ಉಗ್ರವಾದದ ವಿರುದ್ಧ ನಿರ್ಣಾಯಕ ಕ್ರಮ : ಮೋದಿ

KannadaprabhaNewsNetwork | Updated : May 04 2025, 06:26 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಪಹಲ್ಗಾಂ ದಾಳಿಯ ಹಿಂದಿರುವ ಉಗ್ರರ ವಿರುದ್ಧ ಮತ್ತೆ ಪರೋಕ್ಷವಾಗಿ ಕಿಡಿ ಕಾರಿದ್ದು, ‘ಉಗ್ರವಾದದ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಭಾರತ ಬದ್ಧವಾಗಿದೆ’ ಎಂದು ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಹಲ್ಗಾಂ ದಾಳಿಯ ಹಿಂದಿರುವ ಉಗ್ರರ ವಿರುದ್ಧ ಮತ್ತೆ ಪರೋಕ್ಷವಾಗಿ ಕಿಡಿ ಕಾರಿದ್ದು, ‘ಉಗ್ರವಾದದ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಭಾರತ ಬದ್ಧವಾಗಿದೆ’ ಎಂದು ಹೇಳಿದ್ದಾರೆ.

ಆಫ್ರಿಕಾ ದೇಶವಾದ ಅಂಗೋಲಾದ ಅಧ್ಯಕ್ಷ ಜೋವೊ ಮ್ಯಾನುಯೆಲ್ ಲಾರೆಂಕೊ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಉಗ್ರವಾದವು ಮಾನವೀಯತೆಗೆ ಇರುವ ದೊಡ್ಡ ಕಂಟಕ. ಉಗ್ರರು ಹಾಗೂ ಅವರ ಬೆಂಬಲಿಗರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಲು ಬದ್ಧರಾಗಿದ್ದೇವೆ’ ಎಂದರು. ಇತ್ತೀಚೆಗಷ್ಟೇ ಪ್ರಧಾನಿ ಮೋದಿ, ‘ನಾವು ಪ್ರತಿಯೊಬ್ಬ ಉಗ್ರ, ಅವರ ಬೆಂಬಲಿಗರನ್ನು ಪತ್ತೆಹಚ್ಚಿ, ಜಾಡು ಹಿಡಿದು ಶಿಕ್ಷಿಸುತ್ತೇವೆ’ ಎಂದು ಶಪಥ ಮಾಡಿದ್ದರು. 

ಅಂಗೋಲಾ ಸೇನೆಗೆ ₹16 ಸಾವಿರ ಕೋಟಿ: ಸೇನೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ಅಂಗೋಲಾದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ, ‘ಭಾರತ ಅಂಗೋಲಾದ ಸೇನೆಯನ್ನು ಆಧುನೀಕರಣಗೊಳಿಸಲು 16 ಸಾವಿರ ಕೋಟಿ ರು. ನೀಡಲಿದೆ’ ಎಂದು ಪ್ರಧಾನಿ ಮೋದಿ ಘೋಷಿಸಿದರು.

‘ಲಾರೆಂಕೊ ಅವರ ಭಾರತ ಭೇಟಿ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ದಿಕ್ಕನ್ನು ನೀಡುವುದಲ್ಲದೆ, ಭಾರತ-ಆಫ್ರಿಕಾ ಪಾಲುದಾರಿಕೆಯನ್ನು ಬಲಪಡಿಸುತ್ತದೆ. ಅಂಗೋಲಾದ ರಕ್ಷಣಾ ವೇದಿಕೆಗಳ ದುರಸ್ತಿ, ಕೂಲಂಕಷ ಪರೀಕ್ಷೆ ಮತ್ತು ಪೂರೈಕೆಯ ಬಗ್ಗೆ ಅವರೊಂದಿಗೆ ಚರ್ಚೆ ನಡೆದಿದೆ’ ಎಂದು ಪ್ರಧಾನಿ ಹೇಳಿದರು.

ಪಹಲ್ಗಾಂ ದಾಳಿ ಬಗ್ಗೆ ಮೋದಿ ಜತೆ ಒಮರ್‌ ಭೇಟಿ

ನವದೆಹಲಿ: ಪಹಲ್ಗಾಂ ಉಗ್ರ ದಾಳಿ ಬಳಿಕ ಮೊದಲ ಬಾರಿಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಶನಿವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಉಭಯ ನಾಯಕರು ಜಮ್ಮು ಕಾಶ್ಮೀರದ ಸ್ಥಿತಿಗತಿ, ಭದ್ರತೆ ಪರಿಶೀಲನೆ ಸಭೆ ಸೇರಿ ಹಲವು ವಿಷಯಗಳ ಕುರಿತು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾತುಕತೆಯ ವಿವರ ಲಭ್ಯವಾಗಿಲ್ಲ.

ಆಗಿದ್ದು ಆಗಿ ಹೋಯಿತು: ಫಾರೂಖ್‌ ಅಬ್ದುಲ್ಲಾ ವಿವಾದ

ಶ್ರೀನಗರ: ‘1990ರ ಕಾಶ್ಮೀರಿ ಪಂಡಿತರ ನರಮೇಧ ನನ್ನ ಅವಧಿಯಲ್ಲಿ ನಡೆದಿಲ್ಲ. ಅದು ನಡೆದಿದ್ದೇ ಹೌದಾದರೆ, ಆಗಿದ್ದು ಆಗಿಹೋಯಿತು. ನಾನೇನು ಮಾಡಲಿ?’ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ. ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ‘1990ರ ಕಾಶ್ಮೀರಿ ಪಂಡಿತರ ನರಮೇಧಕ್ಕೆ ನೀವು ನನ್ನನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದೀರಿ. ಅದು ಆಗಿಹೋಗಿದೆ. ನಾನೇನು ಮಾಡಲಿ?’ ಎಂದಿದ್ದಾರೆ.

ಅಬ್ದುಲ್ಲಾ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ.1990ರ ಜ.19ರಂದು, ಅಬ್ದುಲ್ಲಾ ರಾಜೀನಾಮೆ ಬಳಿಕ ಉಗ್ರರಿಂದ ಸುಮಾರು 1,500 ಕಾಶ್ಮೀರಿ ಪಂಡಿತರ ಹತ್ಯೆ ನಡೆದಿತ್ತು. 5 ಲಕ್ಷಕ್ಕೂ ಅಧಿಕ ಪಂಡಿತರು ಪ್ರಾಣ ಉಳಿಸಿಕೊಳ್ಳಲು ರಾತ್ರೋರಾತ್ರಿ ಕಾಶ್ಮೀರ ಬಿಟ್ಟು ಓಡಿಬಂದಿದ್ದರು. ಆ ಕುರಿತು ಅಬ್ದುಲ್ಲಾರಿಗೆ ಮೊದಲೇ ಮಾಹಿತಿಯಿತ್ತು ಎಂಬ ಆರೋಪ ಮೊದಲಿನಿಂದಲೂ ಇದೆ.

Share this article