ಒಬ್ಬನೇ ಮತದಾರ, ಎರಡು ರಾಜ್ಯ, ಎರಡೆರಡು ಮತ!

KannadaprabhaNewsNetwork | Updated : Nov 13 2023, 01:16 AM IST

ಸಾರಾಂಶ

ಮಹಾರಾಷ್ಟ್ರ-ತೆಲಂಗಾಣ ಗಡಿಯ 14 ಹಳ್ಳಿಗಳ ಜನರಿಗೆ ‘ಡಬಲ್‌ ಭಾಗ್ಯ’. ಗಡಿ ವಿವಾದ ಬಗೆಹರಿಯದ ಕಾರಣ 3200 ಜನರಿಗೆ ಅನಪೇಕ್ಷಿತ ಸೌಲಭ್ಯ. ಎರಡೂ ರಾಜ್ಯದ ಸರ್ಕಾರಿ ಸೌಲಭ್ಯ, ಮತ ಹಕ್ಕು ಬಳಕೆ. ಸುಪ್ರೀಂ ಕೋರ್ಟ್‌ಗೆ ಹೋದರೂ ಬಗೆಹರಿಯದ ಗಡಿ ವಿವಾದ.
ಪರಂಡೋಲಿ (ತೆಲಂಗಾಣ): ತೆಲಂಗಾಣ-ಮಹಾರಾಷ್ಟ್ರ ಗಡಿಯಲ್ಲಿ 2 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 14 ಗ್ರಾಮಗಳ ಜನರು ಗಡಿ ವಿವಾದದಿಂದಾಗಿ ಎರಡೂ ರಾಜ್ಯದಿಂದ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಜೊತೆಗೆ ಎರಡೂ ರಾಜ್ಯಗಳ ಚುನಾವಣೆಗಳಲ್ಲೂ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ!

ಹೌದು. ಅಚ್ಚರಿ ಎನ್ನಿಸಿದರೂ ನಿಜ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಜೀತ್ವಿ ತಾಲೂಕಿನ ಪರಂಡೋಲಿ ಗ್ರಾಮ ಪಂಚಾಯಿತಿ ಮತ್ತು ತೆಲಂಗಾಣದ ಕುಮುರಂ ಭೀಮ್‌ ಅಸಿಫಾಬಾದ್‌ ಜಿಲ್ಲೆಯ ಕೇರಾಮೇರಿ ಮಂಡಲದ ನಡುವೆ ಒಂದು ಬೆಟ್ಟ ಹಾದುಹೋಗಿದ್ದು, ಇದರ ನಡುವೆ ಸ್ಪಷ್ಟವಾಗಿ ಗಡಿ ರೇಖೆಯನ್ನು ಗುರುತಿಸದ ಕಾರಣ ಎರಡೂ ಗ್ರಾಮ ಪಂಚಾಯಿತಿಗಳ ಸುಮಾರು 5,000 ಜನರು ಎರಡೂ ರಾಜ್ಯಗಳಿಂದ ಎಲ್ಲ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಈ 5000 ಜನರ ಪೈಕಿ ಇಲ್ಲಿ 3,023 ಮಂದಿ ಮತ ಚಲಾವಣೆ ಹಕ್ಕು ಹೊಂದಿದ್ದು, ಅನೇಕರ ಬಳಿ ಎರೆಡೆರಡು ಮತದಾರರ ಗುರುತಿನ ಚೀಟಿಗಳಿವೆ. ಪ್ರಸ್ತುತ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಆಸಿಫಾಬಾದ್‌ ಕ್ಷೇತ್ರಕ್ಕೆ ಮತ ಚಲಾಯಿಸಲು ಸಜ್ಜಾಗಿದ್ದಾರೆ. 2 ವರ್ಷ ಹಿಂದೆ ಇವರು ಮಹಾರಾಷ್ಟ್ರದ ಚಂದ್ರಾಪುರ ಕ್ಷೇತ್ರದಲ್ಲಿ ಮತ ಹಾಕಿದ್ದರು.ಇಲ್ಲಿನ ಜನರ ಬಳಿ ಎರೆಡೆರಡು ಮತದಾರರ ಗುರುತಿನ ಚೀಟಿಯ ಜೊತೆಗೆ ಎರಡೆರಡು ಪಡಿತರ ಚೀಟಿ, ನರೇಗಾ ಉದ್ಯೋಗ ಚೀಟಿ ಇದೆ. ಜೊತೆಗೆ ಇಲ್ಲಿನ ಗ್ರಾಮ ಪಂಚಾಯಿತಿಗೆ ಎರೆಡೆರಡು ಸರಪಂಚರೂ ಇದ್ದಾರೆ. ಹಾಗಾಗಿ ಇಲ್ಲಿನ ನಾಗರಿಕರು ಏಕಕಾಲದಲ್ಲಿ ಎರೆಡೆರಡು ಬಾರಿ ಪಡಿತರ ಪಡೆಯಬಹುದು. ಲೋಕಸಭಾ ಚುನಾವಣೆಯಲ್ಲಿ ಏಕಕಾಲದಲ್ಲಿ ಎರೆಡೆರಡು ಮಂದಿಗೆ ಮತ ಚಲಾಯಿಸಬಹುದು. ಆಯಾ ವಿಧಾನಸಭೆ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಆಯಾ ರಾಜ್ಯಗಳ ಅಭ್ಯರ್ಥಿಗಳಿಗೆ ಮತ ಹಾಕಬಹುದು.

ತೆಲಂಗಾಣ ಹಾಗೂ ಮಹಾರಾಷ್ಟ್ರಗಳು ಇಲ್ಲಿ ತಮ್ಮದೇ ಆದ ಪ್ರತ್ಯೇಕ ಆಸ್ಪತ್ರೆ, ಶಾಲೆ ಹಾಗೂ ಇತರ ಕಚೇರಿಗಳನ್ನು ಸ್ಥಾಪಿಸಿವೆ. ಹೀಗಾಗಿ ಸರ್ಕಾರದಿಂದ ಜಾರಿ ಮಾಡುವ ಜನಕಲ್ಯಾಣ ಯೋಜನೆಗಳನ್ನು ಎರಡೂ ರಾಜ್ಯದಿಂದ ಈ ಮಂದಿ ಬಳಸಿಕೊಳ್ಳುತ್ತಿದ್ದಾರೆ.

ಇಲ್ಲಿ ಪ್ರಮುಖವಾಗಿ ಶೇ.80ರಷ್ಟು ಜನರು ಮರಾಠಿ ಭಾಷೆ ಮಾತನಾಡುವ ಪರಿಶಿಷ್ಟ ಜಾತಿಗೆ ಸೇರಿದ ಜನರಿದ್ದು, ಇವರ ಜೊತೆಗೆ ಮುಸ್ಲಿಮರು ಹಾಗೂ ಲಂಬಾಣಿ ಬುಡಕಟ್ಟು ಜನಾಂಗದವರೂ ವಾಸಿಸುತ್ತಿದ್ದಾರೆ.ಇಷ್ಟೆಲ್ಲ ಸೌಲಭ್ಯವಿದ್ದರೂ ತೃಪ್ತರಾಗದ ಈ ಗ್ರಾಮದ ಮೊದಲ ಸರ್‌ಪಂಚ್‌ ಲಕ್ಷ್ಮಣ ಕಾಂಬ್ಳಿ, ‘ಈ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಮರೀಚಿಕೆಯಾಗಿದೆ. ಇಲ್ಲಿಗೆ ರಾಜಕಾರಣಿಗಳು ಬಂದು ಪ್ರಚಾರ ಮಾಡುತ್ತಾರೆಯೇ ವಿನಃ ಯಾವುದೇ ಸೌಲಭ್ಯ ಕಲ್ಪಿಸುವುದಿಲ್ಲ. ಭೂಮಿಗೆ ಪಟ್ಟಾ ನೀಡುತ್ತಿಲ್ಲ. ಆದರೆ ನಮಗೆ ಸಿಕ್ಕಿರುವ ಸೌಲಭ್ಯಗಳಲ್ಲಿ ಮಹಾರಾಷ್ಟ್ರ ರಾಜ್ಯಕ್ಕಿಂತ ತೆಲಂಗಾಣ ರಾಜ್ಯದ ಪಾಲು ಅಧಿಕವಾಗಿದೆ’ ಎಂದು ತಿಳಿಸಿದ್ದಾರೆ.

---

ಎರಡೆರಡು ಮತದ ಹಕ್ಕು ಹೇಗೆ?1956ರಲ್ಲಿ ಭಾಷಾವಾರು ರಾಜ್ಯ ರಚನೆ ಆದಾಗಿನಿಂದಲೂ ಆಂಧ್ರಪ್ರದೇಶ-ತೆಲಂಗಾಣ (ಅಂದಿನ ಆಂಧ್ರಪ್ರದೇಶ) ಗಡಿ ಬಿಕ್ಕಟ್ಟು ಅಸ್ತಿತ್ವದಲ್ಲಿದೆ. 1989ರಲ್ಲಿ ಕ್ಷೇತ್ರಗಳ ಪುನರ್‌ವಿಂಗಡಣೆ ಆದಾಗ ಈ ವಿಚಾರ ಮತ್ತಷ್ಟು ಜಟಿಲವಾಯಿತು. 1989ರಲ್ಲಿ ಆಂಧ್ರಪ್ರದೇಶ ಸರ್ಕಾರ ಈ ಗ್ರಾಮಗಳಿಗೆ ಆಗಮಿಸಿ ಮತಗಟ್ಟೆಗಳನ್ನು ಸ್ಥಾಪಿಸಿತು. 1999ರಲ್ಲಿ ಈ 14 ಗ್ರಾಮಗಳು ಆಂಧ್ರಕ್ಕೆ ಸೇರಿವೆ ಎಂದು ಆಂಧ್ರಪ್ರದೇಶ ಹೈಕೋರ್ಟ್‌ ತೀರ್ಪು ನೀಡಿತು. ಇದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಯಿತು. ಈ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಈಗ ಮಹಾರಾಷ್ಟ್ರ-ತೆಲಂಗಾಣದ ನಡುವೆ ಕೋರ್ಟಲ್ಲಿ ಸಂಘರ್ಷ ನಡೆದಿದೆ.

ಈ ನಡುವೆ, ಆಂಧ್ರವು 1989ರಲ್ಲಿ ತನ್ನದೇ ಮತಗಟ್ಟೆ ಸ್ಥಾಪಿಸಿದ ಬಳಿಕ ಮತದಾರರಿಗೆ ಎರಡೂ ರಾಜ್ಯಗಳ ಪ್ರತ್ಯೇಕ ಗುರುತು ಚೀಟಿ ವಿತರಣೆ ಆಯಿತು. ಇದರ ನಡುವೆ ಚುನಾವಣಾ ಆಯೋಗವು 2 ರಾಜ್ಯಗಳ ನಡುವೆ ಒಂದೇ ರಾಜ್ಯದ ಮತಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂದು ಮತದಾರರಿಗೆ ಸೂಚಿಸಿತು. ಆದರೆ ಅದು ಫಲ ನೀಡಿಲ್ಲ. ಹಲವರು ಒಂದು ರಾಜ್ಯ ಆಯ್ಕೆ ಮಾಡಿಕೊಂಡರೆ, ಇನ್ನು ಕೆಲವರು ಎರಡೂ ರಾಜ್ಯಗಳ ಮತದಾರ ಗುರುತು ಚೀಟಿ ಇಟ್ಟುಕೊಂಡಿದ್ದು, ಎರಡೂ ಕಡೆಗಳಲ್ಲಿ ಮತ ಹಾಕುತ್ತಿದ್ದಾರೆ. ಮತದಾರ ಗುರುತು ಚೀಟಿಗೆ ಆಧಾರ್ ಲಿಂಕ್‌ ಕಡ್ಡಾಯವಲ್ಲ. ಹೀಗಾಗಿ ಎರಡು ಪ್ರತ್ಯೇಕ ವೋಟರ್‌ ಐಡಿ ಹೊಂದಿದ್ದರೂ ಇವರಿಗೆ ಯಾವುದೇ ಸಮಸ್ಯೆ ಇಲ್ಲ.

‘ನಮಗೆ ಒಂದು ದೇಶ ಒಂದು ಚುನಾವಣೆ ಇಷ್ಟವಿಲ್ಲ. ಎರಡೂ ರಾಜ್ಯಗಳಲ್ಲಿ ಮತದ ಹಕ್ಕು ಬೇಕು. ಉಭಯ ದೇಶಗಳ ಸವಲತ್ತು ಬೇಕು’ ಎನ್ನುತ್ತಾರೆ ಪರಂಡೋಲಿಯ ಮತದಾರರೊಬ್ಬರು.

Share this article