ಪೆಗಾಸಸ್ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ । ದೇಶದ ಭದ್ರತೆ ಕುರಿತ ವರದಿ ಬಹಿರಂಗಪಡಿಸಲ್ಲ
ಸ್ಪೈವೇರ್ ತಾಂತ್ರಿಕ ಸಮಿತಿ ರಚಿಸಿದ್ದ ನ್ಯಾಯಾಲಯ । 29 ಮೊಬೈಲ್ ಪರಿಶೀಲಿಸಿ ವರದಿ ಸಲ್ಲಿಸಿದ್ದ ಸಮಿತಿವರದಿ ಬಹಿರಂಗಪಡಿಸುವಂತೆ ಅರ್ಜಿದಾರರ ಒತ್ತಾಯ । ದೇಶದ ಭದ್ರತೆಯ ವರದಿ ಚರ್ಚಿಸಲ್ಲ ಎಂದ ಕೋರ್ಟ್
==ನವದೆಹಲಿ: ಭಯೋತ್ಪಾದಕರ ವಿರುದ್ಧ ಸರ್ಕಾರ ಸ್ಪೈವೇರ್ ಬಳಸಿದರೆ ತಪ್ಪೇನು? ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಸಂಬಂಧಿಸಿದ ಯಾವುದೇ ವರದಿಯನ್ನು ಬಹಿರಂಗ ಮಾಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪೆಗಾಸಸ್ ಸ್ಪೈವೇರ್ ಬಳಕೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ರಚಿಸಿದ್ದ ತಾಂತ್ರಿಕ ಸಮಿತಿಯ ವರದಿ ಬಹಿರಂಗಪಡಿಸಬೇಕೆಂಬ ಅರ್ಜಿದಾರರೊಬ್ಬರ ವಕೀಲರ ವಾದವನ್ನು ಆಲಿಸಿದ ಬಳಿಕ ನ್ಯಾ.ಸೂರ್ಯಕಾಂತ್ ಮತ್ತು ನ್ಯಾ.ಕೋಟೀಶ್ವರ್ ಸಿಂಗ್ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.ಪೆಗಾಸಸ್ ಕದ್ದಾಲಿಕೆ ಪ್ರಕರಣದ ಬಿಸಿ ಹೆಚ್ಚಾಗಿದ್ದಾಗ 2022ರಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ತಾಂತ್ರಿಕ ಸಮಿತಿಯು ಪರಿಶೀಲಿಸಿದ 29 ಮೊಬೈಲ್‌ಗಳಲ್ಲಿ 5ರಲ್ಲಿ ಸ್ಪೈವೇರ್ ಇರುವುದು ಪತ್ತೆಯಾಗಿತ್ತು. ಆದರೆ, ಆ ಮೊಬೈಲ್‌ಗಳಲ್ಲಿ ಪೆಗಾಸಸ್ ಬಳಸಲಾಗಿದೆಯೇ ಎಂಬ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ವಿಫಲವಾಗಿತ್ತು.
ಪೆಗಾಸಸ್ ಸ್ಪೈವೇರ್ ಬಳಕೆ ಕುರಿತ ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯವು, ಸರ್ಕಾರ ಸ್ಪೈವೇರ್ ಹೊಂದಿರುವುದು ತಪ್ಪಲ್ಲ. ಆದರೆ, ಅದನ್ನು ಯಾರ ವಿರುದ್ಧ ಬಳಸಲಾಗುತ್ತಿದೆ ಎಂಬುದು ಮುಖ್ಯ. ದೇಶದ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದೆಲ್ಲಾ ಬೀದಿಯಲ್ಲಿ ಚರ್ಚಿಸುವ ವಿಷಯ ಅಲ್ಲ. ಆದರೆ, ಖಾಸಗಿ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಮಾತ್ರ ಸಂವಿಧಾನದಡಿ ರಕ್ಷಿಸಲಾಗುವುದು. ಎಷ್ಟರ ಮಟ್ಟಿಗೆ ವರದಿಯಲ್ಲಿರುವ ವಿಚಾರ ಬಹಿರಂಗಪಡಿಸಲಾಗುವುದು ಎಂದು ಪರಿಶೀಲಿಸಲಾಗುವುದು ಎಂದು ಕೋರ್ಟ್ ಹೇಳಿತು.ಪತ್ರಕರ್ತ ಪರ್ಜನ್‌ಜಾಯ್ ಗುಹಾ ಠಾಕುರ್ತ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಅಮೆರಿಕದ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಸ್ತಾಪಿಸಿ, ಹ್ಯಾಕ್ ಕುರಿತು ವಾಟ್ಸಾಪ್ ಕೂಡ ಒಪ್ಪಿಕೊಂಡಿದೆ. ಈಗ ನಿಮ್ಮ ಮುಂದೆ ಸಮಿತಿಯ ಸಾಕ್ಷ್ಯಗಳಿವೆ, ವಾಟ್ಸಾಪ್‌ನ ಸಾಕ್ಷವೂ ಇದೆ. ತೀರ್ಪಿಗೆ ಸಂಬಂಧಿಸಿದ ಪರಿಷ್ಕೃತ ದಾಖಲೆಗಳನ್ನು ಸಂತ್ರಸ್ತ ವ್ಯಕ್ತಿಗಳಿಗೆ ನೀಡಬೇಕು. ಅವರು ಈ ವಿಚಾರವನ್ನು ತಿಳಿದುಕೊಳ್ಳಬೇಕು ಎಂದರು.
ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು, ಟೆಕ್ನಿಕಲ್ ಸಮಿತಿಗೆ ಸಂಬಂಧಿಸಿದ ವರದಿಯನ್ನು ಯಾವುದೇ ಪರಿಷ್ಕರಣೆ ಇಲ್ಲದೆ ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದರು.ನಂತರ ಹಿರಿಯ ಸಾಲಿಸಿಟರ್ ಜನರಲ್ ತುಷಾಹ್ ಮೆಹ್ತಾ ಅವರು, ಭಯೋತ್ಪಾದಕರ ವಿರುದ್ಧ ಸ್ಪೈವೇರ್ ಬಳಸುವುದರಲ್ಲಿ ತಪ್ಪೇನೂ ಇಲ್ಲ, ಯಾಕೆಂದರೆ ಭಯೋತ್ಪಾದಕರಿಗೆ ಖಾಸಗಿತನದ ಹಕ್ಕು ಇರುವುದಿಲ್ಲ ಎಂದರು.
ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಜು.30ಕ್ಕೆ ಮುಂದೂಡಿತು.