ನವದೆಹಲಿ : ಉಗ್ರರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಪರಸ್ಪರ ಮೇಲೆ ದಾಳಿ ನಡೆಸುತ್ತಿರುವ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ನಡುವೆ ಶನಿವಾರದಿಂದೀಚೆಗೆ ಭಾರೀ ಸಂಘರ್ಷ ಆರಂಭವಾಗಿದೆ. ಪರಸ್ಪರ ಮೇಲಿನ ದಾಳಿಯಲ್ಲಿ ಉಭಯ ದೇಶಗಳ ಮುಂಚೂಣಿ ಸೇನಾ ಠಾಣೆಗಳು ಧ್ವಂಸಗೊಂಡಿವೆ. ಜೊತೆಗೆ ಉಭಯ ಬಣಗಳು ಭಾರೀ ಪ್ರಮಾಣದಲ್ಲಿ ಎದುರಾಳಿಗಳನ್ನು ಹೊಡೆದುರುಳಿಸಿದ್ದಾಗಿ ಹೇಳಿಕೊಂಡಿವೆ. ಇದರಿಂದಾಗಿ ಗಡಿಯಲ್ಲಿ ಭಾರೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಆಫ್ಘನ್ ವಿದೇಶಾಂಗ ಸಚಿವ ಮುತ್ತಖಿ ಭಾರತಕ್ಕೆ ಭೇಟಿ ನೀಡಿದ ಹೊತ್ತಿನಲ್ಲೇ ಗುರುವಾರ ತಡರಾತ್ರಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸೇರಿದಂತೆ ಹಲವು ನಗರಗಳ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಆಫ್ಘನ್ ಸೇನೆ ಕೂಡಾ ಭಾರೀ ಪ್ರಮಾಣದಲ್ಲಿ ತಿರುಗೇಟು ನೀಡಿದೆ.
ಈ ಸಂಘರ್ಷ ಶನಿವಾರದಿಂದೀಚೆಗೆ ಮತ್ತಷ್ಟು ತೀವ್ರಗೊಂಡಿದೆ. ಅಫ್ಘಾನಿಸ್ತಾನದ 19 ಸೈನಿಕ ಹೊರಠಾಣೆ ಮತ್ತು ಉಗ್ರ ಅಡಗುತಾಣಗಳನ್ನು ವಶಪಡಿಸಿಕೊಂಡಿದ್ದಾಗಿ ಪಾಕಿಸ್ತಾನ ಹೇಳಿದೆ. ಅಲ್ಲದೆ 200ಕ್ಕೂ ಹೆಚ್ಚು ತಾಲಿಬಾನ್ ಹೋರಾಟಗಾರರು ಮತ್ತು ಅವರ ಬೆಂಬಲಿತ ಉಗ್ರರನ್ನು ಹತ್ಯೆ ಮಾಡಿದ್ದಾಗಿ ಹೇಳಿದೆ.
ಇನ್ನೊಂದೆಡೆ ತಾನು ನಡೆಸಿದ ದಾಳಿಯಲ್ಲಿ ಪಾಕ್ ಸೇನೆಯ 58 ಉಗ್ರರು ಸಾವನ್ನಪ್ಪಿದ್ದಾರೆ. ಇತರ 30 ಮಂದಿ ಗಾಯಗೊಂಡಿದ್ದಾರೆ. ಪಾಕ್ ಸೈನಿಕರಿಂದ ಹಲವಾರು ಶಸ್ತ್ರಾಸ್ತ್ರ ಮತ್ತು ಸೇನಾ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಡೂರಂಡ್ ರೇಖೆಯುದ್ದಕ್ಕೂ 20 ಭದ್ರತಾ ಠಾಣೆಗಳನ್ನು ಧ್ವಂಸಗೊಳಿಸಲಾಗಿದೆ. ಈ ವೇಳೆ 9 ಆಫ್ಘನ್ ಸೈನಿಕರು ಮೃತಪಟ್ಟಿದ್ದು, 16 ಜನ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ಮುಖ್ಯ ವಕ್ತಾರ ಜಾಬಿಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ.
ಪಾಕ್‌ಗೆ ತಕ್ಕ ಉತ್ತರ:
ಸಂಘರ್ಷದ ಕುರಿತು ಪ್ರತಿಕ್ರಿಯಿಸಿದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ, ‘ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆಯಲ್ಲಿ ನಮ್ಮ ಗುರಿಯನ್ನು ಮುಟ್ಟಿದ್ದೇವೆ. ಅಫ್ಘಾನಿಸ್ತಾನ ತನ್ನ ಸಾರ್ವಭೌಮತ್ವದ ರಕ್ಷಣೆಯನ್ನು ಮುಂದುವರಿಸುತ್ತದೆ. ಶಾಂತಿಯ ಮೂಲಕ ಸಮಸ್ಯೆಯ ಪರಿಹಾರಕ್ಕೆ ಯತ್ನಿಸುತ್ತದೆ. ಅದಕ್ಕೆ ಯಾರಾದರೂ ಒಪ್ಪದಿದ್ದರೆ, ತನ್ನ ಗಡಿಯನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಅಪ್ಘಾನಿಸ್ತಾನಕ್ಕಿದೆ’ ಎಂದು ಪಾಕ್‌ಗೆ ಎಚ್ಚರಿಕೆ ನೀಡಿದ್ದಾರೆ.