ಅಯೋಧ್ಯೆ: ಜ.22ರಂದು ನಡೆಯಲಿರುವ ಅಯೋಧ್ಯೆಯ ರಾಮಮಂದಿರದ ರಾಮನ ವಿಗ್ರಹ ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ಮಂಗಳವಾರದಿಂದ ಧಾರ್ಮಿಕ ವಿಧಿ ವಿಧಾನಗಳು ಅಯೋಧ್ಯೆಯಲ್ಲಿ ಪ್ರಾರಂಭವಾಗಲಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಸಂಜೆ ಮಾತನಾಡಿದ ಅವರು, ‘ಜ.16 ರಿಂದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿ ಜ.21 ರವರೆಗೆ ನಡೆಯಲಿವೆ. ಜನವರಿ 22 ರಂದು ‘ಪ್ರಾಣ ಪ್ರತಿಷ್ಠಾ’ ಸಮಾರಂಭ ನಡೆಯಲಿದೆ.
3 ಶಿಲ್ಪಿಗಳು ಕೆತ್ತಿದ್ದ ವಿಗ್ರಹಗಳ ಪೈಕಿ ಮೈಸೂರಿನ ಅರುಣ್ ಯೋಗಿರಾಜ್ ನಿರ್ಮಿಸಿದ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ‘ಪ್ರಾಣ ಪ್ರತಿಷ್ಠಾ’ ಮಾಡಲಾಗುವ ವಿಗ್ರಹವು ಸುಮಾರು 150-200 ಕೆ.ಜಿ.ಗಳಷ್ಟು ಭಾರ ಇರಬಹುದೆಂದು ನಿರೀಕ್ಷಿಸಲಾಗಿದೆ.
ಜ.18 ರಂದು ದೇವಸ್ಥಾನದ ಗರ್ಭ ಗೃಹದಲ್ಲಿ ವಿಗ್ರಹವನ್ನು ಅದರ ಸ್ಥಾನದಲ್ಲಿ ಇರಿಸಲಾಗುತ್ತದೆ’ ಎಂದರು.‘ಜ.22ರಂದು ನಡೆಯಲಿರುವ ಅಯೋಧ್ಯೆಯ ರಾಮಮಂದಿರದ ರಾಮನ ವಿಗ್ರಹ ಪ್ರತಿಷ್ಠಾಪನೆ ವೇಳೆ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ರಾಜ್ಯಪಾಲರು ಹಾಗೂ ದೇವಸ್ಥಾನದ ಟ್ರಸ್ಟಿಗಳು ಹಾಜರಿರುತ್ತಾರೆ.
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮಧ್ಯಾಹ್ನ 12.20ಕ್ಕೆ ಆರಂಭವಾಗಿ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ನಂತರ ಪ್ರಧಾನಮಂತ್ರಿ ಮತ್ತು ಇತರರು ಭಾಷಣ ಮಾಡಲಿದ್ದಾರೆ’ ಎಂದರು.
‘ವಾರಾಣಸಿ ಮೂಲದ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಮುಹೂರ್ತ ತೆಗೆದು ಕೊಟ್ಟಿದ್ದಾರೆ. ಗಣೇಶ್ವರ ಶಾಸ್ತ್ರಿಗಳು ಹಾಗೂ ವಾರಾಣಸಿಯವರೇ ಆದ ಲಕ್ಷ್ಮೀಕಾಂತ ದೀಕ್ಷಿತರ ನೇತೃತ್ವದಲ್ಲಿ ಈ ಸಮಾರಂಭಗಳು ನಡೆಯಲಿವೆ’ ಎಂದರು.‘ಕಾರ್ಯಕ್ರಮಗಳು ನಡೆಯುವ ಕಾರಣ ಜ.20 ಮತ್ತು 21 ರಂದು ಸಾರ್ವಜನಿಕರಿಗೆ ಈಗಿನ ರಾಮಲಲ್ಲಾ ದರ್ಶನ ಅವಕಾಶ ಇರುವುದಿಲ್ಲ. ಜನವರಿ 23 ರಿಂದ ರಾಮಮಂದಿರವು ಸಾರ್ವಜನಿಕರಿಗೆ ದರ್ಶನಕ್ಕಾಗಿ ತೆರೆಯಲಿದೆ’ ಎಂದು ಹೇಳಿದರು.ಇದೇ ವೇಳೆ, ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಂಪ್ರದಾಯದಂತೆ 1000 ಬುಟ್ಟಿಗಳಲ್ಲಿ ಉಡುಗೊರೆಗಳು ನೇಪಾಳದ ಜನಕ್‌ಪುರ ಮತ್ತು ಮಿಥಿಲಾ ಪ್ರದೇಶಗಳಿಂದ ಬಂದಿವೆ ಎಂದರು.
ಜ.22ಕ್ಕೆ ಶ್ರೀರಾಮ ದರ್ಶನ: ಇನ್ನು ಕೆಲವೇ ದಿನಗಳಲ್ಲಿ ತನ್ನ ಭವ್ಯ ರಾಮಮಂದಿರದಲ್ಲಿ ಸಾಕ್ಷಾತ್ ಶ್ರೀರಾಮನೇ ನಮ್ಮೆಲ್ಲರಿಗೂ ದರ್ಶನ ನೀಡಲಿದ್ದಾನೆ. ಅಂತಹ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಸಿಕ್ಕಿರುವುದು ನನ್ನ ಸೌಭಾಗ್ಯ. ಇದರಲ್ಲಿ ಭಾಗವಹಿಸುವ ಸಲುವಾಗಿ ನಾನು 11 ದಿನಗಳ ವಿಶೇಷ ಅನುಷ್ಠಾನವನ್ನು ಆರಂಭಿಸಿದ್ದೇನೆ ಎಂದು ನರೇಂದ್ರ ಮೋದಿ ತಿಳಿಸಿದರು.
ಅಯೋಧ್ಯೆ ರಾಮ್‌ಲಲ್ಲಾ ದರ್ಶನ ಪಡೆದ ಯುಪಿ ಕಾಂಗ್ರೆಸ್ ತಂಡ!
ಲಖನೌ: ಜ.22ರಂದು ನಡೆಯಲಿರುವ ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆಯನ್ನು ಕಾಂಗ್ರೆಸ್ ಬಹಿಷ್ಕರಿಸಿದೆಯಾದರೂ ಉತ್ತರ ಪ್ರದೇಶದ ಕಾಂಗ್ರೆಸ್ ಘಟಕದ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಸೋಮವಾರ ಮಕರ ಸಂಕ್ರಾಂತಿಯಂದು ಅಯೋಧ್ಯೆಗೆ ತೆರಳಿ ಶ್ರೀರಾಮ್‌ಲಲ್ಲಾ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿ ಆರಾಧನಾ ಮಿಶ್ರಾ, ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಉಸ್ತುವಾರಿ ಧೀರಜ್ ಗುರ್ಜರ್, ಹಿರಿಯ ನಾಯಕರಾದ ದೀಪೇಂದರ್ ಸಿಂಗ್ ಹೂಡಾ ಮತ್ತು ಅವಿನಾಶ್ ಪಾಂಡೆ ಸೋಮವಾರ ಮಧ್ಯಾಹ್ನ 2 ಗಂಟೆ ವೇಳೆ ಅಯೋಧ್ಯೆ ತಲುಪಿದರು.
ಬಳಿಕ ಅಲ್ಲಿನ ಸರಯೂ ನದಿ ದಡದಲ್ಲಿ ಪವಿತ್ರ ಸ್ನಾನ ಮಾಡಿದ ನಾಯಕರು ಬಳಿಕ ಹನುಮಾನ್ ಗಢಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ರಾಮ ಲಲ್ಲಾಗೆ ಪೂಜೆ ಸಲ್ಲಿಸಿದರು.
ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ತಮಗೆ ನೀಡಿದ್ದ ರಾಮ ಮಂದಿರ ಉದ್ಘಾಟನೆ ಆಹ್ವಾನವನ್ನು ನಿರಾಕರಿಸಿದ್ದರು.
ಅಯೋಧ್ಯೇಲಿ 14.5 ಕೋಟಿ ಮೌಲ್ಯದ ಬೃಹತ್ ಜಾಗ ಖರೀದಿಸಿದ ಅಮಿತಾಭ್
ಅಯೋಧ್ಯೆ: ಇಲ್ಲಿ ಬೃಹತ್ ರಾಮಮಂದಿರ ಉದ್ಘಾಟನೆಗೂ ಮುನ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ಭರ್ಜರಿ 14.5 ಕೋಟಿ ರು. ತೆತ್ತು ಬೃಹತ್ ಜಾಗ ಖರೀದಿಸಿದ್ದಾರೆ. ಮುಂಬೈ ಮೂಲದ ಉದ್ಯಮಿ ಅಭಿನಂದನ್ ಲೋಧಾ ಅಭಿವೃದ್ಧಿಪಡಿಸಿರುವ ‘ದಿ ಸರಯೂ’ ಎನ್‌ಕ್ಲೇವ್‌ನಲ್ಲಿ ಅಮಿತಾಭ್ 10 ಸಾವಿರ ಚದರಡಿ ವಿಸ್ತೀರ್ಣಗ ಜಾಗ ಖರೀದಿಸಿದ್ದಾರೆ.
ದಿ ಸರಯೂ ಎನ್‌ಕ್ಲೇವ್ ಬರೋಬ್ಬರಿ 51 ಎಕರೆ ವಿಶಾಲ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ರಾಮಮಂದಿರದಿಂದ 15 ನಿಮಿಷ, ವಾಲ್ಮೀಕಿ ವಿಮಾನ ನಿಲ್ದಾಣದಿಂದ 30 ನಿಮಿಷ ದೂರದಲ್ಲಿದೆ.
ಈ ಕುರಿತು ಸಂತಸ ವ್ಯಕ್ತಪಡಿಸಿದ ಅಮಿತಾಭ್, ‘ಜಾಗತಿಕ ಆಧ್ಯಾತ್ಮಿಕ ರಾಜಧಾನಿ ಎಂದೇ ಖ್ಯಾತವಾಗಿರುವ ಅಯೋಧ್ಯೆಯಲ್ಲಿ ನನ್ನ ಪಯಣ ಆರಂಭಿಸಲು ಎದುರು ನೋಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಭಾರತದ ಮೊದಲ ಸಸ್ಯಾಹಾರಿ 7 ಸ್ಟಾರ್ ಹೋಟೆಲ್
ಅಯೋಧ್ಯೆ: ಶ್ರೀ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ದೇಶದ ಮೊತ್ತ ಮೊದಲ ಸಸ್ಯಾಹಾರಿ ಸಪ್ತತಾರಾ (7 ಸ್ಟಾರ್) ಹೋಟೆಲ್ ತಲೆಯೆತ್ತಲಿದೆ.ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯು ಅಯೋಧ್ಯೆಯಲ್ಲಿ ಪಂಚತಾರಾ ಹೋಟೆಲ್ ಅನ್ನು ಸಹ ಸ್ಥಾಪಿಸಲಿದೆ.
ಜ. 22ರಂದು ಶ್ರೀರಾಮ ಪ್ರತಿಮೆ ಪ್ರತಿಷ್ಠಾಪನೆ ನಡೆಯಲಿದ್ದು, ಅಂದು ಇದರ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ. ಇದಲ್ಲದೆ, ಸರಯೂ ನದಿಯ ದಡದಲ್ಲಿ ಹಲವಾರು ಪಂಚತಾರಾ ಹೋಟೆಲ್‌ಗಳು ಬರಲಿವೆ.
ಸುಮಾರು 110 ಸಣ್ಣ ಮತ್ತು ದೊಡ್ಡ ಹೋಟೆಲ್ ಉದ್ಯಮಿಗಳು ಅಯೋಧ್ಯೆಯಲ್ಲಿ ತಮ್ಮ ಸೌಲಭ್ಯಗಳನ್ನು ಸ್ಥಾಪಿಸಲು ಭೂಮಿಯನ್ನು ಖರೀದಿಸುತ್ತಿದ್ದಾರೆ. ಇಲ್ಲಿ ಸೋಲಾರ್ ಪಾರ್ಕ್ ಕೂಡ ನಿರ್ಮಾಣವಾಗುತ್ತಿದೆ.
ದೇವಾಲಯದ ಉದ್ಘಾಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಅಭಿವೃದ್ಧಿ ಕಾರ್ಯ ಪರ್ವವೇ ಏರ್ಪಟ್ಟಿದೆ. ತರಹೇವಾರಿ ಹೋಟೆಲ್‌ಗಳು ಮತ್ತು ವಸತಿ ಯೋಜನೆ ಆರಂಭವಾಗುತ್ತಿದ್ದು, ನಗರವು ಆಧ್ಯಾತ್ಮಿಕ ವಾಣಿಜ್ಯ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ.
ಮಂದಿರ ಉದ್ಘಾಟನೆಯಿಂದ 1 ಲಕ್ಷ ಕೋಟಿ ರು. ವ್ಯಾಪಾರ ವಹಿವಾಟು ನಿರೀಕ್ಷೆ
ನವದೆಹಲಿ: ಜ.22ರಂದು ನಡೆಯಲಿರುವ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಒಟ್ಟು 1 ಲಕ್ಷ ಕೋಟಿ ರು. ವ್ಯವಹಾರ ನಡೆಯುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ.
ವಿವಿಧ ರಾಜ್ಯಗಳ 30 ನಗರಗಳ ವ್ಯಾಪಾರ ಸಂಘಗಳಿಂದ ಪ್ರತಿಕ್ರಿಯೆಯ ಆಧಾರದ ಮೇಲೆ 1 ಲಕ್ಷ ಕೋಟಿ ರು. ವ್ಯವಹಾರ ನಿರೀಕ್ಷಿಸಲಾಗಿದೆ ಎಂದು ಅದು ತಿಳಿಸಿದೆ.
ಈ ಬಗ್ಗೆ ಸೋಮವಾರ ಮಾತನಾಡಿದ ಸಿಎಐಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್ ‘ಮಂದಿರ ಉದ್ಘಾಟನೆಯು ಕೇವಲ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲದೇ ಆರ್ಥಿಕ ವ್ಯವಹಾರ ಚಟುವಟಿಕೆಗಳಿಗೂ ತನ್ನದೇ ಆದ ಕೊಡುಗೆ ನೀಡಿದ್ದು, ಇದರಿಂದ 1 ಲಕ್ಷ ಕೋಟಿ ರು. ವ್ಯಾಪಾರ ವಹಿವಾಟು ನಡೆಯುವ ನಿರೀಕ್ಷೆಯಿದೆ.
ಶ್ರೀರಾಮ ಧ್ವಜ, ಮೊಬೈಲ್ ಕವರ್, ಮಂದಿರ ಪ್ರತಿಕೃತಿ, ಕ್ಯಾಪ್, ಟೀ ಶರ್ಟ್, ಕುರ್ತಾ ಸೇರಿದಂತೆ ರಾಮ ಮತ್ತು ಮಂದಿರ ಮುದ್ರಿತವಾಗಿರುವ ಎಲ್ಲ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಇನ್ನು 5 ಕೋಟಿ ರಾಮ ಮಂದಿರ ಪ್ರತಿಕೃತಿಗಳು ಮಾರಾಟವಾಗುವ ನಿರೀಕ್ಷೆ ಇದೆ’ ಎಂದು ತಿಳಿಸಿದ್ದಾರೆ.