ಭಾರತದ ಮೇಲೆ ಮತ್ತೆ ಪಾಕ್‌ ಸೈಬರ್‌ ಯುದ್ಧ

KannadaprabhaNewsNetwork | Updated : May 06 2025, 05:11 AM IST

  ಪಾಕ್‌ ಮೂಲದ ಸೈಬರ್‌ ಗುಂಪುಗಳು ಭಾರತದ ಸೇನಾ ವೆಬ್‌ಸೈಟ್‌ಗಳ ಮೇಲೆ ಸೈಬರ್‌ ದಾಳಿ ನಡೆಸುವುದನ್ನು ಮುಂದುವರೆಸಿವೆ.

ನವದೆಹಲಿ: ಪಹಲ್ಗಾಂ ಉಗ್ರದಾಳಿಯ ಪ್ರತೀಕಾರಕ್ಕೆ ಭಾರತ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲಿ ಪಾಕ್‌ ಮೂಲದ ಸೈಬರ್‌ ಗುಂಪುಗಳು ಭಾರತದ ಸೇನಾ ವೆಬ್‌ಸೈಟ್‌ಗಳ ಮೇಲೆ ಸೈಬರ್‌ ದಾಳಿ ನಡೆಸುವುದನ್ನು ಮುಂದುವರೆಸಿವೆ. ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ವೆಬ್‌ಪೇಜ್‌ಗಳನ್ನು ಸೋಮವಾರ ಹ್ಯಾಕ್‌ ಮಾಡಿವೆ. ಆದರೆ ಭಾರತದ ಅಧಿಕಾರಿಗಳು ಇದನ್ನು ಹಿಮ್ಮೆಟ್ಟಿಸಿದ್ದು ಪೇಜ್‌ಗಳನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

‘ಪಾಕಿಸ್ತಾನ ಸೈಬರ್‌ ಫೋರ್ಸ್‌’ ಎಂಬ ಎಕ್ಸ್‌ ಖಾತೆಯಲ್ಲಿ, ‘ಪಾಕ್‌ ಹ್ಯಾಕರ್‌ಗಳು ಮಿಲಿಟರಿ ಎಂಜಿನಿಯರ್ ಸೇವೆ ಮತ್ತು ಮನೋಹರ್ ಪರ್ರಿಕರ್ ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣಾ ಸಂಸ್ಥೆಯ ಸೂಕ್ಷ್ಮ ಮಾಹಿತಿಯನ್ನು ಪಡೆದಿದ್ದಾರೆ. ಅಂತೆಯೇ, ರಕ್ಷಣಾ ಸಚಿವಾಲಯದ ಶಸ್ತ್ರಸಜ್ಜಿತ ವಾಹನ ನಿಗಮ ಲಿ.ಯ ವೆಬ್‌ಪೇಜ್‌ ನಿಯಂತ್ರಣವನ್ನು ಪಡೆಯಲಾಗಿದೆ. ನಿಮ್ಮ ಭದ್ರತೆ ಕೇವಲ ಭ್ರಮೆ. ಪರ್ರಿಕರ್ ಸಂಸ್ಥೆಯ 1,600 ಬಳೆಕದಾರರ 10 ಜಿಬಿ ಡೇಟಾ ನಮ್ಮ ಕೈಸೇರಿದೆ’ ಎಂದು ಪೋಸ್ಟ್‌ ಮಾಡಲಾಗಿದೆ. ಇದರೊಂದಿಗೆ, ವೆಬ್‌ಪೇಜ್‌ನಲ್ಲಿದ್ದ ಭಾರತೀಯ ಯುದ್ಧ ಟ್ಯಾಂಕ್‌ಗಳ ಜಾಗದಲ್ಲಿ ಪಾಕಿಸ್ತಾನದ ಟ್ಯಾಂಕ್‌ಗಳು ಇರುವ ಮತ್ತು ಭಾರತೀಯ ರಕ್ಷಣಾ ಸಿಬ್ಬಂದಿಯ ಮಾಹಿತಿಯಿರುವ ಪಟ್ಟಿಯ ಫೋಟೋಗಳನ್ನೂ ಹಂಚಿಕೊಳ್ಳಲಾಗಿದೆ. ಶಸ್ತ್ರಸಜ್ಜಿತ ವಾಹನ ನಿಗಮದ ವೆಬ್‌ಸೈಟ್‌ನಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಗಿದೆ.

ಭಾರತದ ಕ್ರಮವೇನು?: ಮುಂಜಾಗೃತಾ ಕ್ರಮವಾಗಿ ಶಸ್ತ್ರಸಜ್ಜಿತ ವಾಹನ ನಿಗಮ ವೆಬ್‌ಸೈಟ್‌ಅನ್ನು ಆಫ್‌ಲೈನ್‌ ಮೋಡ್‌ಗೆ ತರಲಾಗಿದ್ದು, ಆಗಿರಬಹುದಾದ ಹಾನಿಯನ್ನು ಪರಿಶೀಲಿಸಲಾಗುತ್ತಿದೆ. ಅತ್ತ, ‘ಸಂಭವನೀಯ ಸೈಬರ್‌ ದಾಳಿಗಳನ್ನು ಗುರುತಿಸಿ ತಡೆಹಿಡಿಯಲು ಸೈಬರ್‌ ಭದ್ರತಾ ತಜ್ಞರು ಮತ್ತು ಸಂಸ್ಥೆಗಳು ಇಂತಹ ದಾಳಿಗಳ ಮೇಲೆ ಕಣ್ಣಿಟ್ಟಿವೆ’ ಎಂದು ಭಾರತೀಯ ಸೇನೆ ತಿಳಿಸಿದೆ.

ಈ ಮೊದಲೊಮ್ಮೆ ಪಾಕ್‌ನ ಸೈಬರ್‌ ದಾಳಿಕೋರರು ಜಮ್ಮುವಿನ ಸೈನಿಕ ಶಾಲೆಯ ವೆಬ್‌ಸೈಟ್‌ ಹ್ಯಾಕಿ ಮಾಡಿ, ಪಹಲ್ಗಾಂ ದಾಳಿಯಲ್ಲಿ ಮಡಿದವರ ಅಪಹಾಸ್ಯ ಮಾಡಿತ್ತು.