಭವವಿದೆ.

ನವದೆಹಲಿ: ಒಂದು ದೇಶ, ಒಂದು ಚುನಾವಣೆ ಯೋಜನೆ ಜಾರಿ ಕುರಿತು ಪ್ರಸ್ತಾವನೆ ಸಿದ್ಧಪಡಿಸುತ್ತಿರುವ ಕೇಂದ್ರ ಕಾನೂನು ಆಯೋಗ, 2029ರಿಂದ ಇಂಥದ್ದೊಂದು ಯೋಜನೆ ಕುರಿತು ಶೀಘ್ರವೇ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ ಎನ್ನಲಾಗಿದೆ. 

ಒಂದು ವೇಳೆ ಕೇಂದ್ರ ಸರ್ಕಾರ ಈ ವರದಿ ಅಂಗೀಕರಿಸಿದಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾದ ‘ಒಂದು ದೇಶ, ಒಂದು ಚುನಾವಣೆ’ 2029ರಿಂದಲೇ ಜಾರಿಗೆ ಬರುವ ಸಾಧ್ಯತೆ ಇದೆ.

ನಿವೃತ್ತ ನ್ಯಾಯಾಧೀಶ ನ್ಯಾ। ರಿತುರಾಜ್‌ ಅವಸ್ಥಿ ನೇತೃತ್ವದ ಕಾನೂನು ಆಯೋಗ, ಒಂದು ದೇಶ, ಒಂದು ಚುನಾವಣೆ ಜಾರಿ ಸಂಬಂಧ, ಸಂವಿಧಾನಕ್ಕೆ ಹೊಸ ಅಧ್ಯಾಯವೊಂದನ್ನು ಸೇರ್ಪಡೆ ಮಾಡಿ, 2029ರಿಂದ ಯೋಜನೆ ಜಾರಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಏನೇನು ಶಿಫಾರಸು?
1. ಲೋಕಸಭೆ, ವಿಧಾನಸಭೆ, ಗ್ರಾಮಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅನುವಾಗುವಂತೆ ಸಂವಿಧಾನಕ್ಕೆ ಒಂದು ದೇಶ, ಒಂದು ಚುನಾವಣೆ ಎಂಬ ಹೊಸ ಅಧ್ಯಾಯ ಅಥವಾ ಒಂದು ಹೊಸ ಭಾಗ ಸೇರ್ಪಡೆ ಮಾಡಬೇಕು.
2. ಸಂವಿಧಾನದ ಹೊಸ ಅಧ್ಯಾಯವು ‘ಏಕಕಾಲಕ್ಕೆ ಚುನಾವಣೆ’, ‘ಏಕಕಾಲಕ್ಕೆ ಚುನಾವಣೆಯ ಸ್ಥಿರತೆ’, ಲೋಕಸಭೆ, ವಿಧಾನಸಭೆ, ಮುನ್ಸಿಪಲ್‌ ಮತ್ತು ಗ್ರಾಮಪಂಚಾಯತ್‌ಗಳಿಗೆ ಏಕರೂಪದ ಮತದಾರರ ಪಟ್ಟಿ’ ರೂಪಿಸುವ ಅಂಶಗಳನ್ನು ಒಳಗೊಂಡಿರಬೇಕು.
3. ಸಂವಿಧಾನದ ಹೊಸ ಅಧ್ಯಾಯವು, ರಾಜ್ಯಗಳ ವಿಧಾನಸಭೆಯ ಅವಧಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಇರುವ ನಿಯಮಗಳನ್ನು ಮೀರುವ ಅಂಶಗಳನ್ನು ಹೊಂದಿರಬೇಕು.
4. 2029ರಲ್ಲಿ ಒಂದು ದೇಶ, ಒಂದು ಚುನಾವಣೆ ಯೋಜನೆ ಜಾರಿಗೆ ಅನುಕೂಲವಾಗುವಂತೆ ಮಾಡಲು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಮುಂದಿನ 5 ವರ್ಷಗಳ ಅವಧಿಯಲ್ಲಿ 3 ಹಂತಗಳಲ್ಲಿ ಸಂಯೋಜಿಸಬೇಕು.
5. 3 ಹಂತಗಳಲ್ಲಿ ಮೊದಲ ಹಂತವು, ಯಾವ ರಾಜ್ಯಗಳ ಅಧಿಕಾರವನ್ನು 3-6 ತಿಂಗಳ ಅವಧಿಗೆ ಕಡಿತ ಮಾಡಬೇಕೋ ಅದಾಗಿರಬೇಕು.
6. ಒಂದು ವೇಳೆ ಅವಿಶ್ವಾಸದ ಕಾರಣ ಸರ್ಕಾರ ಪತನವಾದರೆ ಅಥವಾ ಅತಂತ್ರ ವಿಧಾನಸಭೆ ರಚನೆಯಾದರೆ ವಿವಿಧ ರಾಜಕೀಯ ಪಕ್ಷಗಳನ್ನು ಒಳಗೊಂಡ ‘ಏಕತಾ ಸರ್ಕಾರ’ ರಚಿಸಬೇಕು.
7. ಒಂದು ವೇಳೆ ಏಕತಾ ಸರ್ಕಾರದ ಸೂತ್ರ ಸಾಧ್ಯವಾಗದೇ ಹೋದರೆ ಆ ಸರ್ಕಾರದ ಉಳಿದ ಅವಧಿಗೆ ಮಾತ್ರ ಚುನಾವಣೆ ನಡೆಸಬೇಕು.

ಯಾವ ರಾಜ್ಯಗಳ ಚುನಾವಣೆ ಯಾವಾಗ?
ಈ ವರ್ಷಾಂತ್ಯಕ್ಕೆ ಮಹಾರಾಷ್ಟ್ರ ಹರ್ಯಾಣ, ಜಾರ್ಖಂಡ್‌. 2025ಕ್ಕೆ ಬಿಹಾರ, ದೆಹಲಿ. 2026ಕ್ಕೆ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ, ಕೇರಳ. 2027ಕ್ಕೆ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್‌, ಮಣಿಪುರ. 2028ಕ್ಕೆ ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್‌, ಕರ್ನಾಟಕ, ಮಿಜೋರಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ.

ಒಂದು ದೇಶ, ಒಂದು ಚುನಾವಣೆ ಏಕೆ?
ಪದೇ ಪದೇ ಚುನಾವಣೆ ತಡೆಯುವುದು, ಸಮಯ, ಸಂಪನ್ಮೂಲ ಉಳಿಕೆ.ಪದೇ ಪದೇ ಚುನಾವಣೆಯಿಂದ ಇಡೀ ದೇಶದ ಗಮನ ಅತ್ತ ಸುಳಿದು ಅಬಿವೃದ್ಧಿ ಚಟುವಟಿಕೆಗೆ ಬ್ರೇಕ್‌ ಬೀಳುತ್ತದೆ.ಚುನಾವಣಾ ಫಲಿತಾಂಶದ ನಕರಾತ್ಮಕ ಅಂಶದಿಂದ ಆರ್ಥಿಕ ಬೆಳವಣಿಗೆ ಮಾರಕ. ಸದೃಢ ಆಡಳಿತಕ್ಕೆ ಧಕ್ಕೆ.

ಪದೇ ಪದೇ ಚುನಾವಣಾ ನೀತಿ ಸಂಹಿತೆ ಜಾರಿಯಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ತಡೆಯಾಗುವುದನ್ನು ತಪ್ಪಿಸುವುದು.ಪದೇ ಪದೇ ಚುನಾವಣೆಯಿಂದ ರಾಜಕೀಯ ಭ್ರಷ್ಟಾಚಾರ ಹೆಚ್ಚಳ. ಏಕ ಚುನಾವಣೆಯಿಂದ ಸರ್ಕಾರ, ರಾಜಕೀಯ ಪಕ್ಷಗಳ ಚುನಾವಣೆ ವೆಚ್ಚ ಕಡಿತ ಮಾಡಬಹುದು.

ಪದೇ ಪದೇ ದೇಣಿಗೆ ನೀಡುವ ಹೊಣೆಯಿಂದ ಜನರೂ ತಪ್ಪಿಸಿಕೊಳ್ಳಬಹುದು.ಮತದಾರರ ಪಟ್ಟಿಯಿಂದ ಹೆಸರು ತಪ್ಪಿಹೋಗುವ ಗೊಂದಲದಿಂದ ಮತದಾರರ ಬಚಾವ್‌.ಸರ್ಕಾರಗಳಿಗೆ ನಿಗದಿತ ಅವಧಿ ಜಾರಿ ಮಾಡುವ ಕಾರಣ ಶಾಸಕರ ಕುದುರೆ ವ್ಯಾಪಾರ ತಡೆಯಬಹುದು.ಸರ್ಕಾರಗಳು ಉಚಿತ ಕೊಡುಗೆ ನೀಡುವ ಸಂಪ್ರದಾಯ ತಡೆಯಬಹುದು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಧಿಕಾರಕ್ಕಾಗಿ ಅಪವಿತ್ರ ರಾಜಕೀಯ ಮೈತ್ರಿ - ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈರಿಗಳ ಮಿಲನ
ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ ನಿಗದಿ