ಪಶ್ಚಿಮ ಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ 2ನೇ ದಿನವೂ ಹಿಂಸಾಚಾರಕ್ಕೆ ತಿರುಗಿದೆ. ಮುರ್ಷಿದಾಬಾದ್ ಶನಿವಾರ ಉದ್ವಿಗ್ನಗೊಂಡಿದ್ದು ಅಲ್ಲಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವ ಕೃತ್ಯಗಳು ನಡೆದಿವೆ.
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ 2ನೇ ದಿನವೂ ಹಿಂಸಾಚಾರಕ್ಕೆ ತಿರುಗಿದೆ. ಮುರ್ಷಿದಾಬಾದ್ ಶನಿವಾರ ಉದ್ವಿಗ್ನಗೊಂಡಿದ್ದು ಅಲ್ಲಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವ ಕೃತ್ಯಗಳು ನಡೆದಿವೆ. ಈ ವೇಳೆ 3 ಮಂದಿ ಬಲಿಯಾಗಿದ್ದಾರೆ. ಒಂದು ನಿರ್ದಿಷ್ಟ ಸಮುದಾಯದ ಆಸ್ತಿಪಾಸ್ತಿ ಭಾರಿ ಹಾನಿಗೀಡಾಗಿವೆ.
ಮುಸ್ಲಿಂ ಬಹುಸಂಖ್ಯಾತ ಜಿಲ್ಲೆ ಮುರ್ಷಿದಾಬಾದ್‌ನ ಸಮ್ಸರ್‌ಗಂಜ್ ಧುಲಿಯನ್ ಮತ್ತು ಸುಟಿ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಗಲಭೆ ನಡೆದಿದೆ. ಶುಕ್ರವಾರ ಕೂಡ ಅಲ್ಲಿ ಪ್ರತಿಭಟನಾಕಾರರು ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ, ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರ ಪರಿಣಾಮ ಹಲವು ಪ್ರಯಾಣಿಕರು ಮತ್ತು ಸಿಬ್ಬಂದಿ ಗಾಯಗೊಂಡಿದ್ದರು. ಶನಿವಾರವೂ ಅಲ್ಲಿ ಹಿಂಸಾಚಾರದ ಮುಂದುವರಿದಿದೆ. ಹಿಂದುಗಳ ಆಸ್ತಿಪಾಸ್ತಿಗಳು, ವಾಹನಗಳ ಮೇಲೆ ಒಂದು ನಿರ್ದಿಷ್ಟ ಸಮುದಾಯದ ಜನ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ವೇಳೆ ಇಲ್ಲಿನ ಜಫರಾಬಾದ್ ಎಂಬಲ್ಲಿ ಚಾಕು ಇರಿತದಿಂದ ತಂದೆ-ಮಗ ಸಾವನ್ನಪ್ಪಿದ್ದಾರೆ ಹಾಗೂ ಓರ್ವ ವ್ಯಕ್ತಿ ಗುಂಡಿಗೆ ಬಲಿಯಾಗಿದ್ದಾನೆ.
ಈ ಬಗ್ಗೆ ಎಡಿಜಿ ಜಾವೇದ್ ಶಮೀಮ್ ಪ್ರತಿಕ್ರಿಯಿಸಿದ್ದು, ‘ಸ್ಥಳೀಯರ ಪೊಲೀಸರರು ಆತನಿಗೆ ಗುಂಡು ಹಾರಿಸಿಲ್ಲ ಎನ್ನಿಸುತ್ತದೆ. ಬಿಎಸ್‌ಎಫ್ ಕಡೆಯಿಂದ ಆಗಿರಬಹುದು’ ಎಂದಿದ್ದಾರೆ.
ಇನ್ನು ಹಿಂಸಾಚಾರದ ನಂತರ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಎಸ್‌ಎಫ್ ಪಡೆಯನ್ನು ನಿಯೋಜಿಸಲಾಗಿದೆ. ಶುಕ್ರವಾರ ನಡೆದ ಗಲಭೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಸುಮಾರು 118 ಜನರನ್ನು ಬಂಧಿಸಿದ್ದಾರೆ.
ಕೇಂದ್ರೀಯ ಪಡೆ ನಿಯೋಜನೆಗೆ ಆದೇಶ:
ಈ ನಡುವೆ, ಹಿಂಸೆ ಹತ್ತಿಕ್ಕಲು ಕೇಂದ್ರೀಯ ಪಡೆಗಳ ನಿಯೋಜನೆಗೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿದೆ. ಕೇಂದ್ರ ಪಡೆಗಳ ನಿಯೋಜನೆಗೆ ಬಿಜೆಪಿ ಅರ್ಜಿ ಸಲ್ಲಿಸಿತ್ತು.
ಎನ್ಐಎ ತನಿಖೆಗೆ ಬಿಜೆಪಿ ಪಟ್ಟು:
ಘಟನೆಯ ಎನ್ಐಎ ತನಿಖೆಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆಗ್ರಹಿಸಿದ್ದು, ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದಾರೆ. ‘ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರೇ ಹಿಂಸೆ ಪ್ರಚೋದಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಕೇಂದ್ರದ ವಿರುದ್ಧ ದೀದಿ ಸಡ್ಡು ಮೊದಲಲ್ಲ
ಕೇಂದ್ರದ ನಿಯಮಗಳಿಗೆ ಮಮತಾ ಬ್ಯಾನರ್ಜಿ ಸಡ್ಡು ಹೊಡೆದಿದ್ದು ಇದು ಮೊದಲೇನಲ್ಲ. ಈ ಹಿಂದೆ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೆ ತಂದರೂ ಅದನ್ನು ಈವರೆಗೂ ಮಮತಾ ಬಂಗಾಳದಲ್ಲಿ ಜಾರಿ ಮಾಡಿಲ್ಲ. ಇನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಜಾರಿ ಮಾಡಲು ನಾವು ಅವಕಾಶ ನೀಡಲ್ಲ ಎಂದು ಮಮತಾ ಗುಡುಗಿದ್ದರು.
ವಕ್ಫ್ ಕಾಯ್ದೆ ಜಾರಿ ಮಾಡಲ್ಲ: ಮಮತಾಶಾಂತವಾಗಿರಿ ಇರಿ ಎನ್ನುವುದು ಎಲ್ಲ ಧರ್ಮದವರಿಗೆ ನನ್ನ ಮನವಿ. ಧರ್ಮದ ಹೆಸರಿನಲ್ಲಿ ಯಾವುದೇ ಅಧರ್ಮೀಯ ವರ್ತನೆಯಲ್ಲಿ ತೊಡಗಬೇಡಿ. ಗಲಭೆಗಳನ್ನು ಪ್ರಚೋದಿಸುವವರು ಸಮಾಜಕ್ಕೆ ಹಾನಿ ಮಾಡುತ್ತಿದ್ದಾರೆ.
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ
ಹಿಂಸಾಚಾರ ಏಕೆ?
ವಕ್ಫ್ ಮಂಡಳಿಗೆ ತಿದ್ದುಪಡಿ ಮಾಡಿ ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸ ಮಸೂದೆ ಅಂಗೀಕರಿಸಿ ಆ ಕುರಿತು ಅಧಿಸೂಚನೆ ಕೂಡಾ ಹೊರಡಿಸಿದೆ
ಇದನ್ನು ವಿರೋಧಿಸಿ ಮುರ್ಷಿದಾಬಾದ್‌ನಲ್ಲಿ ಭಾರೀ ಪ್ರಮಾಣದ ಪ್ರತಿಭಟನೆ, ಕಲ್ಲುತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿ ಭಾರೀ ಹಿಂಸಾಚಾರ
ಪ್ರತಿಭಟನೆ ವೇಳೆ ಮುರ್ಷಿದಾಬಾದ್ ಸೇರಿ ಹಲವೆಡೆ ನಿರ್ದಿಷ್ಟ ಸಮುದಾಯದ ಜನರ ಆಸ್ತಿಪಾಸ್ತಿಗೆ ಹಾನಿ, ವಾಹನಗಳನ್ನು ಅಡ್ಡಗಟ್ಟಿ ಬೆದರಿಕೆ
ಈ ವೇಳೆ ನಗರದ ಜಫರಾಬಾದ್ ಎಂಬಲ್ಲಿ ಚಾಕು ಇರಿತದಿಂದ ತಂದೆ-ಮಗ ಸಾವನ್ನಪ್ಪಿದ್ದರೆ, ಓರ್ವ ವ್ಯಕ್ತಿ ಗುಂಡಿಗೆ ಬಲಿಯಾದ ಘಟನೆ ನಡೆದಿದೆ
ಹಿಂಸೆ ತಡೆಗೆ ಕೇಂದ್ರೀಯ ಪಡೆ ನಿಯೋಜನೆಗೆ ಬಿಜೆಪಿ ಮನವಿ. ಮನವಿ ಪುರಸ್ಕರಿಸಿದ ಹೈಕೋರ್ಟ್‌ನಿಂದ ಕೇಂದ್ರೀಯ ಪಡೆ ನಿಯೋಜನೆಗೆ ಸೂಚನೆ