ಇಸ್ಲಾಮಾಬಾದ್: ಸಾಮಾಜಿಕ ಮಾಧ್ಯಮಗಳಲ್ಲಿ ಭಾರತದ ವಿರುದ್ಧ ತಮ್ಮ ಸೇನೆ ವಿಜಯ ಸಾಧಿಸಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದ ಪಾಕಿಸ್ತಾನಕ್ಕೆ ಇದೀಗ ಅದರದೇ ಪತ್ರಿಕೆ ಕನ್ನಡಿ ಹಿಡಿಯುವ ಕೆಲಸ ಮಾಡಿದೆ.
‘ಪಾಕಿಸ್ತಾನದ ವಾಯುಪಡೆ ಆಗಸದ ಅರಸ’ ಎಂಬ ಸುದ್ದಿ ಬ್ರಿಟನ್‌ನ ದಿ ಡೈಲಿ ಟೆಲಿಗ್ರಾಫ್ ಪತ್ರಿಕೆಯ ಮುಖಪುಟದಲ್ಲೇ ಪ್ರಕಟವಾಗಿದೆ ಎಂದು ಬಿಂಬಿಸುವಂತಹ ಪೋಸ್ಟ್ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ 66,000 ವೀಕ್ಷಣೆ ಪಡೆದಿತ್ತು. ಇದನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಕ್ ದಾರ್ ಸಂಸತ್ತಿನಲ್ಲೂ ಹೆಮ್ಮೆಯಿಂದ ಪ್ರದರ್ಶಿಸಿದ್ದರು.
ಇದರ ಸತ್ಯ ಪರಿಶೀಲನೆ(ಫ್ಯಾಕ್ಟ್‌ಚೆಕ್) ನಡೆಸಿದ ಪಾಕಿಸ್ತಾನದ ಡಾನ್ ಪತ್ರಿಕೆ, ‘ಈ ಸುದ್ದಿ ಸುಳ್ಳು. ಇಂತಹ ಯಾವುದೇ ವರದಿ ಬ್ರಿಟನ್ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ’ ಎಂದು ಹೇಳಿದೆ. ಇದರಿಂದ ದಾರ್‌ಗೆ ತಮ್ಮ ದೇಶದ ಪತ್ರಿಕೆಯೊಂದರಿಂದ ಮುಖಭಂಗವಾದಂತಾಗಿದೆ.
ಆಪ್ಘನ್ ಸಚಿವರ ಜತೆ ಜೈಶಂಕರ್ ಮಾತು: ಪಾಕ್‌ಗೆ ಹೊಸ ಶಾಕ್
ನವದೆಹಲಿ: ಭಾರತ - ಪಾಕ್ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ, ಪಾಕಿಸ್ತಾನಕ್ಕೆ ಹೊಸ ಕಂಟಕವಾಗಿ ಪರಿಣಮಿಸಿರುವ ಆಫ್ಘಾನಿಸ್ತಾನ ಸರ್ಕಾರದ ಜೊತೆ ಭಾರತ ತನ್ನ ಸಂಬಂಧ ಇನ್ನಷ್ಟು ಗಟ್ಟಿಗೊಳಿಸುವ ಹೆಜ್ಜೆಗಳನ್ನಿಟ್ಟಿದೆ. ಆಫ್ಘಾನಿಸ್ತಾನದ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಜೊತೆಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ದೂರವಾಣಿ ಮಾತುಕತೆ ನಡೆಸಿದ್ದಾರೆ.
ಆಫ್ಘನ್‌ನ ತಾಲಿಬಾನ್ ಸರ್ಕಾರದ ಜೊತೆ ಇದು ಭಾರತದ ಮೊದಲ ಸಚಿವರ ಮಟ್ಟದ ಮಾತುಕತೆಯಾಗಿದೆ.ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೈಶಂಕರ್, ‘ಆಫ್ಘನ್ ವಿದೇಶಾಂಗ ಸಚಿವ ಮೌಲವಿ ಅಮಿರ್ ಖಾನ್ ಮುಠಾಕಿ ಜತೆ ಮಾತುಕತೆ ನಡೆದಿದ್ದು, ಪಹಲ್ಗಾಂ ಹತ್ಯಾಕಾಂಡಕ್ಕೆ ಅವರ ವಿರೋಧ ಶ್ಲಾಘನಾರ್ಹ.
ಭಾರತದ ಮೇಲೆ ಆಧಾರರಹಿತ ಆರೋಪ ಮಾಡಿ, ಆಫ್ಘನ್ ಜತೆಗಿನ ಸಂಬಂಧಕ್ಕೆ ಹುಳಿಹಿಂಡಲು ನೋಡಿದ್ದ ಪಾಕಿಸ್ತಾನದ ಯತ್ನವನ್ನು ತಿರಸ್ಕರಿಸಿದ್ದಕ್ಕೆ ಧನ್ಯವಾದ. ಅಲ್ಲಿನ ಜನರೊಂದಿಗೆ ನಮಗೆ ಸಾಂಸ್ಕೃತಿಕ ಸ್ನೇಹವಿದ್ದು, ಅವರ ಅಭಿವೃದ್ಧಿಗೆ ಅಗತ್ಯ ನೆರವು ನೀಡುವುದನ್ನು ಮುಂದುವರೆಸುತ್ತೇವೆ. ಈ ಸಹಕಾರವನ್ನು ಮುಂದುವರೆಸುವ ಬಗ್ಗೆ ಮಾತುಕತೆ ನಡೆಸಿದೆವು’ ಎಂದರು.