ಪಾಕ್‌ ಬಳಿ 4 ದಿನಕ್ಕಾಗುವಷ್ಟೇ ಮದ್ದು ಗುಂಡು !

KannadaprabhaNewsNetwork | Updated : May 05 2025, 06:43 AM IST

ಸಾರಾಂಶ

ಒಂದು ವೇಳೆ ಭಾರತದ ಜತೆಗೇನಾದರೂ ಯುದ್ಧ ನಡೆದರೆ 4 ದಿನಗಳಿಗಾಗುವಷ್ಟು ಮದ್ದುಗುಂಡುಗಳ ದಾಸ್ತಾನಷ್ಟೇ ಪಾಕಿಸ್ತಾನದ ಬಳಿ ಇದೆ.  

 ಇಸ್ಲಾಮಾಬಾದ್‌ : ಒಂದು ವೇಳೆ ಭಾರತದ ಜತೆಗೇನಾದರೂ ಯುದ್ಧ ನಡೆದರೆ 4 ದಿನಗಳಿಗಾಗುವಷ್ಟು ಮದ್ದುಗುಂಡುಗಳ ದಾಸ್ತಾನಷ್ಟೇ ಪಾಕಿಸ್ತಾನದ ಬಳಿ ಇದೆ. ಉಕ್ರೇನ್‌-ರಷ್ಯಾ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನವು ರಹಸ್ಯವಾಗಿ ಉಕ್ರೇನ್‌ಗೆ ಅದು ಮದ್ದುಗುಂಡುಗಳನ್ನು ಸರಬರಾಜು ಮಾಡಿದ್ದು, ಅದರ ಪರಿಣಾಮ ಇದೀಗ ಅದರ ಮದ್ದುಗುಂಡುಗಳ ಕೋಠಿ ಬರಿದಾಗಿದೆ ಎಂದು ಮೂಲಗಳು ತಿಳಿಸಿವೆ.

‘ಅಂತಾರಾಷ್ಟ್ರೀಯ ಬೇಡಿಕೆ ಮತ್ತು ಹಳೆಯ ಉತ್ಪಾದನಾ ವ್ಯವಸ್ಥೆಯಿಂದಾಗಿ ಪಾಕಿಸ್ತಾನದ ಮದ್ದುಗುಂಡುಗಳ ಕಾರ್ಖಾನೆಯು ಬೇಡಿಕೆಯಷ್ಟು ಉತ್ಪಾದನೆ ಮಾಡಲು ಪರದಾಡುತ್ತಿದೆ. ಅಲ್ಲದೆ, ಪಾಕಿಸ್ತಾನವು ಇತ್ತೀಚೆಗಷ್ಟೇ ಉಕ್ರೇನ್‌ ಮತ್ತು ಇಸ್ರೇಲ್‌ ಜತೆಗೆ ಮದ್ದುಗುಂಡುಗಳ ಒಪ್ಪಂದ ಮಾಡಿಕೊಂಡಿತ್ತು. ಇದರ ಪರಿಣಾಮ ಪಾಕ್‌ ಮದ್ದುಗುಂಡುಗಳ ದಾಸ್ತಾನು ಬಹುತೇಕ ಖಾಲಿಯಾಗಿದೆ’ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಪಾಕಿಸ್ತಾನದ ಅನೇಕ ನಾಯಕರು ಭಾರತ ಯಾವುದೇ ಕ್ಷಣದಲ್ಲಾದರೂ ನಮ್ಮ ಮೇಲೆ ದಾಳಿ ನಡೆಸಬಹುದು. ನಮ್ಮ ಸೇನೆ ಭಾರತಕ್ಕೆ ಸೂಕ್ತ ಪ್ರತ್ಯುತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದರೂ ಅವರ ಯುದ್ಧಸನ್ನದ್ಧತೆಯ ಸ್ಥಿತಿ ಮಾತ್ರ ಚಿಂತಾಜನಕವಾಗಿದೆ. ಮೇ 2ರಂದು ನಡೆದ ಪಾಕ್‌ ಕೋರ್‌ ಕಮಾಂಡರ್‌ಗಳ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ ಎಂದು ಅವು ಹೇಳಿವೆ.

96 ತಾಸಿಗಷ್ಟೇ ಸಾಕಾಗುವಷ್ಟು ಶಸ್ತ್ರಾಸ್ತ್ರ:

ಭಾರೀ ಪ್ರಮಾಣದ ಯುದ್ಧ ನಡೆದರೆ ಪಾಕಿಸ್ತಾನವು 96 ಗಂಟೆಗಳ ಕಾಲವಷ್ಟೇ ಯುದ್ಧ ಮಾಡಲು ಶಕ್ತವಾಗಿದೆ. ಪಾಕಿಸ್ತಾನದ ಪ್ರಮುಖ ಅಸ್ತ್ರವಾದ ಎಂ109 ಹೋವಿಡ್ಜರ್‌ಗಳಿಗೆ 155 ಎಂಎಂ ಶೆಲ್‌ಗಳು ಮತ್ತು ಬಿಎಂ-21 ಸಿಸ್ಟಂಗಳಿಗೆ 122 ಎಂಎಂ ರಾಕೆಟ್‌ಗಳ ಕೊರತೆ ಇದೆ. ಎಂದು ಸುದ್ದಿಸಂಸ್ಥೆಯ ವರದಿ ಹೇಳಿದೆ.

ಕೆಲ ಸಮಯದಿಂದ ಪಾಕಿಸ್ತಾನವು ಉಕ್ರೇನ್‌ಗೆ ಭಾರೀ ಪ್ರಮಾಣದಲ್ಲಿ 155 ಎಂಎಂ ಆರ್ಟಿಲರಿ ಪೂರೈಸಿತ್ತು ಎಂಬುದನ್ನು ಈ ವೇಳೆ ಸ್ಮರಿಸಬಹುದು.

ಈ ಹಿಂದೆ ಪಾಕ್‌ ಸೇನಾ ಮುಖ್ಯಸ್ಥರಾಗಿದ್ದ ಜ। ಕಮರ್‌ ಜಾವೇದ್‌ ಬಜ್ವಾ, ‘ಭಾರತದ ಜತೆ ಸುದೀರ್ಘ ಸಂಘರ್ಷ ನಡೆದರೆ ಶಸ್ತ್ರಾಸ್ತ್ರ ಹಾಗೂ ಹಣಕಾಸಿನ ಕೊರತೆ ಇದೆ’ ಎಂದು ಹೇಳಿದ್ದರು.

ಸತತ 10ನೇ ದಿನವೂ ಗಡಿಯಲ್ಲಿ ಗುಂಡಿನ ಚಕಮಕಿ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್‌ಒಸಿ) ವಿವಿಧ ವಲಯಗಳಲ್ಲಿ ಪಾಕಿಸ್ತಾನಿ ಪಡೆಗಳು ಅಪ್ರಚೋದಿತ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿಯನ್ನು ಮುಂದುವರೆಸಿದ್ದು, ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶನಿವಾರ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರದ 5 ಜಿಲ್ಲೆಗಳ 8 ಸ್ಥಳಗಳಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯಾಗಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ. ಪಹಲ್ಗಾಂ ದಾಳಿಯ ಬಳಿಕ ಸತತ 10ನೇ ದಿನ ಗುಂಡಿನ ಚಕಮಕಿ ಮುಂದುವರಿದಂತಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

Share this article