ಆಪರೇಷನ್‌ ಸಿಂಧೂರ ಹೆಮ್ಮೆಯ ಕ್ಷಣ: ಸಂಪುಟ ಸಭೆಯಲ್ಲಿ ಮೋದಿ ಬಣ್ಣನೆ

ಸಾರಾಂಶ

ಪಹಲ್ಗಾಂ ದಾಳಿಗೆ ಪ್ರತಿಯಾಗಿ ಗಡಿಯಾಚೆಗಿನ ಒಂಬತ್ತು ಉಗ್ರ ನೆಲೆಗಳ ಮೇಲೆ ಭಾರತವು ನಡೆಸಿದ ದಾಳಿಯನ್ನು ಹೆಮ್ಮೆಯ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

 ನವದೆಹಲಿ: ಪಹಲ್ಗಾಂ ದಾಳಿಗೆ ಪ್ರತಿಯಾಗಿ ಗಡಿಯಾಚೆಗಿನ ಒಂಬತ್ತು ಉಗ್ರ ನೆಲೆಗಳ ಮೇಲೆ ಭಾರತವು ನಡೆಸಿದ ದಾಳಿಯನ್ನು ಹೆಮ್ಮೆಯ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಪಾಕಿಸ್ತಾನದ ಮೇಲಿನ ಸೇನಾ ದಾಳಿಯ ಬಳಿಕ ಬುಧವಾರ ಕರೆಯಲಾಗಿದ್ದ ಕ್ಯಾಬಿನೆಟ್‌ ಸಭೆಯಲ್ಲಿ ಮಾತನಾಡಿದ ಅವರು, ಯೋಜಿತ ರೀತಿಯಲ್ಲಿ ಈ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಲಾಯಿತು. ಯಾವುದೇ ತಪ್ಪುಗಳಿಲ್ಲದೆ, ಯಶಸ್ವಿಯಾಗಿ ಕಾರ್ಯಾಚರಣೆ ಪೂರ್ಣಗೊಳಿಸಲಾಯಿತು. ವಿಸ್ತೃತ ಹಾಗೂ ಸಾಕಷ್ಟು ಪೂರ್ವ ತಯಾರಿ ಬಳಿಕವೇ ಈ ದಾಳಿ ನಡೆಸಲಾಗಿದೆ ಎಂದು ಮೋದಿ ಕ್ಯಾಬಿನೆಟ್‌ ಗಮನಕ್ಕೆ ತಂದರು.

ಯಾವುದೇ ತಪ್ಪಿಲ್ಲದೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ಸೇನೆಯು ಕಾರ್ಯರೂಪಕ್ಕಿಳಿಸಿದೆ. ಈ ಮೂಲಕ ಶ್ಲಾಘನೀಯ ಕಾರ್ಯ ಮಾಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ ಅ‍ವರು, ಇಡೀ ದೇಶ ನಮ್ಮತ್ತ ತಿರುಗಿ ನೋಡುತ್ತಿದೆ, ನಾವು ಸೇನೆಯ ಕುರಿತು ಹೆಮ್ಮೆ ಪಡುತ್ತೇವೆ ಎಂದು ಹೇಳಿದರು ಎಂದು ಮೂಲಗಳು ಹೇಳಿವೆ.

ಇದೇ ವೇಳೆ ಸಭೆಯಲ್ಲಿ ಸಚಿವರು ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ಸಂಪೂರ್ಣ ಭರವಸೆ ವ್ಯಕ್ತಪಡಿಸಿದ್ದು, ಟೇಬಲ್ ಕುಟ್ಟುವ ಮೂಲಕ ಸರ್ಕಾರದ ಕ್ರಮವನ್ನು ಸ್ವಾಗತಿಸಿದರು. ಈ ಮೂಲಕ ಭಯೋತ್ಪಾದನೆ ವಿರುದ್ಧದ ದಾಳಿಯಲ್ಲಿ ನಾವು ಪ್ರಧಾನಿ ಮತ್ತು ಸೇನಾಪಡೆಗಳ ಜತೆಗಿದ್ದೇವೆ ಎಂದು ಇಡೀ ದೇಶಕ್ಕೆ ಸಂದೇಶ ರವಾನಿಸಿದರು.

Share this article