ಆಪರೇಷನ್‌ ಸಿಂದೂರ ನವ ಭಾರತದ ಹೊಸ ಮುಖದ ಪ್ರತಿಬಿಂಬ : ಮೋದಿ

KannadaprabhaNewsNetwork |  
Published : May 26, 2025, 12:28 AM ISTUpdated : May 26, 2025, 04:54 AM IST
ಮೋದಿ  | Kannada Prabha

ಸಾರಾಂಶ

ಆಪರೇಷನ್ ಸಿಂದೂರ ಕೇವಲ ಒಂದು ಮಿಲಿಟರಿ ಕಾರ್ಯಾಚರಣೆ ಆಗಿರಲಿಲ್ಲ, ಬದಲಾಗಿ ಭಾರತದ ಬದಲಾದ ಮುಖದ ಪ್ರತಿಬಿಂಬವಾಗಿದೆ. ಈ ಕಾರ್ಯಾಚರಣೆಯು ದೇಶದ ಸಂಕಲ್ಪ, ಸಾಹಸ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೆಚ್ಚುತ್ತಿರುವ ಶಕ್ತಿಯ ಪ್ರತಿಫಲನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿ: ಆಪರೇಷನ್ ಸಿಂದೂರ ಕೇವಲ ಒಂದು ಮಿಲಿಟರಿ ಕಾರ್ಯಾಚರಣೆ ಆಗಿರಲಿಲ್ಲ, ಬದಲಾಗಿ ಭಾರತದ ಬದಲಾದ ಮುಖದ ಪ್ರತಿಬಿಂಬವಾಗಿದೆ. ಈ ಕಾರ್ಯಾಚರಣೆಯು ದೇಶದ ಸಂಕಲ್ಪ, ಸಾಹಸ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೆಚ್ಚುತ್ತಿರುವ ಶಕ್ತಿಯ ಪ್ರತಿಫಲನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಾಸಿಕ ಮನ್‌ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಪರೇಷನ್‌ ಸಿಂದೂರವು ಭಯೋತ್ಪಾದನೆ ವಿರುದ್ಧದ ಅಂತಾರಾಷ್ಟ್ರೀಯ ಹೋರಾಟದ ದಿಕ್ಕನೇ ಬದಲಾಯಿಸಿದೆ ಎಂದರು.

ಏ.22ರ ಪಹಲ್ಗಾಂ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಆಪರೇಷನ್‌ ಸಿಂದೂರ ಕಾರ್ಯಾಚರಣೆಯನ್ನು ಮೇ 6-7ರ ನಡುರಾತ್ರಿ ನಡೆಸಲಾಯಿತು. ನಮ್ಮ ಸೇನೆಯು ಪಾಕಿಸ್ತಾನದಲ್ಲಿರುವ ಲಷ್ಕರ್‌-ಎ-ತೊಯ್ಬಾ, ಜೈಶ್‌-ಎ-ಮೊಹಮ್ಮದ್‌ ಮತ್ತು ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಮುಖ್ಯ ಕಚೇರಿ ಮೇಲೆ ದಾಳಿ ನಡೆಸಿತು ಎಂದು ಮೋದಿ ಹೇಳಿದರು.

ಸೇನೆಗೆ ಮೆಚ್ಚುಗೆ:

ಮುಂಜಾಗ್ರತೆಯಿಂದ ಕರಾರುವಕ್ಕಾಗಿ ಉಗ್ರ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದ ನಮ್ಮ ಯೋಧರ ಸಾಹಸ ಅಪ್ರತಿಮ ಎಂದು ಕೊಂಡಾಡಿದ ಅವರು, ಆಪರೇಷನ್‌ ಸಿಂದೂರ ಕಾರ್ಯಾಚರಣೆ ಬಳಿಕ ದೇಶದಲ್ಲಿ ದೇಶಭಕ್ತಿಯ ಕವಿತೆ, ಹಾಡುಗಳು, ಚಿತ್ರಗಳ ಮೂಲಕ ನೇನೆಗೆ ಗೌರವ ಸಲ್ಲಿಸಿದ ಯುವಕರು ಮಕ್ಕಳ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು.

ಹಲವು ನಗರಗಳಲ್ಲಿ ಯುವಕರು ನಾಗರಿಕ ರಕ್ಷಣಾಪಡೆಗೆ ಸ್ವಯಂಸೇವಕರಾದರು, ಕವಿತೆಗಳನ್ನು ಬರೆದರು, ಗೀತೆಗಳನ್ನು ಹಾಡಿದರು, ಪರಿಣಾಮಕಾರಿ ಸಂದೇಶಗಳನ್ನು ಹೊತ್ತ ಚಿತ್ರಗಳನ್ನು ಮಕ್ಕಳು ರಚಿಸಿದರು ಎಂದು ಮೋದಿ ಈ ವೇಳೆ ಸ್ಮರಿಸಿದರು.

ಕಟಿಹಾರ್‌ ಮತ್ತು ಕುಶಿನಗರದಲ್ಲಿ ನವಜಾತ ಶಿಶುಗಳಿಗೆ  ''''ಸಿಂದೂರ್‌ ''''  ಹೆಸರಿಡುವ ಮೂಲಕ ಸೇನಾ ಕಾರ್ಯಾಚರಣೆಗೆ ಗೌರವ ಸಲ್ಲಿಸಲಾಯಿತು ಎಂದೂ ಮೋದಿ ಖುಷಿ ವ್ಯಕ್ತಪಡಿಸಿದರು.

ಇದೇ ವೇಳೆ, ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ಸು ನಮ್ಮ ಧೈರ್ಯಶಾಲಿ ಯೋಧರು ಮತ್ತು ಅವರಿಗೆ ಬೆಂಬಲ ನೀಡಿದ ಸ್ವದೇಶಿ ನಿರ್ಮಿತ ಯುದ್ಧೋಪಕರಣಗಳು ಮತ್ತು ತಂತ್ರಜ್ಞಾನಗಳಿಗೆ ಸಲ್ಲುತ್ತದೆ ಎಂದರು.

ಸ್ವಾವಲಂಬನೆಗೆ ಕರೆ:

ಇದೇ ವೇಳೆ ಆಪರೇಷನ್‌ ಸಿಂದೂರ ಇಡೀ ಭಾರತದಲ್ಲಿ ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸಿತು. ವಿದೇಶಿ ಆಮದಿತ ವಸ್ತುಗಳ ಬದಲು ಮೇಡ್‌ ಇನ್‌ ಇಂಡಿಯಾ ವಸ್ತುಗಳಿಗೆ ಜನ ಆದ್ಯತೆ ನೀಡಲು ಆರಂಭಿಸಿದರು ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದು ಇಡೀ ಭಾರತ ಭಯೋತ್ಪಾದನೆ ವಿರುದ್ಧ ಒಂದಾಗಿದೆ. ಪಾಕಿಸ್ತಾನದ ವಿರುದ್ಧದ ಈ ಮಿಲಿಟರಿ ಕಾರ್ಯಾಚರಣೆಯು ನಮ್ಮಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸಿದಷ್ಟೇ ಅಲ್ಲ, ಸ್ವಾವಲಂಬನೆಯ ಸ್ಪೂರ್ತಿಯನ್ನೂ ಗಟ್ಟಿಗೊಳಿಸಿದೆ ಎಂದರು.

ಇದೇ ವೇಳೆ, ನಾವು ನಿಮಗೂ ಮನವಿ ಮಾಡುತ್ತೇನೆ. ಬನ್ನಿ, ಇಂಥ ಪರಿಸ್ಥಿತಿಯಲ್ಲಿ ದೇಶದಲ್ಲೇ ಉತ್ಪಾದಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡೋಣ. ಇದು ಕೇವಲ ಆರ್ಥಿಕ ಸ್ವಾವಲಂಬನೆಯ ವಿಚಾರ ಅಲ್ಲ, ದೇಶ ನಿರ್ಮಾಣದಲ್ಲಿ ಭಾಗಿಯಾಗುವ ಭಾವನೆಯಾಗಿದೆ. ನಮ್ಮ ಒಂದು ಸಣ್ಣ ಹೆಜ್ಜೆ ಇಡೀ ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಮೋದಿ ಕರೆ ನೀಡಿದರು.

PREV
Read more Articles on

Latest Stories

ಬ್ರಿಟನ್‌ ಎಫ್‌-35 ರಿಪೇರಿ ಅಂತ್ಯ:ಇನ್ನೆರಡು ದಿನದಲ್ಲಿ ಟೇಕಾಫ್‌
ಪಾಕ್‌ ಅಣ್ವಸ್ತ್ರ ಗುಡ್ಡಕ್ಕೆ ಭಾರತ ಬಾಂಬ್‌ ದಾಳಿ ನಡೆಸಿದ್ದು ನಿಜ: ಉಪಗ್ರಹ ಸಾಕ್ಷ್ಯ
ಮರೆತಿದ್ದ ಪತ್ನಿ ಕರೆತರಲು22 ಬೆಂಗಾವಲು ಪಡೆ ಜತೆಬಂದ ಸಚಿವ ಚೌಹಾಣ್‌!