ವಿಶ್ವಸಂಸ್ಥೆ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವು ತನ್ನ ವಶದಲ್ಲಿರುವ ಕಾಶ್ಮೀರದ ಭಾಗವನ್ನು ವಶಕ್ಕೆ ಪಡೆದುಕೊಳ್ಳಲು ಯತ್ನಿಸುತ್ತಿದೆ ಮತ್ತು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದು ಅಲ್ಲಿನ ಜನರನ್ನು ಹಿಂಸಿಸುತ್ತಿದೆ ಎಂದು ಕ್ಯಾತೆ ತೆಗೆದಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲೇ ಭಾರತ ತೀಕ್ಷ್ಣ ತಿರುಗೇಟು ನೀಡಿದೆ.
‘ಜಗತ್ತಿನಾದ್ಯಂತ ನಡೆಯುವ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಕಿಸ್ತಾನದ ಬೆರಳಚ್ಚುಗಳಿವೆ. ಭಾರತದಲ್ಲಿ ಆ ದೇಶ ನಡೆಸುವ ಗಡಿಯಾಚೆಗಿನ ಭಯೋತ್ಪಾದನೆಗೆ ಖಂಡಿತ ಅದು ಪರಿಣಾಮಗಳನ್ನು ಎದುರಿಸುತ್ತದೆ’ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಭಾಷಣಕ್ಕೆ ವಿಶ್ವಸಂಸ್ಥೆಯಲ್ಲಿನ ಭಾರತದ ರಾಜತಾಂತ್ರಿಕ ಅಧಿಕಾರಿ ನೇರ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದ ಪ್ರಧಾನಿಯ ಭಾಷಣಕ್ಕೆ ‘ಉತ್ತರಿಸುವ ಹಕ್ಕು’ ಬಳಸಿ ತಿರುಗೇಟು ನೀಡಿದ ಭಾರತದ ಪ್ರತಿನಿಧಿ ಭವಿಕಾ ಮಂಗಳನಂದನ್, ‘ಮಿಲಿಟರಿಯ ನಿಯಂತ್ರಣದಲ್ಲಿರುವ ಹಾಗೂ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ಹಾಗೂ ಮಾದಕ ದ್ರವ್ಯಗಳ ವ್ಯಾಪಾರಕ್ಕೆ ಕುಖ್ಯಾತಿ ಗಳಿಸಿರುವ ದೇಶವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಮೇಲೆ ವಾಗ್ದಾಳಿ ನಡೆಸುವ ಧಿಮಾಕು ತೋರಿಸಿದೆ. ಪಾಕಿಸ್ತಾನದ ಹಣೆಬರಹ ಜಗತ್ತಿಗೇ ಗೊತ್ತಿದೆ. ಅದು ತನ್ನ ನೆರೆರಾಷ್ಟ್ರಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗುವುದೂ ಜಗತ್ತಿಗೆ ತಿಳಿದಿದೆ. ನಮ್ಮ ದೇಶದ ಸಂಸತ್ತಿನ ಮೇಲೆ, ಮಾರುಕಟ್ಟೆಗಳ ಮೇಲೆ, ಮುಂಬೈ ಮೇಲೆ ಹೀಗೆ ಅನೇಕ ದಾಳಿಗಳನ್ನು ಪಾಕ್ ಮೂಲದ ಉಗ್ರರು ನಡೆಸಿದ್ದಾರೆ. ಅಂತಹ ದೇಶವು ಜಗತ್ತಿನ ಬೇರೆ ಭಾಗಗಳ ಹಿಂಸಾಚಾರದ ಬಗ್ಗೆ ಮಾತನಾಡುವುದು ಆಷಾಢಭೂತಿತನ’ ಎಂದು ತಿವಿದರು.
‘ಭಯೋತ್ಪಾದನೆ ನಿಲ್ಲಿಸುವವರೆಗೂ ಮಾತುಕತೆಯ ಪ್ರಶ್ನೆಯೇ ಇಲ್ಲ. ಗಡಿಯಾಚೆಗಿನ ಭಯೋತ್ಪಾದನೆಗೆ ತಕ್ಕ ಉತ್ತರ ಕಾದಿರುತ್ತದೆ ಎಂಬುದನ್ನು ಪಾಕ್ ಅರಿತುಕೊಳ್ಳಲಿ. ಅಲ್‌ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿದ್ದ ದೇಶವಿದು. ಜಗತ್ತಿನಾದ್ಯಂತ ಸಾಕಷ್ಟು ಭಯೋತ್ಪಾದಕ ದಾಳಿಗಳಲ್ಲಿ ಪಾಕ್‌ನ ಬೆರಳಚ್ಚು ಇದೆ. ಅಂತಹ ದೇಶದ ಪ್ರಧಾನಿ ಇಲ್ಲಿ ನಿಂತು ಮಾಡುವ ಭಾಷಣಕ್ಕೆ ಯಾವ ಬೆಲೆಯಿದೆ? ನಮ್ಮ ಈ ವಾದಕ್ಕೂ ಪಾಕ್ ಇನ್ನಷ್ಟು ಸುಳ್ಳುಗಳ ಮೂಲಕ ಉತ್ತರಿಸುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ ಅದರಿಂದ ಏನೂ ಬದಲಾಗುವುದಿಲ್ಲ. ನಮ್ಮ ನಿಲುವು ಸ್ಪಷ್ಟವಿದೆ’ ಎಂದೂ ಹೇಳಿದರು.
ಬಳಿಕ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿ ಮಾತನಾಡಿ, ಜಮ್ಮು-ಕಾಶ್ಮೀರದ ಜನರ ಸ್ವಾತಂತ್ರ್ಯವನ್ನು ಭಾರತ ಹರಣ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.