ಭಾರತಕ್ಕೆ ಸೇರಿಸಿ ಎಂದು ಭಿತ್ತಿಪತ್ರ ಅಂಟಿಸಿ ಹೋರಾಟ

KannadaprabhaNewsNetwork | Updated : May 13 2024, 04:55 AM IST

ಸಾರಾಂಶ

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಬೆಲೆಯೇರಿಕೆ, ವಿದ್ಯುತ್‌ ಹಾಗೂ ವಿವಿಧ ಸಮಸ್ಯೆಗಳ ವಿರುದ್ಧ ಸಿಡಿದೆದ್ದು ಜನತೆ ನಡೆಸುತ್ತಿರುವ ಹಿಂಸಾತ್ಮಕ ಹೋರಾಟ 3ನೇ ದಿನಕ್ಕೆ ಕಾಲಿಟ್ಟಿದೆ

 ಇಸ್ಲಾಮಾಬಾದ್‌ :  ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಬೆಲೆಯೇರಿಕೆ, ವಿದ್ಯುತ್‌ ಹಾಗೂ ವಿವಿಧ ಸಮಸ್ಯೆಗಳ ವಿರುದ್ಧ ಸಿಡಿದೆದ್ದು ಜನತೆ ನಡೆಸುತ್ತಿರುವ ಹಿಂಸಾತ್ಮಕ ಹೋರಾಟ 3ನೇ ದಿನಕ್ಕೆ ಕಾಲಿಟ್ಟಿದೆ. ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಭಾರಿ ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ ಮತ್ತು ಪೊಲೀಸರು ಸೇರಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದೇ ವೇಳೆ, ಮುಜಾಫ್ಫರಾಬಾದ್ ಮತ್ತು ರಾವಲ್‌ಕೋಟ್‌ನಲ್ಲಿ ಸ್ಥಳೀಯರು ಭದ್ರತಾ ಪಡೆಗಳ ನಡುವೆ ಘರ್ಷಣೆಗೆ ಇಳಿದಿದ್ದು, ಭಾರತದೊಂದಿಗೆ ವಿಲೀನಕ್ಕೆ ಒತ್ತಾಯಿಸುವ ಪೋಸ್ಟರ್‌ಗಳನ್ನು ಜನರು ಹಾಕಿದ್ದಾರೆ. ‘ಇದು ಪಾಕಿಸ್ತಾನ ಸರ್ಕಾರವು ಆಕ್ರಮಿತ ಕಾಶ್ಮಿರದ ಮೇಲೆ ಹಿಡಿತ ಕಳೆದುಕೊಳ್ಳುತ್ತಿರುವ ದ್ಯೋತಕ’ ಎಂದು ಕೆಲವು ಪಾಕಿಸ್ತಾನಿ ಅಧಿಕಾರಿಗಳೇ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಓರ್ವ ಪೊಲೀಸ್ ಸಾವು:ಮೀರ್‌ಪುರದ ಇಸ್ಲಾಂಘರ್‌ ಎಂಬಲ್ಲಿ ಪ್ರತಿಭಟನಾಕಾರರು ಮುಜಾಫ್ಫರಾಬಾದ್‌ ಚಲೋ ನಡೆಸುತ್ತಿದ್ದ ವೇಳೆ ಅದನ್ನು ತಡೆಯಲು ಭದ್ರತಾ ಸಿಬ್ಬಂದಿ ಯತ್ನಿಸಿದ್ದಾರೆ. ಆಗ ಎದೆಗೆ ತಾಗಿದ ಗುಂಡೇಟಿಗೆ ಸಬ್ ಇನ್ಸ್‌ಪೆಕ್ಟರ್ ಅದ್ನಾನ್ ಖುರೇಷಿ ಬಲಿಯಾಗಿದ್ದಾರೆ. ಡಿಯಾಲ್‌ ಎಂಬಲ್ಲಿ ಶಾಂತಿಯುತ ಪ್ರತಿಭಟನಾಕಾರರ ಗುಂಪಿಗೆ ಅಶ್ರುವಾಯು ಶೆಲ್‌ಗಳನ್ನು ಸಿಡಿಸಲಾಗಿದೆ.

ಜಮ್ಮು-ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ ಕೋಟ್ಲಿ, ಪೂಂಛ್‌, ಮುಜಾಫ್ಫರಾಬಾದ್‌ ಸೇರಿ ಅನೇಕ ಕಡೆ ಪ್ರತಿಭಟನೆ ನಡೆಸಿದ್ದು ಭಾನುವಾರ ಕೂಡ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅನೇಕ ಕಡೆ ಬಾಟಲಿ ಹಾಗೂ ಕಲ್ಲು ತೂರಾಟ ನಡೆದಿದೆ.ಪ್ರತಿಭಟನೆ ತಡೆಗೆ ಇಂಟರ್ನೆಟ್‌ ಬಂದ್, ಅರೆಸೇನೆ:

ಬೃಹತ್ ಪ್ರತಿಭಟನೆಗಳನ್ನು ನಿಲ್ಲಿಸಲು ಪ್ರಾದೇಶಿಕ ಸರ್ಕಾರವು ಅರೆಸೇನಾ ಪಡೆ ಮತ್ತು ಪೊಲೀಸರ ಭಾರೀ ತುಕಡಿಗಳನ್ನು ನಿಯೋಜಿಸಿದೆ.

ಭಿಂಬರ್ ಮತ್ತು ಬಾಗ್ ಪಟ್ಟಣಗಳು ​​ಸೇರಿದಂತೆ ಪಿಒಕೆಯ ವಿವಿಧ ಭಾಗಗಳಲ್ಲಿ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸೇವೆಗಳನ್ನು ಭಾನುವಾರ ಸ್ಥಗಿತಗೊಳಿಸಲಾಗಿದೆ. ಮೀರ್‌ಪುರದಲ್ಲಿ ಎಲ್ಲಾ ಮೊಬೈಲ್ ನೆಟ್‌ವರ್ಕ್‌ಗಳು ಮತ್ತು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

ವಿದ್ಯುತ್‌ ಸಮಸ್ಯೆ ಇತ್ಯರ್ಥ, ಗೋಧಿ ಹಿಟ್ಟು ಸಬ್ಸಿಡಿ ದರದಲ್ಲಿ ವಿತರಣೆ, ಗಣ್ಯರ ಸವಲತ್ತು ಕಡಿತ- ಇವು ಪ್ರತಿಭಟನಾಕಾರರ ಬೇಡಿಕೆಗಳು.

ಇಂದು ಪಾಕ್‌ ಅಧ್ಯಕ್ಷ ಜರ್ದಾರಿ ತುರ್ತು ಸಭೆಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಸೋಮವಾರ ಅಧ್ಯಕ್ಷರ ಭವನದಲ್ಲಿ ಪ್ರದೇಶದ ಪರಿಸ್ಥಿತಿ ಬಗ್ಗೆ ಚರ್ಚಿಸಲು ಸಂಬಂಧಿಸಿದಂತೆ ತುರ್ತು ಸಭೆಯನ್ನು ಕರೆದಿದ್ದಾರೆ. ಸಮಸ್ಯೆಪರಿಹರಿಸಲು ಪ್ರಸ್ತಾವನೆಗಳನ್ನು ತರಲು ಮಧ್ಯಸ್ಥಗಾರರಿಗೆ ಸೂಚಿಸಿದ್ದಾರೆ.

ಪಿಒಕೆ ಕೊತಕೊತ ಏಕೆ?1. ಪಾಕ್‌ನಲ್ಲಿ ಹಣದುಬ್ಬರ ಮಿತಿಮೀರಿದೆ. ಅಗತ್ಯ ವಸ್ತು ಬೆಲೆ ದುಬಾರಿಯಾಗಿವೆ. ಇದರ ತಡೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ2. ಪಿಒಕೆಯಲ್ಲಿ ಉತ್ಪಾದಿಸಿದ ವಿದ್ಯುತ್‌ ಅನ್ನು ಪಾಕಿಸ್ತಾನದ ಪ್ರಮುಖ ನಗರಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಆದರೆ ಸ್ಥಳೀಯರಿಗೆ ವಿದ್ಯುತ್‌ ಇಲ್ಲ3. ಆಕ್ರಮಿತ ಕಾಶ್ಮೀರದ ಜನರ ಮೇಲೆ ಪಾಕ್‌ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಎಂಬುದು ಜನರ ಆರೋಪ. ಇದರ ವಿರುದ್ಧವೂ ಜನರು ಸಿಡಿದೆದ್ದಿದ್ದಾರೆ.4. ಇದೇ ವಿಷಯಕ್ಕೆ ಕಳೆದ ಆಗಸ್ಟ್‌ನಲ್ಲೂ ಜನರು ಬೀದಿಗಿಳಿದು ಹೋರಾಡಿದ್ದರು. ಆದರೆ ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಮತ್ತೆ ಬೀದಿಗಿಳಿದಿದ್ದಾರೆ.

ಪ್ರತಿಭಟನೆ ಹತ್ತಿಕ್ಕಲು ಎಕೆ 47 ಗನ್‌, ಪೆಲ್ಲೆಟ್ ಬಳಸುತ್ತಿರುವ ಪಾಕ್‌

ಈ ಬಾರಿ ಹೋರಾಟ ತಡೆಯಲು ಪಾಕಿಸ್ತಾನ ಸರ್ಕಾರ ಸೇನೆ ಬಳಸುತ್ತಿದೆ. ಜೊತೆಗೆ ಪೆಲ್ಲೆಟ್‌ ಗನ್‌ ಬಳಸಿ ದಮನಕಾರಿ ಪ್ರವೃತ್ತಿ ಅನುಸರಿಸುತ್ತಿದೆ. ಎಕೆ 47 ಗನ್‌ ಬಳಸಿ ಜನರ ಮೇಲೆ ಗುಂಡು ಹಾರಿಸುತ್ತಿದೆ. ಸರ್ಕಾರದ ಈ ಹಿಂಸಾತ್ಮಕ ನೀತಿ ಖಂಡಿಸಿ ಪ್ರತಿಭಟನಾಕಾರರು ಹಿಂಸೆಗೆ ಇಳಿದಿದ್ದಾರೆ. ಪೊಲೀಸರು, ಸೇನಾಧಿಕಾರಿಗಳ ಮೇಲೆ ದಾಳಿ ನಡೆಸಿ ಹಿಮ್ಮೆಟ್ಟಿಸುತ್ತಿದ್ದಾರೆ.

Share this article