ಹುಡುಕಿ ಹುಡುಕಿ ತೆರೆಮರೆ ಸಾಧಕರಿಗೆ ಪದ್ಮ ಗೌರವ

KannadaprabhaNewsNetwork |  
Published : Jan 27, 2024, 01:17 AM ISTUpdated : Jan 27, 2024, 08:00 AM IST
ಪದ್ಮ ಪ್ರಶಸ್ತಿಗಳು | Kannada Prabha

ಸಾರಾಂಶ

ಈ ಬಾರಿಯೂ 34 ಸಾಧಕರಿಗೆ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪ್ರಕಟ ಮಾಡಲಾಗಿದೆ.

ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ನಾಗರಿಕ ಪುರಸ್ಕಾರಕ್ಕೆ ಈ ಬಾರಿಯೂ ತೆರೆಮರೆಯ ಹಲವು ಸಾಧಕರನ್ನು ಆಯ್ಕೆ ಮಾಡಲಾಗಿದೆ. 

‘ಹಸ್ತಿ ಕನ್ಯಾ’ ಎಂದೇ ಜನಪ್ರಿಯರಾಗಿರುವ ಭಾರತದ ಮೊದಲ ಮಹಿಳಾ ಮಾವುತ ಪ್ರಭಾತಿ ಬರುವಾ, ಬುಡಕಟ್ಟು ಪರಿಸರ ಪ್ರೇಮಿ ಚಾಮಿ ಮುರ್ಮು ಸೇರಿದಂತೆ 34 ಮಂದಿ ತೆರೆಮರೆಯ ಸಾಧಕರು ಈ ಬಾರಿ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. 

ಪದ್ಮಶ್ರೀ ಗೌರವ ಪಡೆದ ತೆರೆಮರೆ ಸಾಧಕರ ವಿವರ ಇಂತಿದೆ.

ಜಾಗೇಶ್ವರ್‌ ಯಾದವ್‌: ಸಮಾಜ ಸೇವೆ
ಛತ್ತೀಸ್‌ಗಢದಲ್ಲಿ ನೆಲೆಸಿರುವ ಇವರು ರಾಜ್ಯದ ಬುಡಕಟ್ಟು ಸಮುದಾಯಗಳ ಸಬಲೀಕರಣ ಮತ್ತು ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಶ್ರಮಿಸಿದ್ದಾರೆ. 

ಚೆಲ್ಲಮಾಲ್‌: ಕೃಷಿ
ಅಂಡಮಾನ್‌ ನಿಕೋಬಾರ್‌ನಲ್ಲಿ 10 ಎಕರೆ ಪ್ರದೇಶದಲ್ಲಿ 150 ರೀತಿಯಲ್ಲಿ ಮಿಶ್ರತಳಿಯ ಬೆಳೆಗಳನ್ನು ಬೆಳೆದಿದ್ದಾರೆ ಮತ್ತು ಇತರರಿಗೂ ಸಾವಯವ ಕೃಷಿ ಮಾಡಲು ಪ್ರೋತ್ಸಾಹಿಸಿದ್ದಾರೆ. ಇವರು ತೆಂಗಿನ ತಾಯಿ ಎಂದೇ ಪ್ರಸಿದ್ಧರಾಗಿದ್ದಾರೆ. 

ಸಂಗ್ತಾಂಕಿಮ: ಸಮಾಜ ಸೇವೆ
ಮಿಜೋರಂನಲ್ಲಿ ಮಕ್ಕಳ ಅತಿ ದೊಡ್ಡ ಅನಾಥಾಲಯವನ್ನು ನಡೆಸುತ್ತಿದ್ದಾರೆ. ಅಲ್ಲದೆ 4 ದಶಕಗಳ ಕಾಲ ವಿವಿಧ ಮಾರಣಾಂತಿಕ ರೋಗಿಗಳಿಗೆ ಚಿಕಿತ್ಸೆಗೆ ನೆರವಾಗಿದ್ದಾರೆ. ಹೇಮ್‌ಚಂದ್‌ ಮಾಂಜಿ: ವೈದ್ಯಕೀಯಛತ್ತೀಸ್‌ಗಢದ ಅರಣ್ಯಗಳಲ್ಲಿ ಸಿಗುವ ವೈದ್ಯಕೀಯ ಸಸ್ಯಗಳಿಂದ ಜನರಿಗೆ ಸಾಂಪ್ರದಾಯಿಕ ಚಿಕಿತ್ಸೆ ನೀಡುತ್ತಿದ್ದಾರೆ. ಇವರು ನಕ್ಸಲ್‌ ದಾಳಿಗೆ ತುತ್ತಾದರೂ ಎದೆಗುಂದದೆ ತಮ್ಮ ಸೇವೆ ಮುಂದುವರೆಸಿದ್ದಾರೆ.

ಯಾನುಂಗ್‌ ಜಮೋಹ್‌ ಲೇಗೋ: ವೈದ್ಯಕೀಯ
ಅರುಣಾಚಲ ಪ್ರದೇಶದಲ್ಲಿ ಇವರು ಸ್ವಸಹಾಯ ಸಂಘವನ್ನು ನಡೆಸುತ್ತಿದ್ದು, 1 ಲಕ್ಷಕ್ಕೂ ಹೆಚ್ಚು ಜನರಿಗೆ ಆಯುಷ್‌ ಔಷಧಿಗಳ ಕುರಿತು ಶಿಕ್ಷಣ ನೀಡಿದ್ದಾರೆ.

ಉದಯ್‌ ವಿಶ್ವನಾಥ್‌ ದೇಶಪಾಂಡೆ: ಕ್ರೀಡೆ
ಮಹಾರಾಷ್ಟ್ರದಲ್ಲಿ ನೆಲೆಸಿರುವ ಇವರು, ಮಲ್ಲಕಂಬ ಕ್ರೀಡೆಯ ಕೋಚ್‌ ಆಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿಗೆ ಮಲ್ಲಕಂಬ ತರಬೇತಿ ನೀಡಿದ್ದಾರೆ. 

ಯಾಜ್ದಿ ಮಾಣಿಕ್‌ಶಾ ಇಟಾಲಿಯಾ: ವೈದ್ಯಕೀಯ
ಗುಜರಾತ್‌ನಲ್ಲಿ ನೆಲೆಸಿರುವ ಇವರು, ಭಾರತದ ಮೊದಲ ಸಿಕಲ್‌ ಜೀವಕೋಶ ಅನಿಮಿಯಾ ನಿಯಂತ್ರಣ ಕಾರ್ಯಕ್ರಮದ ಯಶಸ್ಸಿಗೆ ಕೊಡುಗೆ ನೀಡಿದ್ದಾರೆ.

ರತನ್‌ ಕಹರ್‌: ಕಲೆ
ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಇವರು, ಭಾಡ್‌ ಶೈಲಿಯ ಜಾನಪದ ಸಂಗೀತಗಾರರಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಕೊಡುಗೆ ನೀಡಿದ್ದಾರೆ.

ಬಾಲಕೃಷ್ಣನ್: ಕಲೆ
ಕೇರಳದಲ್ಲಿ ನೆಲೆಸಿರುವ ಇವರು ಕಥಕ್ಕಳಿ ನೃತ್ಯಗಾರರಾಗಿ ಆರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಶೇಕ್ಸ್‌ಪಿಯರ್‌ ನಾಟಕಗಳನ್ನು ಭಾರತದ ಸೊಗಡಿನೊಂದಿಗೆ ಅಭಿನಯಿಸಿದ್ದಾರೆ.

ಪ್ರಭಾರಿ ಬರುವಾ: ಸಾಮಾಜಿಕ ಸೇವೆ
ಅಸ್ಸಾಂನ ಭಾರತದ ಮೊದಲ ಮಹಿಳಾ ಮಾವುತಳಾಗಿರುವ ಈಕೆ 4 ದಶಕಗಳಿಂದ 3 ರಾಜ್ಯಗಳಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದ್ದಾರೆ.

ಚಾಮಿ ಮುರ್ಮು: ಸಾಮಾಜಿಕ ಸೇವೆ
ಜಾರ್ಖಂಡ್‌ನಲ್ಲಿ ‘ಸಹಯೋಗಿ ಮಹಿಳಾ’ ಎಂಬ ಎನ್‌ಜಿಒ ಮೂಲಕ 40 ಗ್ರಾಮಗಳ 3 ಸಾವಿರಕ್ಕೂ ಹೆಚ್ಚು ಮಹಿಳೆಯರ ಸಹಯೋಗದಲ್ಲಿ 30 ಲಕ್ಷ ಮರಗಳ ಪೋಷಣೆ ಮಾಡಿದ್ದಾರೆ. ಜೊತೆಗೆ ಅನೇಕ ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಿಸಿದ್ದಾರೆ.

ಗುರ್ವಿಂದರ್‌ ಸಿಂಗ್‌: ಸಮಾಜ ಸೇವೆ
ಹರ್ಯಾಣದಲ್ಲಿ ಅಂಗವಿಕಲರು, ಮಹಿಳೆಯರು, ಅಶಕ್ತರು ಮತ್ತು ಅನಾಥರಿಗಾಗಿ ದುಡಿಯುತ್ತಿರುವ ಚೇತನವಾಗಿದ್ದಾರೆ. ಇವರು ಬಾಲ್‌ ಗೋಪಾಲ್‌ ಧಾಮ್‌ನಲ್ಲಿ 3000 ಅನಾಥ ಮಕ್ಕಳ ಲಾಲನೆ ಪೋಷಣೆ ಮಾಡಿದ್ದಾರೆ. 6 ಸಾವಿರಕ್ಕೂ ಹೆಚ್ಚು ಗರ್ಭಿಣಿಯರು ಮತ್ತು ಅಪಘಾತಗೊಂಡ ವ್ಯಕ್ತಿಗಳನ್ನು ಉಚಿತ ಆ್ಯಂಬುಲೆನ್ಸ್‌ನ ಸೇವೆ ಒದಗಿಸಿ ರಕ್ಷಣೆ ಮಾಡಿದ್ದಾರೆ.

ಸತ್ಯನಾರಾಯಣ ಬೇಲೇರಿ: ಕೃಷಿ
ಕೇರಳದ ಕಾಸರಗೋಡಿನಲ್ಲಿ ರಾಜ್ಯಕಾಮಾನೆ ಎಂಬ ಹೊಸ ಭತ್ತ ತಳಿಯನ್ನು ಅನ್ವೇಷಿಸಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಭತ್ತ ಸಂರಕ್ಷಣಾ ಅಭಿಯಾನದಲ್ಲಿ ತೊಡಗಿದ್ದಾರೆ. ಇವರು ಭತ್ತದ 650 ತಳಿಗಳನ್ನು ಸಂರಕ್ಷಿಸಿದ್ದಾರೆ. 

ದುಖು ಮಜಿ: ಸಾಮಾಜಿಕ ಸೇವೆ
ಪಶ್ಚಿಮ ಬಂಗಾಳದ ಬರಡು ಭೂಮಿಯಲ್ಲಿ 5000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ಸಂರಕ್ಷಣೆ ಮಾಡಿದ್ದಾರೆ. ಇವರಿಗೆ ಸದ್ಯ 78 ವರ್ಷ ವಯಸ್ಸಾಗಿದ್ದು, ಇಳಿವಯಸ್ಸಿನಲ್ಲೂ ಸೇವೆ ಮುಂದುವರೆದಿದೆ. 12ನೇ ವಯಸ್ಸಿನಿಂದಲೇ ವೃಕ್ಷಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪಾಸ್ವಾನ್‌ ದಂಪತಿ: ಕಲೆ
ಬಿಹಾರದಲ್ಲಿ ನೆಲೆಸಿರುವ ಶಾಂತಿದೇವಿ ಪಾಸ್ವಾನ್‌ ಮತ್ತು ಶಿವನ್‌ ಪಾಸ್ವಾನ್‌ ದಂಪತಿ ಗೋಡ್ನಾ ಚಿತ್ರಕಲಾಕಾರರಾಗಿದ್ದು, 20 ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ತರಬೇತುಗೊಳಿಸಿದ್ದಾರೆ.

ಅಶೋಕ್‌ ಕುಮಾರ್‌ ಬಿಸ್ವಾಸ್‌: ಕಲೆ 
(ಬಿಹಾರ)5 ದಶಕಗಳ ಸತತ ಪರಿಶ್ರಮದಿಂದ ಮೌರ್ಯರ ಕಾಲದ ಚಿತ್ರಕಲೆಯ ಪರಂಪರೆಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಇವರು ಹಲವು ದೇಶಗಳಲ್ಲಿ ಚಿತ್ರ ಪ್ರದರ್ಶನ ಮಾಡಿದ್ದು, 2000 ಕ್ಕೂ ಹೆಚ್ಚು ಮಂದಿಗೆ ತರಬೇತಿಯನ್ನೂ ನೀಡಿದ್ದಾರೆ.

ಉಮಾ ಮಹೇಶ್ವರಿ: ಕಲೆ
ಆಂಧ್ರಪ್ರದೇಶದಲ್ಲಿ ನೆಲೆಸಿರುವ ಇವರು ದೇಶದಲ್ಲೇ ಮೊದಲ ಮಹಿಳಾ ಹರಿಕಥಾ ಗಾಯಕಿ ಮತ್ತು ವಾಚಕಿಯಾಗಿ ಪ್ರಸಿದ್ಧಿ ಗಳಿಸಿದ್ದಾರೆ.

ಗೋಪಿನಾಥ್‌ ಸ್ವೇನ್‌: ಕಲೆ (ಮರಣೋತ್ತರ)
ಶತಾಯುಷಿಗಳಾಗಿರುವ ಇವರು ಒಡಿಶಾದಲ್ಲಿ ನೆಲೆಸಿದ್ದು, ತಮ್ಮ ಇಡೀ ಜೀವನವನ್ನು ನಾಡಿನ ಪ್ರಾಚೀನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮುಡಿಪಾಗಿಟ್ಟಿದ್ದಾರೆ. ಅಖಾಡ ಶಾಲೆಗಳನ್ನು ಸ್ಥಾಪಿಸಿ ಇಳಿ ವಯಸ್ಸಿನಲ್ಲೂ ಮಕ್ಕಳಿಗೆ ಸಂಗೀತ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ.

ಸನಾತನ ರುದ್ರ ಪಾಲ್‌: ಕಲೆ
ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಇವರು ಶಿಲ್ಪಕಲಾವಿದರಾಗಿದ್ದಾರೆ. ಇವರು ಕೆತ್ತಿರುವ ದುರ್ಗಾದೇವಿಯ ವಿಗ್ರಹಗಳು ಯುನೆಸ್ಕೋ ಮಾನ್ಯತೆಯನ್ನು ಪಡೆದಿವೆ. ಇವರು ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿದ್ದಾರೆ.

ಮಚಿಹನ್‌ ಸಾಶಾ: ಕಲೆ
ಮಣಿಪುರದಲ್ಲಿ ನೆಲೆಸಿರುವ ಇವರು ಸಾಂಪ್ರದಾಯಿಕ ಲಾಂಗ್ಪಿ ಮಡಿಕೆ ತಯಾರಿಕಾ ವಿಧಾನದ ಸಂರಕ್ಷಣೆಗೆ 5 ದಶಕಗಳ ಕಾಲ ಶ್ರಮಿಸಿದ್ದಾರೆ. ಈ ವಿಧಾನದಲ್ಲಿ ಚಕ್ರದ ಬಳಕೆಯಿಲ್ಲದೆ ಮಡಿಕೆಗಳನ್ನು ಮಾಡಲಾಗುತ್ತದೆ.

ಗದ್ದಂ ಸಮ್ಮಯ್ಯ: ಕಲೆ
ತೆಲಂಗಾಣದ ಜಲಗಾಂವ್‌ನಲ್ಲಿ ನೆಲೆಸಿರುವ ಇವರು 5 ದಶಕಗಳ ಕಾಲ 19 ಸಾವಿರಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಇದಕ್ಕಾಗಿ ಎರಡು ಯಕ್ಷಗಾನ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.

ದಾಸರಿ ಕೊಂಡಪ್ಪ: ಕಲೆ
ತೆಲಂಗಾಣದಲ್ಲಿ ವೀಣಾ ವಾದಕರಾಗಿರುವ ಇವರು, ತತ್ವಾಲುಗಳನ್ನು, ಬುರ್ರಾ ವೀಣಾ ವಾದನವನ್ನು 6 ದಶಕಗಳ ಕಾಲ ತೆಲುಗು ಮತ್ತು ಕನ್ನಡದಲ್ಲಿ ಹಾಡುತ್ತಾ ಈ ಕಲೆಯನ್ನು ಸಂರಕ್ಷಿಸಿದ್ದಾರೆ.

ನೇಪಾಳ್‌ ಚಂದ್ರ ಸೂತ್ರಧಾರ್‌: ಕಲೆ (ಮರಣೋತ್ತರ)
ಪಶ್ಚಿಮ ಬಂಗಾಳದಲ್ಲಿ ಇವರು ಆರು ದಶಕಗಳ ಕಾಲ ಮಣ್ಣಿನಿಂದ ಮುಖವಾಡವನ್ನು ಮಾಡುವ ಚಾವು ಕಲೆಯನ್ನು ಸಂರಕ್ಷಿಸಿ ಪೋಷಿಸುತ್ತಿದ್ದಾರೆ.

ಜೊರ್ಡಾನ್‌ ಲೆಪ್ಚಾ: ಕಲೆ
ಸಿಕ್ಕಿಂನಲ್ಲಿ ನೆಲೆಸಿರುವ ಇವರು ಕಳೆದ 25 ವರ್ಷಗಳಿಂದ ಬಿದಿರು ಬಳಸಿ ಟೋಪಿಗಳನ್ನು ಮಾಡುತ್ತಾ ಇತರರಿಗೂ ಹೇಳಿಕೊಟ್ಟು ಕಲೆಯನ್ನು ಸಂರಕ್ಷಿಸುವಲ್ಲಿ ಶ್ರಮಿಸಿದ್ದಾರೆ.

ಚಾರ್ಲೋಟ್‌ ಚೋಪಿನ್‌: ಯೋಗ
ಶತಾಯುಷಿಗಳಾಗಿರುವ ಇವರು ಫ್ರಾನ್ಸ್‌ನಲ್ಲಿ ನೆಲೆಸಿದ್ದು, ತಮ್ಮ 50ನೇ ವಯಸ್ಸಿನ ನಂತರ ಯೋಗಾಸನ ಕಲಿತು ಹಲವು ಮಂದಿಗೆ ಯೋಗಾ ಕಲಿಸಿಕೊಡುತ್ತಿದ್ದಾರೆ.

ಪಿ ಸಿ ನಂಬೂದಿರಿಪಾಡ್‌: ಶಿಕ್ಷಣ (ಮರಣೋತ್ತರ)
ಶತಾಯುಷಿಗಳಾಗಿದ್ದ ಇವರು ತ್ರಿಶ್ಶೂರ್‌ ಬಳಿ ಶಾಲೆಯೊಂದನ್ನು ಸ್ಥಾಪಿಸಿ ಹೆಸರುವಾಸಿಯಾಗಿದ್ದರು. ನಂತರ ಕೇರಳ ಸರ್ಕಾರದಲ್ಲಿ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಕಲೆಗೆ ಪ್ರಾಮುಖ್ಯತೆ ನೀಡಿದ್ದರು.

ಗುಲಾಂ ನಬಿ ದಾರ್‌: ಕಲೆ
ಜಮ್ಮು ಕಾಶ್ಮೀರದಲ್ಲಿ ನೆಲೆಸಿರುವ ಇವರು, ಕಳೆದ ನಾಲ್ಕು ದಶಕಗಳಿಂದ ಮರಗೆಲಸದಲ್ಲಿ ನವೀನ ವಿನ್ಯಾಸಗಳನ್ನು ಮಾಡಿ ಪ್ರಸಿದ್ಧಿ ಗಳಿಸಿದ್ದಾರೆ. ಇವರು ವಿದೇಶಗಳಲ್ಲೂ ತಮ್ಮ ಕಲಾ ನೈಪುಣ್ಯತೆ ಪ್ರದರ್ಶಿಸಿದ್ದಾರೆ.

ಮಾಯಾ ಟಂಡನ್‌: ಸಮಾಜ ಸೇವೆ
ರಾಜಸ್ಥಾನದಲ್ಲಿ ತಮ್ಮ ನಿವೃತ್ತಿಯ ನಂತರ ಎರಡು ದಶಕಗಳಿಗೂ ಅಧಿಕ ಕಾಲ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ.

ಮೊಹಮ್ಮದ್‌ ಸೋದರರು: ಕಲೆ
ರಾಜಸ್ಥಾನದ ಅಲಿ ಮತ್ತು ಘನಿ ಮೊಹಮ್ಮದ್‌ ಸೋದರರು ಜಾನಪದ ಮಾಂಡ್‌ ಶೈಲಿಯಲ್ಲಿ ಹಾಡುತ್ತಾ ಸಾಂಪ್ರದಾಯಿಕ ಕಲೆಯನ್ನು ಪೋಷಿಸುವಲ್ಲಿ 6 ದಶಕಗಳಿಗೂ ಹೆಚ್ಚು ಕಾಲ ಶ್ರಮಿಸಿದ್ದಾರೆ.

ಲಕ್ಷ್ಮಣ ಭಟ್‌ ತೈಲಾಂಗ್‌: ಕಲೆ
ರಾಜಸ್ಥಾನದಲ್ಲಿ ಹಿಂದೂಸ್ತಾನಿ ಸಂಗೀತಗಾರರಾಗಿರುವ ಇವರು ವಿನೂತನ ಪಚ್‌ರಂಗ್‌ ರಾಗವನ್ನು ಅನ್ವೇಷಿಸಿ ಆರು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಸ್ವರ ಸೇವೆ ಮಾಡಿದ್ದಾರೆ.

ಜಾನಕಿಲಾಲ್‌: ಕಲೆ
ರಾಜಸ್ಥಾನದಲ್ಲಿ ಇವರು ಬೇಹುಪ್ರಿಯ ಕಲೆಯನ್ನು ಆರು ದಶಕಗಳಿಂದ ಪೋಷಿಸಿಕೊಂಡು ಬಂದಿದ್ದಲ್ಲದೆ ವಿದೇಶಗಳಲ್ಲೂ ಪ್ರದರ್ಶನವನ್ನು ನೀಡಿ ಪ್ರಸಿದ್ಧಿ ಪಡೆದಿದ್ದಾರೆ. ಇವರು ಕೋತಿಯ ವೇಷ ಧರಿಸಿ ನೃತ್ಯ ಮಾಡುವಲ್ಲಿ ಖ್ಯಾತಿ ಗಳಿಸಿದ್ದಾರೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ