ನವದೆಹಲಿ: ಭಾರತವೇನಾದರೂ ಸಿಂಧೂ ನದಿ ಒಪ್ಪಂದ ಮುರಿದು ಪಾಕಿಸ್ತಾನಕ್ಕೆ ಹರಿಯುವ ನೀರು ತಡೆಯಲು ಡ್ಯಾಂ ನಿರ್ಮಾಣ ಮಾಡಿದರೆ ಅದನ್ನು ನಾಶ ಮಾಡಲಾಗುವುದು ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ಪಹಲ್ಗಾಂ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಸಚಿವ ಖ್ವಾಜಾ ಆಸಿಫ್ ಭಾರತವನ್ನು ಕೆಣಕುವ ಹೇಳಕೆ ನೀಡಿದ್ದಾರೆ.
ಪಹಲ್ಗಾಂ ಉಗ್ರ ದಾಳಿ ಬಳಿಕ ನೀರು ಮತ್ತು ರಕ್ತ ಜತೆ ಜತೆಯಾಗಿ ಹರಿಯಲು ಸಾಧ್ಯವಿಲ್ಲ ಎಂದು ಹೇಳಿರುವ ಭಾರತ, ಸಿಂಧೂ ನದಿ ಒಪ್ಪಂದಕ್ಕೆ ತಡೆ ಹಿಡಿದಿದೆ. ಪಾಕಿಸ್ತಾನದ ಶೇ.80ರಷ್ಟು ಭಾರತದಿಂದ ಹರಿದುಹೋಗುವ ನೀರನ್ನೇ ಅವಲಂಬಿಸಿದೆ. ಇದರಿಂದ ಕಂಗೆಟ್ಟಿರುವ ಪಾಕಿಸ್ತಾನ ಭಾರತಕ್ಕೆ ಈ ರೀತಿ ಗೊಡ್ಡುಬೆದರಿಕೆ ಹಾಕಲು ಮುಂದಾಗಿದೆ.
‘ಭಾರತವೇನಾದರೂ ಪಾಕಿಸ್ತಾನಕ್ಕೆ ಹರಿಯುವ ನದಿ ನೀರು ತಿರುಗಿಸುವ ಯಾವುದೇ ಪ್ರಯತ್ನ ನಡೆಸಿದರೂ ಅದನ್ನು ‘ಆಕ್ರಮಣಶೀಲತೆ’ ಎಂದು ಪರಿಗಣಿಸಲಾಗುವುದು. ಒಂದು ವೇಳೆ ಭಾರತ ನೀರು ತಡೆಯಲು ಡ್ಯಾಂ ನಿರ್ಮಿಸಿದರೆ ಪಾಕಿಸ್ತಾನ ಅದನ್ನು ಒಡೆದು ಹಾಕಲಿದೆ’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖ್ವಾಜಾ ಆಸಿಫ್ ಹೇಳಿದ್ದಾರೆ.
ಬಿಜೆಪಿ ಕಿಡಿ:
ಆಸಿಫ್ ಅವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೇನ್ ತೀವ್ರ ವ್ಯಂಗ್ಯವಾಡಿದ್ದಾರೆ. ಇದೆಲ್ಲ ಟೊಳ್ಳು ಬೆದರಿಕೆಗಳು. ಇಂಥ ಹೇಳಿಕೆಗಳು ಪಾಕಿಸ್ತಾನಿಯರಲ್ಲಿ ಸೃಷ್ಟಿಯಾಗಿರುವ ಆತಂಕವನ್ನು ಪ್ರದರ್ಶಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
''ಖ್ವಾಜಾ ಆಸಿಫ್ ಆತಂಕಕ್ಕೊಳಗಾಗಿರುವುದು ಸ್ಪಷ್ಟ. ಅವರು ಪಾಕ್ ರಕ್ಷಣಾ ಸಚಿವರಾಗಿದ್ದರೂ ಅವರಿಗೆ ಸಚಿವಾಲಯದ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಅವರು ಒಬ್ಬ ಹೇಳಿಕೆಯ ಸಚಿವ. ಹೀಗಾಗಿ ಅವರು ಪದೇ ಪದೆ ಟೊಳ್ಳು ಬೆದರಿಕೆ ಹಾಕುತ್ತಲೇ ಇರುತ್ತಾರೆ. ಪಾಕಿಸ್ತಾನಿಯರು ರಾತ್ರಿ ನಿದ್ದೆಯೇ ಬರುತ್ತಿಲ್ಲ'' ಎಂದು ಹೇಳಿದ್ದಾರೆ.
ಭಾರತವೇನಾದರೂ ಪಾಕಿಸ್ತಾನಕ್ಕೆ ಹರಿಯುವ ನದಿ ನೀರು ತಿರುಗಿಸುವ ಯಾವುದೇ ಪ್ರಯತ್ನ ನಡೆಸಿದರೂ ಅದನ್ನು ‘ಆಕ್ರಮಣಶೀಲತೆ’ ಎಂದು ಪರಿಗಣಿಸಲಾಗುವುದು. ಒಂದು ವೇಳೆ ಭಾರತ ನೀರು ತಡೆಯಲು ಡ್ಯಾಂ ನಿರ್ಮಿಸಿದರೆ ಪಾಕಿಸ್ತಾನ ಅದನ್ನು ಧ್ವಂಸ ಮಾಡಲಿದೆ.
- ಖ್ವಾಜಾ ಆಸಿಫ್, ಪಾಕ್ ರಕ್ಷಣಾ ಸಚಿವ