ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಪೌರತ್ವ: ಸಿಬಿಐ ತನಿಖೆಗೆ ಮತ್ತೆ ಅರ್ಜಿ

KannadaprabhaNewsNetwork |  
Published : Sep 13, 2024, 01:31 AM ISTUpdated : Sep 13, 2024, 06:35 AM IST
'I Am Not Against Reservation': Rahul Gandhi Says Statement Was Misrepresented

ಸಾರಾಂಶ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬ್ರಿಟನ್ನಿನ ಪ್ರಜೆಯಾಗಿದ್ದು, ಅವರ ಪೌರತ್ವದ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಅಲಹಾಬಾದ್‌ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.  

ಲಖನೌ: ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಬ್ರಿಟನ್ನಿನ ಪ್ರಜೆಯಾಗಿದ್ದು, ಅವರ ಪೌರತ್ವದ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಉತ್ತರ ಪ್ರದೇಶದ ಅಲಹಾಬಾದ್‌ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಕೆಯಾಗಿದೆ. ಅಲ್ಲದೆ, ಅವರು ಭಾರತದ ಪ್ರಜೆಯೇ ಅಲ್ಲದಿರುವುದರಿಂದ ಅವರ ಲೋಕಸಭೆಯ ಸದಸ್ಯತ್ವ ರದ್ದುಪಡಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

ಕರ್ನಾಟಕದ ಬಿಜೆಪಿ ಮುಖಂಡ ಎಸ್‌.ವಿಘ್ನೇಶ್‌ ಎಂಬುವರು ಈ ಪಿಐಎಲ್‌ ಸಲ್ಲಿಸಿದ್ದಾರೆ. ಕುತೂಹಲಕರ ಸಂಗತಿಯೆಂದರೆ, ಎರಡು ತಿಂಗಳ ಹಿಂದೆ ವಿಘ್ನೇಶ್‌ ಅವರು ಅಲಹಾಬಾದ್‌ ಹೈಕೋರ್ಟ್‌ಗೆ ಇದೇ ಕೋರಿಕೆಯೊಂದಿಗೆ ಪಿಐಎಲ್‌ ಸಲ್ಲಿಸಿದ್ದರು. ಅದನ್ನು ಕೋರ್ಟ್‌ ವಜಾಗೊಳಿಸಿತ್ತು. ಇದೀಗ ರಾಹುಲ್‌ ಗಾಂಧಿ ಬ್ರಿಟಿಷ್‌ ಪ್ರಜೆ ಎಂಬುದಕ್ಕೆ ತಮಗೆ ಇನ್ನಷ್ಟು ಪುರಾವೆಗಳು ಲಭಿಸಿವೆ ಎಂದು ವಿಘ್ನೇಶ್‌ ಪುನಃ ಪಿಐಎಲ್‌ ಸಲ್ಲಿಸಿದ್ದಾರೆ.

ಎರಡು ತಿಂಗಳ ಹಿಂದೆ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಕೂಡ ದೆಹಲಿ ಹೈಕೋರ್ಟ್‌ಗೆ ಇದೇ ರೀತಿಯ ಪಿಐಎಲ್‌ ಸಲ್ಲಿಸಿದ್ದರು. ರಾಹುಲ್‌ ಗಾಂಧಿ ಬ್ರಿಟನ್ನಿನ ಪ್ರಜೆಯಾಗಿದ್ದು, ಅದನ್ನು ಮುಚ್ಚಿಟ್ಟು ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಬೇಕು ಮತ್ತು ಲೋಕಸಭೆಯ ಸದಸ್ಯತ್ವ ರದ್ದುಪಡಿಸಬೇಕು ಎಂದು ಕೋರಿದ್ದರು. ಇದೇ ಅರ್ಜಿಯನ್ನು ಕೇಂದ್ರ ಗೃಹ ಇಲಾಖೆಗೂ ಸಲ್ಲಿಸಿದ್ದರು. ಅದರ ವಿಚಾರಣೆ ಇನ್ನೂ ಆರಂಭವಾಗಿಲ್ಲ.ವಿಘ್ನೇಶ್‌ ವಾದ ಏನು:

ರಾಹುಲ್‌ ಗಾಂಧಿ ಬ್ರಿಟನ್ನಿನ ಪ್ರಜೆಯಾಗಿದ್ದಾರೆ. ಅಲ್ಲಿನ ಪ್ರಜೆಯಾದವರು ಭಾರತದ ಪ್ರಜೆಯಾಗಲು ಸಾಧ್ಯವಿಲ್ಲ. ಹೀಗಾಗಿ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ‘ರೆಗ್ಯುಲರ್‌ ಕೇಸ್‌’ ಪ್ರಕಾರ ಸಿಬಿಐ ತನಿಖೆ ನಡೆಸಬೇಕು. ಅವರು ಭಾರತದ ಪ್ರಜೆಯಲ್ಲದಿರುವುದರಿಂದ ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸುವ ಹಕ್ಕು ಹೊಂದಿಲ್ಲ. ಹೀಗಾಗಿ ರಾಯ್‌ಬರೇಲಿಯಿಂದ ಲೋಕಸಭೆಗೆ ಆಯ್ಕೆಯಾಗಿರುವ ಅವರ ಸಂಸತ್‌ ಸದಸ್ಯತ್ವವನ್ನು ರದ್ದುಪಡಿಸಬೇಕು.

ರಾಹುಲ್‌ ಬ್ರಿಟಿಷ್ ಪೌರತ್ವ ಪಡೆದ ದಿನವೇ ಭಾರತದ ಪೌರತ್ವ ಕಳೆದುಕೊಂಡಿದ್ದಾರೆ. ಅವರು 2003/2006ರ ಬಳಿಕ ಭಾರತದ ಪೌರತ್ವ ಪಡೆದಿದ್ದರೆ ಅದನ್ನು ನಾಮಪತ್ರದಲ್ಲಿ ತಿಳಿಸಬೇಕಿತ್ತು. ಕೆನಡಾ ಪ್ರಜೆ ವಿಎಸ್‌ಎಸ್‌ ಶರ್ಮಾ ಎಂಬುವರು ಬ್ರಿಟಿಷ್‌ ಸರ್ಕಾರದಿಂದ ರಾಹುಲ್‌ ಗಾಂಧಿಯವರ ಪೌರತ್ವದ ಬಗ್ಗೆ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಅದನ್ನು ನನ್ನ ಜೊತೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಅವರಿಗೆ ಬ್ರಿಟನ್‌ ಸರ್ಕಾರ ಕಳುಹಿಸಿರುವ ದಾಖಲೆಯಲ್ಲಿ, ರಾಹುಲ್‌ ಗಾಂಧಿಯವರ ಬ್ರಿಟಿಷ್‌ ಪೌರತ್ವವು ರಹಸ್ಯ ದಾಖಲೆಯಾಗಿದ್ದು, ಅದರ ಬಗ್ಗೆ ಮಾಹಿತಿ ನೀಡಬೇಕೆಂದರೆ ರಾಹುಲ್‌ ಗಾಂಧಿ ಸಹಿ ಹಾಕಿದ ದಾಖಲೆಯನ್ನು ಬ್ರಿಟನ್‌ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಇದರರ್ಥ, ರಾಹುಲ್‌ ಬ್ರಿಟಿಷ್‌ ಪ್ರಜೆ ಎಂದು ಬ್ರಿಟಿಷ್‌ ಸರ್ಕಾರವೇ ಒಪ್ಪಿಕೊಂಡಂತಾಗಿದೆ ಎಂದು ವಿಘ್ನೇಶ್‌ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ರಾಹುಲ್‌ ಗಾಂಧಿಯವರ ಪೌರತ್ವದ ಬಗ್ಗೆ ಸಿಬಿಐ ತನಿಖೆ ನಡೆಸುವುದರ ಜೊತೆಗೆ, ಅವರ ಲೋಕಸಭೆಯ ಸದಸ್ಯತ್ವ ರದ್ದುಗೊಳಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ