ನವದೆಹಲಿ: ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ರಾಜ್ಯಸಭಾ ಸಂಸದ ರಾಘವ್ ಛಡ್ಡಾ ದಂಪತಿಗೆ ಗಂಡು ಮಗುವಾಗಿದೆ. ಈ ಬಗ್ಗೆ ಭಾನುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ದಂಪತಿ, ‘ಗಂಡು ಮಗುವನ್ನು ಸ್ವಾಗತಿಸಿದೆವು’ ಎಂದು ಸಂತಸ ಹಂಚಿಕೊಂಡಿದ್ದಾರೆ.
2023ರ ಮೇ 13ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಟಾರ್ ದಂಪತಿಯು ಸೆಪ್ಟೆಂಬರ್ 24ರಂದು ಹಸೆಮಣೆ ಏರಿದ್ದರು. ಕಳೆದ ಆಗಸ್ಟ್‌ನಲ್ಲಿ ಪರಿಣೀತಿ ಗರ್ಭಿಣಿ ಎಂದು ಘೋಷಿಸಿಕೊಂಡಿದ್ದರು. ರಾಘವ್ ಛಡ್ಡಾ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದರಾಗಿದ್ದಾರೆ.
ವಾಟ್ಸಾಪ್‌ನಲ್ಲಿ ಅಪರಿಚಿತ ನಂಬರ್‌ನಿಂದ ಬರುವ ಸಂದೇಶಕ್ಕೆ ಮಿತಿ
ನವದೆಹಲಿ: ವಾಟ್ಸಾಪ್‌ನಲ್ಲಿ ಅಪರಿಚಿತ ವ್ಯಕ್ತಿಗಳಿಂದ ಅಥವಾ ಸಂಸ್ಥೆಗಳಿಂದ ಬರುವ ಅನಗತ್ಯ ಸಂದೇಶಗಳಿಂದ ಬೇಸತ್ತಿರುವವರಿಗೆ ಕಂಪನಿ ಸಿಹಿಸುದ್ದಿ ನೀಡಿದೆ. ಇನ್ನುಮುಂದೆ ಅಪರಿಚಿತ ಸಂಖ್ಯೆಯಿಂದ ಕಳಿಸಲಾಗುವ ಸಂದೇಶಗಳಿಗೆ ಮಾಸಿಕ ಮಿತಿ ಹೇರಲಾಗುವುದು. ಇದಿನ್ನೂ ಪರೀಕ್ಷಾ ಹಂತದಲ್ಲಿದೆ.ನಮ್ಮ ಬಳಿ ಸೇವ್ ಆಗಿರದ ನಂಬರ್‌ನಿಂದ ಬರುವ ಸಂದೇಶಗಳಿಗಷ್ಟೇ ಈ ಮಿತಿ ಅನ್ವಯವಾಗಲಿದೆ. ಆ ನಿಗದಿತ ಮಿತಿ ಮೀರಿದರೆ ಇಡೀ ತಿಂಗಳು ಯಾವುದೇ ಸಂದೇಶ ಕಳಿಸಲಾಗದು. ಇದು ಸಂಖ್ಯೆ ಸೇವ್ ಇರುವವರೊಂದಿಗಿನ ಸಂದೇಶ ವಿನಿಮಯಕ್ಕೆ ಯಾವುದೇ ತೊಡಕು ಉಂಟುಮಾಡುವುದಿಲ್ಲ.
ಸ್ಪ್ಯಾಮ್ (ಅನಗತ್ಯ) ಸಂದೇಶಗಳು ಉಂಟುಮಾಡುವ ಸಮಸ್ಯೆಗಳನ್ನು ತಡೆಯುವುದು ಈ ಹೊಸ ಫೀಚರ್‌ನ ಉದ್ದೇಶ ಎಂದು ವಾಟ್ಸಾಪ್ ಹೇಳಿದೆ.
ಬಂಗಾಳದಲ್ಲಿ ಮತ್ತೋರ್ವ ಬಿಜೆಪಿ ಸಂಸದನ ಮೇಲೆ ದಾಳಿ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರ ಮೇಲಿನ ದಾಳಿ ಮುಂದುವರೆದಿದ್ದು, ಶನಿವಾರ ಡಾರ್ಜೀಲಿಂಗ್‌ನ ಬಿಜೆಪಿ ಸಂಸದ ರಾಜು ಬಿಸ್ಟಾ ಅವರ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಈ ದಾಳಿಯನ್ನು ಟಿಎಂಸಿ ಕಾರ್ಯಕರ್ತರು ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.ಈ ಬಗ್ಗೆ ದೂರು ನೀಡಿರುವ ಬಿಸ್ಟಾ,‘ ಕಿಡಿಗೇಡಿಗಳು ನನ್ನ ಮೇಲೆ ದಾಳಿ ಮಾಡಿದ್ದಾದ್ದು, ನನ್ನ ಬೆಂಗಾವಲು ಪಡೆಯ ವಾಹನಕ್ಕೆ ಹಾನಿಯಾಗಿದೆ. ಬಿಜೆಪಿಗರ ವಿರುದ್ಧ ಷಡ್ಯಂತ್ರ ಎಂದೂ ಫಲ ನೀಡದು’ ಎಂದಿದ್ದಾರೆ. ಘಟನೆಯನ್ನು ಕೇಂದ್ರ ಸಚಿವ, ಬಂಗಾಳ ಬಿಜೆಪಿ ಮಾಜಿ ಅಧ್ಯಕ್ಷ ಸುಕಾಂತ ಮಜುಂದಾರ್ ಖಂಡಿಸಿ, ಈ ಎಲ್ಲಾ ಕೃತ್ಯಗಳಿಗೆ ಜನ ಸರಿಯಾದ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ. ಆಡಳಿತ ಟಿಎಂಸಿಯು ಈ ಘಟನೆಯು ಬಿಜೆಪಿಯ ಆಂತರಿಕ ಕಲಹದ ಫಲವೆಂದಿದೆ.
ಕೆಲ ದಿನಗಳ ಹಿಂದೆ ಖಗೇನ್ ಮುರ್ಮು ಎಂಬ ಬಿಜೆಪಿ ಸಂಸದರ ಮೇಲೆ ದಾಳಿಯಾಗಿತ್ತು.
ಪಕ್ಷ ಕೇಳಿದರೆ 2029ರಲ್ಲಿ ಸ್ಪರ್ಧೆ, ಝಾನ್ಸಿಯಿಂದ ಮಾತ್ರ: ಉಮಾ ಭಾರತಿ
ಭೋಪಾಲ್: ರಾಜಕೀಯ ನೇಪಥ್ಯಕ್ಕೆ ಸರಿದಿದ್ದ ಬಿಜೆಪಿ ನಾಯಕಿ ಉಮಾಭಾರತಿ ಈಗ ಮತ್ತೆ ಮುನ್ನೆಲೆಗೆ ಬಂದಿದ್ದು ‘ಪಕ್ಷ ಸೂಚಿಸಿದರೆ ನಾನು 2029ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ. ಆದರೆ ಅದು ಉತ್ತರಪ್ರದೇಶದ ಝಾನ್ಸಿ ಕ್ಷೇತ್ರದಿಂದ ಮಾತ್ರ’ ಎಂದು ಘೋಷಿಸಿದ್ದಾರೆ.ಲಲಿತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮಾಭಾರತಿ, ‘ಝಾನ್ಸಿಯ ಭಾಗವಾಗಿರುವ ಬುಂದೇಲ್‌ಖಂಡ್ ನನ್ನ ಭಾವನಾತ್ಮಕ ಮನೆ. ಅಲ್ಲಿನ ಜನರೊಂದಿಗೆ ನನಗೆ ವಿಶೇಷ ಸಂಬಂಧವಿದೆ. ಪಕ್ಷ ಕೇಳಿದರೆ ನಾನು ಅಲ್ಲಿಂದ ಚುನಾವಣೆಯಲ್ಲಿ ಖಂಡಿತವಾಗಿ ಸ್ಪರ್ಧಿಸುತ್ತೇನೆ’ ಎಂದರು. ಬಳಿಕ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಬಿಜಪಿಯ ಕೇಂದ್ರ ಹಾಗೂ ರಾಜ್ಯ ನಾಯಕರನ್ನು ಟ್ಯಾಗ್ ಮಾಡಿದ್ದಾರೆ.ಉಮಾಭಾರತಿ ಅವರು 2014ರ ಚುನಾವಣೆಯಲ್ಲಿ ಝಾನ್ಸಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ನಂತರ ರಾಜಕೀಯ ನೇಪಥ್ಯಕ್ಕೆ ಸರಿದಿದ್ದರು. ಪ್ರಸ್ತುತ ಬಿಜೆಪಿಯ ಅನುರಾಗ್ ಶರ್ಮಾ ಅಲ್ಲಿನ ಸಂಸದರಾಗಿದ್ದಾರೆ.
ನಮ್ಮ ಪೂರ್ವಜರು ವಿಶ್ವ ಸಂಚರಿಸಿದರೂ ಯಾರನ್ನೂ ಮತಾಂತರಿಸಿಲ್ಲ: ಭಾಗವತ್
ಪಿಟಿಐ ಮುಂಬೈ‘ಪ್ರಾಚೀನ ಕಾಲದಲ್ಲಿ ಭಾರತೀಯರು ಇಡೀ ವಿಶ್ವವನ್ನು ಸುತ್ತಿ ಸಂಸ್ಕೃತಿ ಮತ್ತು ವಿಜ್ಞಾನವನ್ನು ಪಸರಿಸಿದರು. ಆದರೆ ಏನನ್ನೂ ವಶಪಡಿಸಿಕೊಳ್ಳಲಿಲ್ಲ ಮತ್ತು ಯಾರನ್ನೂ ಮತಾಂತರಿಸಲಿಲ್ಲ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮುಂಬೈನಲ್ಲಿ ‘ಆರ್ಯಯುಗ ವಿಷಯ ಕೋಶ’ ಎಂಬ ವಿಶ್ವಕೋಶದ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ಅನೇಕ ಆಕ್ರಮಣಕಾರರು ಭಾರತವನ್ನು ಲೂಟಿ ಮಾಡಿ ಗುಲಾಮರನ್ನಾಗಿ ಮಾಡಿಕೊಂಡರು. ಕೊನೆಯದಾಗಿ ಆಕ್ರಮಣ ಮಾಡಿದವರು (ಬ್ರಿಟಿಷರು) ಭಾರತೀಯರ ಮನಸ್ಸನ್ನು ಲೂಟಿ ಮಾಡಿದರು. ನಮ್ಮ ಪೂರ್ವಜರೂ ಮೆಕ್ಸಿಕೋದಿಂದ ಸೈಬೀರಿಯಾವರೆಗೆ ಸಂಚರಿಸಿದ್ದಾರೆ. ಅವರು ಜಗತ್ತಿಗೆ ಸಂಸ್ಕೃತಿ ಮತ್ತು ವಿಜ್ಞಾನವನ್ನು ಕಲಿಸಿದರೇ ಹೊರತು ಯಾರನ್ನೂ ವಶಪಡಿಸಿಕೊಳ್ಳಲಿಲ್ಲ ಮತ್ತು ಮತಾಂತರಿಸಲಿಲ್ಲ. ಸದ್ಭಾವನೆ ಮತ್ತು ಏಕತೆಯ ಸಂದೇಶದಿಂದ ಮಾತ್ರ ಪಯಣಿಸಿದರು’ ಎಂದರು.
‘ಆಧ್ಯಾತ್ಮಿಕ ಜ್ಞಾನ ಇವತ್ತಿಗೂ ನಮ್ಮನ್ನು ಅರಳಿಸುತ್ತಿದೆ. ಆರ್ಯವ್ರತರ ವಂಶಸ್ಥರಾಗಿರುವ ನಾವು ವಿಜ್ಞಾನ, ಶಸ್ತ್ರಾಸ್ತ್ರಗಳು, ಬಲ, ಅಧಿಕಾರ, ನಂಬಿಕೆ ಮತ್ತು ಜ್ಞಾನಗಳನ್ನು ಹೊಂದಿದ್ದೇವೆ’ ಎಂದು ಹೇಳಿದರು.