;Resize=(412,232))
ನವದೆಹಲಿ: 13 ಜನರನ್ನು ಬಲಿಪಡೆದ ದೆಹಲಿಯ ಕೆಂಪುಕೋಟೆ ಬಳಿಯ ಕಾರು ಸ್ಫೋಟಕ್ಕೆ 2 ಕೇಜಿಗೂ ಅಧಿಕ ಅಮೋನಿಯಂ ನೈಟ್ರೇಟ್ ಮತ್ತು ಪೆಟ್ರೋಲಿಯಂ ಬಳಕೆಯಾಗಿದೆ ಎಂದು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿವೆ.
ಇದುವರೆಗೆ ಸಂಗ್ರಹಿಸಿ ಸ್ಫೋಟಕದ 52 ಮಾದರಿಗಳ ಅಧ್ಯಯನದ ಅನ್ವಯ ಅಮೋನಿಯಂ ನೈಟ್ರೇಟ್, ಪೆಟ್ರೋಲಿಯಂ ಮತ್ತು ಸ್ಫೋಟಕ ವಸ್ತುಗಳನ್ನು ಬಳಸಿ ಬಾಂಬ್ ತಯಾರಿಸಿರುವುದು ಕಂಡುಬಂದಿದೆ. ಇಂಥ ಬಾಂಬ್ ತಯಾರಿಯಲ್ಲಿ ಕಾರು ಸ್ಫೋಟದ ವೇಳೆ ಸಾವನ್ನಪ್ಪಿದ ವೈದ್ಯ ಉಮರ್ ಅಲಿ ನಿಷ್ಣಾತನಾಗಿದ್ದ. ಆತ ಕೇವಲ 5 ರಿಂದ 10 ನಿಮಿಷಗಳಲ್ಲಿ ಈ ಸ್ಫೋಟಕಗಳನ್ನು ತಯಾರಿಸಿರಬಹುದು ಎನ್ನುವ ಅನುಮಾನವನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ನವದೆಹಲಿ: ದೆಹಲಿ ಸ್ಫೋಟ ಜಾಲಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ವೈದ್ಯರು ಮತ್ತು ಇಬ್ಬರು ರಸಗೊಬ್ಬರ ವ್ಯಾಪಾರಿಗಳನ್ನು ಬಂಧಿಸಲಾಗಿದೆ. ಬಂಧಿತ ಡಾ.ಮೊಹಮ್ಮದ್ ಮತ್ತು ಡಾ. ಮುಸ್ತಾಕಿಂ ಹರ್ಯಾಣದ ನುಹ್‌ನವರಾಗಿದ್ದು, ಸ್ಫೋಟದಲ್ಲಿ ಮೃತ ಡಾ.ನಬಿಯ ಆತ್ಮೀಯ ಗೆಳೆಯರಾಗಿದ್ದರು. ಅಲ್ಲದೇ ಬಂಧಿತ ಮುಜಮ್ಮಿಲ್‌ಗೂ ಪರಿಚಯಸ್ಥರಾಗಿದ್ದರು.
ಇದೇ ವೇಳೆ ಹರ್ಯಾಣದ ಸೊಹ್ನಾದಲ್ಲಿ ದಿನೇಶ್ ಎಂಬ ರಾಸಾಯನಿಕ ಮಾರಾಟಗಾರನನ್ನು ಸಹ ವಶಕ್ಕೆ ಪಡೆದಿದ್ದು, ಈತ ಪರವಾನಗಿ ಇಲ್ಲದೆಯೇ ಬಾಂಬ್‌ಗೆ ಬೇಕಾದ ಎನ್‌ಪಿಕೆ ಫರ್ಟಿಲೈಸರ್ಸ್ ಸೇರಿ ಬರೋಬ್ಬರಿ 26 ಲಕ್ಷ ರು.ವಿನ ರಾಸಾಯನಿಕಗಳನ್ನು ಪೂರೈಸಿದ್ದ ಇವನೊಂದಿಗೆ ಮತ್ತೋರ್ವನನ್ನು ಸಹ ವಶಕ್ಕೆ ಪಡೆಯಲಾಗಿದೆ. ಅಲ್ ಫಲಾಹ್ ಆಸ್ಪತ್ರೆಯ ಮಾಜಿ ಉದ್ಯೋಗಿಯಾಗಿದ್ದ ಪಠಾಣ್‌ಕೋಟ್‌ನ ವೈದ್ಯನೋರ್ವನನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಕೆಂಪುಕೋಟೆ ದುರಂತ ಎಷ್ಟು ಭೀಕರವಾಗಿತ್ತು ಎನ್ನುವುದಕ್ಕೆ ಮತ್ತೊಂದು ಸಿಸಿಟೀವಿ ದೃಶ್ಯ ಲಭ್ಯವಾಗಿದೆ. ಕೆಂಪುಕೋಟೆ ಮೆಟ್ರೋ ನಿಲ್ದಾಣದ ಒಳಗೆ 40 ಆಳದ ಪ್ರದೇಶದಲ್ಲೂ ಭಾರೀ ಕಂಪನ ಸಂಭವಿಸಿದೆ. ಮೆಟ್ರೋ ನಿಲ್ದಾಣದ ಅಂಗಡಿಯಲ್ಲಿ ಕುಳಿತಿದ್ದ ವ್ಯಕ್ತಿಗಳು ಮತ್ತು ಅಲ್ಲಿ ನಿಂತಿದ್ದ ಪ್ರಯಾಣಿಕರು ಸ್ಫೋಟದ ಸದ್ದಿಗೆ ಬೆಚ್ಚಿ ಬಿದ್ದ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿದೆ.