ನವದೆಹಲಿ: ಪರೀಕ್ಷೆಯಲ್ಲಿ ಯಶಸ್ಸಿಗೆ ಯಾವುದೇ ಸಿದ್ಧ ಸೂತ್ರಗಳಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಸಿದ್ಧತೆ ನಡೆಸಬೇಕು ಎಂದು ವಿವಿಧ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಹೊರಹೊಮ್ಮಿದ ಸಾಧಕರು ವಿದ್ಯಾರ್ಥಿಗಳ ಸಲಹೆ ನೀಡಿದ್ದಾರೆ.
ಮಂಗಳವಾರ ಪ್ರಸಾರವಾದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಲವು ಟಾಪರ್ಸ್‌ಗಳು, ಪರೀಕ್ಷೆಗೆ ಏನೆಲ್ಲಾ ಸಿದ್ಧತೆ ನಡೆಸಬೇಕು, ಯಾವ ರೀತಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂಬಿತ್ಯಾದಿ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ, ಭೂಮಿ ಪೆಡ್ನೇಕರ್, ವಿಕ್ರಾಂತ್ ಮ್ಯಾಸ್ಸೆ, ಆಧ್ಯಾತ್ಮಿಕ ನಾಯಕ ಸದ್ಗುರು, ಕ್ರೀಡಾ ದಿಗ್ಗಜರಾದ ಮೇರಿ ಕೋಮ್, ಅವನಿ ಲೇಖರಾ ಮೊದಲಾದವರು ಈಗಾಗಲೇ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಟಾಪರ್‌ಗಳು ಹೇಳಿದ್ದೇನು?:-ಪರೀಕ್ಷಾ ಯಶಸ್ಸಿಗೆ ಸಿದ್ಧಸೂತ್ರವಿಲ್ಲ. ಪ್ರತಿಯೊಬ್ಬರಿಗೂ ವೈಯಕ್ತಿಕ ತಯಾರಿ ಅಗತ್ಯ.
-ಓದಲು ಆರಂಭಿಸುವ ಮೊದಲೇ ಪುಸ್ತಕದ ಪುಟಗಳ ಲೆಕ್ಕ ಹಾಕಬೇಡಿ. ಇದು ನಿಮ್ಮ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಪುಸ್ತಕ ಎಷ್ಟು ದೊಡ್ಡದಿದೆ ಎಂಬುದನ್ನು ನೋಡದೆ, ವಿಷಯಗಳನ್ನು ವಿಂಗಡಿಸಿ. ನಂತರ ಆದ್ಯತೆ ಮೇಲೆ ವಿಷಯ ಆಯ್ದುಕೊಂಡು ಓದಿ ಮತ್ತು ಮನನ ಮಾಡಿ.-ಪಠ್ಯಕ್ರಮದ ಬಗ್ಗೆ ಒತ್ತಡ ಬೇಡ. ಟಿಪ್ಪಣಿಗಳ ಬದಲಿಗೆ ಫ್ಲೋಚಾರ್ಟ್‌ಗಳು ಮತ್ತು ಫಾಯಿಂಟರ್‌ಗಳನ್ನು ಮಾಡಿಕೊಳ್ಳಿ.
-ಪರೀಕ್ಷಾ ಭಯದಿಂದ ಹೊರಗೆ ಬನ್ನಿ. ಪ್ರಧಾನಿ ಮೋದಿಯವರು ಹೇಳಿದಂತೆ, ನಕಲು ಮಾಡುವುದು ಕೆಟ್ಟ ಅಭ್ಯಾಸ. ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆಯಿರಿ. ಅದು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ.-ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು, ಪ್ರತಿದಿನ 3 ಗೆಲುವುಗಳನ್ನು ಸಾಧಿಸಬೇಕು: ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ. ಈ ಮೂರರ ಮೇಲೆ ಜಯ ಸಾಧಿಸಿ.
-ಪರೀಕ್ಷೆಯಲ್ಲಿ ಯಾವ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬುದರ ಬಗ್ಗೆ ಯೋಚಿಸಬಾರದು, ಬದಲಿಗೆ ನಮ್ಮ ಸಿದ್ಧತೆಗಳತ್ತ ಗಮನಹರಿಸಬೇಕು ಮತ್ತು ಅದರ ಮೇಲೆ ನಂಬಿಕೆ ಇಡಬೇಕು.