ಕಾಂಗ್ರೆಸ್ಸಿನ ಸುರ್ಜೇವಾಲಾರಂಥ ಉಸ್ತುವಾರಿ ನಮ್ಮ ಪಕ್ಷಕ್ಕೂ ಬೇಕು : ರಾಜ್ಯ ಬಿಜೆಪಿ

KannadaprabhaNewsNetwork |  
Published : Jun 08, 2026, 02:00 AM ISTUpdated : Jun 08, 2026, 06:50 AM IST
Surjewala

ಸಾರಾಂಶ

ಬೆಟ್ಟದಂತೆ ಎದುರಾಗಿದ್ದ ಅಧಿಕಾರ ಹಸ್ತಾಂತರ ಎಂಬ ಮಹತ್ವದ ಪ್ರಕ್ರಿಯೆಯನ್ನು ಬೆಣ್ಣೆಯಂತೆ ಮಾಡಿ ಮುಗಿಸಿದ ಕಾಂಗ್ರೆಸ್ ವರಿಷ್ಠರು ಅದರಲ್ಲೂ ವಿಶೇಷವಾಗಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರ ಬಗ್ಗೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಪಾಳೆಯದಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 ಬೆಂಗಳೂರು :  ಬೆಟ್ಟದಂತೆ ಎದುರಾಗಿದ್ದ ಅಧಿಕಾರ ಹಸ್ತಾಂತರ ಎಂಬ ಮಹತ್ವದ ಪ್ರಕ್ರಿಯೆಯನ್ನು ಬೆಣ್ಣೆಯಂತೆ ಮಾಡಿ ಮುಗಿಸಿದ ಕಾಂಗ್ರೆಸ್ ವರಿಷ್ಠರು ಅದರಲ್ಲೂ ವಿಶೇಷವಾಗಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರ ಬಗ್ಗೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಪಾಳೆಯದಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಸ್ಥಾನ ಬಿಟ್ಟು ಕೊಡುವುದು ಆಗದ ಮಾತು ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ಬಲವಾಗಿ ಕೇಳಿಬಂದಿತ್ತು. ಒಟ್ಟಾರೆ ಈ ಪ್ರಕ್ರಿಯೆ ವೇಳೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಸ್ಫೋಟಗೊಂಡು ಕೋಲಾಹಲ ಉಂಟಾಗಲಿದೆ ಎಂಬ ನಿರೀಕ್ಷೆ ಸಹಜವಾಗಿಯೇ ಬಿಜೆಪಿಯಲ್ಲಿತ್ತು. ಆದರೆ, ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಇಡೀ ಪ್ರಕ್ರಿಯೆಯನ್ನು ಸುಗಮವಾಗಿ ಮುಗಿಸಿರುವುದು ಸಹಜವಾಗಿಯೇ ಬಿಜೆಪಿಗರಿಗೆ ಅಚ್ಚರಿ ಉಂಟು ಮಾಡಿದೆ.

ರಾಜ್ಯಾಧ್ಯಕ್ಷರ ಗೊಂದಲ ಬಗೆಹರಿಯುತ್ತಿಲ್ಲ:

ರಾಜ್ಯ ಬಿಜೆಪಿಯಲ್ಲಿ ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ಅಪಸ್ವರ, ಗೊಂದಲ ಮುಂದುವರೆದಿರುವುದು ಗೊತ್ತಿರುವ ಸಂಗತಿ. ಈ ಗೊಂದಲವನ್ನು ತಾವಾಗಿಯೇ ಪರಿಹರಿಸುವುದು ಇರಲಿ, ಬಗೆಹರಿಸಿ ಎಂದು ರಾಜ್ಯದ ಹಿರಿಯ ನಾಯಕರು ಮನವಿ ಮಾಡಿದರೂ ಬಿಜೆಪಿ ಹೈಕಮಾಂಡ್ ಆಗಲಿ ಅಥವಾ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರಾಗಲಿ ಕ್ಯಾರೇ ಎನ್ನದೆ ತಳ್ಳಿಕೊಂಡೇ ಬಂದಿರುವ ಬಗ್ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ಸುರ್ಜೇವಾಲಾ ರೀತಿಯ ಉಸ್ತುವಾರಿ ಬಿಜೆಪಿಗೂ ಅವಶ್ಯವಿದೆ ಎಂಬ ತುಡಿತ ಕೇಳಿಬರುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ ನಂತರ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಪಕ್ಷದ ಕಾರ್ಯಕ್ರಮಗಳಿರಲಿ ಅಥವಾ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟಗಳಿರಲಿ, ಖುದ್ದು ತಾವೇ ದೆಹಲಿಯಿಂದ ದೌಡಾಯಿಸಿ ಸಭೆಗಳನ್ನು ನಡೆಸುವುದಲ್ಲದೆ ಅದರ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸುತ್ತಿರುವುದನ್ನು ಬಿಜೆಪಿಯ ಮುಖಂಡರು ಗಮನಿಸುತ್ತಲೇ ಇದ್ದಾರೆ. ಅಧಿಕಾರ ಹಸ್ತಾಂತರವಾಗಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬೆನ್ನಲ್ಲೇ ಸಚಿವರಲ್ಲಿ ಖಾತೆ ಕ್ಯಾತೆ ಆರಂಭವಾಗುತ್ತಿದ್ದಂತೆಯೇ ಬಂದಿಳಿದ ಸುರ್ಜೇವಾಲಾ ಕ್ಷಿಪ್ರಗತಿಯಲ್ಲಿ ತಮ್ಮ ಕೆಲಸ ಆರಂಭಿಸಿದರು.

ಇದೀಗ ಸುರ್ಜೇವಾಲಾ ಜತೆಗೆ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರ ಕಾರ್ಯವೈಖರಿಯನ್ನು ಬಿಜೆಪಿಗರು ಹೋಲಿಸಿಕೊಂಡು ಬೇಸರಪಟ್ಟುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೊಂದಲ ಬಗೆಹರಿಸುವುದರಲ್ಲಿ ಹಿಂದೆ:

ಒಂದು ಕಾಲದಲ್ಲಿ ಪಕ್ಷದಲ್ಲಿನ ಬಿಕ್ಕಟ್ಟು, ಗೊಂದಲಗಳನ್ನು ಬಗೆಹರಿಸುವಲ್ಲಿ ಬಿಜೆಪಿ ಮುಂಚೂಣಿಯಲ್ಲಿ ಇರುತ್ತಿತ್ತು. ಏನೇ ಗೊಂದಲ ಕಂಡು ಬಂದರೆ ತಕ್ಷಣ ಪಕ್ಷದ ರಾಜ್ಯ ಉಸ್ತುವಾರಿ ಕ್ರಿಯಾಶೀಲವಾಗಿ ಬಗೆಹರಿಸಲು ಮುಂದಾಗುತ್ತಿದ್ದರು. ಬಿಜೆಪಿಗೆ ಪಕ್ಷಕ್ಕೆ ಹೋಲಿಸಿದರೆ ಕಾಂಗ್ರೆಸ್ ಪಕ್ಷ ಈ ವಿಷಯದಲ್ಲಿ ತೀರಾ ಹಿಂದುಳಿದಿತ್ತು.

ಆದರೆ, ಇತ್ತೀಚಿನ ವರ್ಷಗಳಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಶಿಸ್ತಿನ ಪಕ್ಷ ಎಂಬ ಹೆಸರು ಗಳಿಸಿರುವ ಬಿಜೆಪಿಯ ರಾಜ್ಯ ಘಟಕದಲ್ಲಿ ಗೊಂದಲ ಎನ್ನುವುದು ತುಂಬಿ ತುಳಕಾಡುತ್ತಿದೆ. ಕಾರ್ಯಕರ್ತರು ಬೇಸತ್ತು ಹೋಗಿದ್ದಾರೆ. ಪಕ್ಷದ ವರಿಷ್ಠರು ಮಾತ್ರ ಏನೂ ಆಗಿಯೇ ಇಲ್ಲ ಎಂಬಂತೆ ರಾಜ್ಯಕ್ಕೆ ಆಗಮಿಸಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಾಪಸಾಗುತ್ತಾರೆ. ಗೊಂದಲಗಳನ್ನು ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತೆ ಇರುವುದನ್ನು ವರಿಷ್ಠರು ರೂಢಿಸಿಕೊಂಡಂತಿದೆ.

ಹಿಂದೆ ರಾಜ್ಯ ಉಸ್ತುವಾರಿಯಾಗಿದ್ದ ಅರುಣ್ ಸಿಂಗ್ ಅವರೂ ಆರಂಭದಲ್ಲಿ ತುಸು ಗಡಸು ಎಂಬಂತೆ ಕಂಡು ಬಂದರೂ ನಂತರದ ದಿನಗಳಲ್ಲಿ ಮೆತ್ತಗಾದರು. ಇದೀಗ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರೂ ಅಷ್ಟೇ. ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಮಾತನಾಡಲು, ಗೊಂದಲಗಳನ್ನು ಬಗೆಹರಿಸಲು ಯಾವುದೇ ಗಂಭೀರ ಪ್ರಯತ್ನಗಳನ್ನು ಮಾಡುತ್ತಿರುವುದು ಕಂಡು ಬಂದೇ ಇಲ್ಲ. ದೆಹಲಿಯಿಂದ ಮುಂದಿನ ಟಾಸ್ಕ್‌ನ ಪಟ್ಟಿ ಹೊತ್ತು ತರುವ ಪೋಸ್ಟ್‌ಮನ್ ಕೆಲಸ ಮಾಡುತ್ತಿದ್ದಾರೆಯೇ ಹೊರತು ಪಕ್ಷ ಸಂಘಟನೆ ಬಲಪಡಿಸಲು ಮಾಡಬೇಕಾದ ಪ್ರಯತ್ನ ಮಾಡುತ್ತಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ ಅಸಮಾಧಾನ ಹೊರಹಾಕಿದರು.

ಸ್ಥಳೀಯ ಸಂಸ್ಥೆ ಚುನಾವಣೆ ಸಜ್ಜು ಯಾವಾಗ?:

ಇನ್ನೆರಡು ವರ್ಷಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಎದುರಾಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ಹೊಸ್ತಿಲಲ್ಲಿ ಬಂದು ನಿಲ್ಲುವ ಸಾಧ್ಯತೆಯಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಆ ಚುನಾವಣೆಗಳನ್ನು ಎದುರಿಸಲು ದಿನೇ ದಿನೆ ಸಜ್ಜಾಗುತ್ತಿದೆ. ಆದರೆ, ನಮ್ಮ ಬಿಜೆಪಿ ಮಾತ್ರ ಅದೆಲ್ಲವನ್ನೂ ನೋಡಿಕೊಂಡು ಪತ್ರಿಕಾ ಹೇಳಿಕೆ, ಬೈಟ್‌ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ. ಮುಂದೆ ನೋಡಿದರಾಯಿತು ಎಂಬ ನಿಲವಿಗೆ ಹೈಕಮಾಂಡ್‌ ಬಂದಂತಿದೆ. ಕಾಂಗ್ರೆಸ್‌ ಪಕ್ಷದ ವರಿಷ್ಠರ ಕಾರ್ಯವೈಖರಿಯನ್ನು ನಾವು ನೋಡಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹಲವು ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ ಉಸ್ತುವಾರಿ ಪೋಸ್ಟ್‌ಮ್ಯಾನ್‌ ರೀತಿ ಆಗಿದ್ದಾರೆ: ಅತೃಪ್ತಿ

ಸುರ್ಜೇವಾಲಾ ಬಗ್ಗೆಬಿಜೆಪಿಗರ ಮಾತೇನು?- ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರ ಮಾಡುವುದು ಆಗದ ಮಾತು ಎಂಬ ಚರ್ಚೆ ಇತ್ತು- ಅಧಿಕಾರ ಹಂಚಿಕೆ ವಿಚಾರಕ್ಕೆ ಕಾಂಗ್ರೆಸ್‌ ಭಿನ್ನಮತ ಸ್ಫೋಟಗೊಂಡು ಕೋಲಾಹಲದ ನಿರೀಕ್ಷೆ ಇತ್ತು- ಆದರೆ ಯಾವುದೇ ಗೊಂದಲಕ್ಕೆ ಅವಕಾಶ ಕೊಡದೆ ಇಡೀ ಪ್ರಕ್ರಿಯೆಯನ್ನು ಸುಗಮವಾಗಿ ಮುಗಿಸಿದರು- ಕಾಂಗ್ರೆಸ್ಸಿನ ಎಲ್ಲ ಕಾರ್ಯಕ್ರಮಕ್ಕೂ ಸುರ್ಜೇವಾಲಾ ಬರ್ತಾರೆ. ಈಗ ಖಾತೆ ಕ್ಯಾತೆಯನ್ನೂ ಬಗೆಹರಿಸಿದ್ದಾರೆ

ರಾಧಮೋಹನ ಬಗ್ಗೆ ಇರುವ ಅತೃಪ್ತಿ ಏನು?

- ರಾಜ್ಯ ಬಿಜೆಪಿಯಲ್ಲಿ 2 ವರ್ಷಗಳಿಗೂ ಅಧಿಕ ಕಾಲದಿಂದ ಅಪಸ್ವರ, ಗೊಂದಲ ಮುಂದುವರಿದುಕೊಂಡೇ ಬಂದಿದೆ- ಇದನ್ನು ಬಗೆಹರಿಸಿ ಎಂದು ಕೇಳಿದರೂ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ಅಗರ್‌ವಾಲ್‌ ಕ್ಯಾರೆ ಎನ್ನುತ್ತಲೇ ಇಲ್ಲ- ಈ ಮೊದಲು ಬಿಜೆಪಿಯಲ್ಲಿ ಏನೇ ಗೊಂದಲವಾದರೂ ರಾಜ್ಯ ಬಿಜೆಪಿ ಬಗೆಹರಿಸಲು ಕ್ರಿಯಾಶೀಲವಾಗಿ ಯತ್ನಿಸುತ್ತಿದ್ದರು- ಆದರೆ ರಾಧಾಮೋಹನ್‌ ಅಗರ್‌ವಾಲ್‌ ಅವರ ಕಡೆಯಿಂದ ಯಾವುದೇ ರೀತಿಯ ಗಂಭೀರ ಕ್ರಮಗಳು ಕಾಣುತ್ತಲೇ ಇಲ್ಲ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಜೆಐಗೆ ಸಿಜೆಪಿ ಥ್ಯಾಂಕ್ಸ್!
ಜಿರಳೆಗೆ ಕೊನೆಗೂ ಪ್ರಧಾನ್‌ ಬಲಿ