ಮತ ಪ್ರಮಾಣ ಹೆಚ್ಚಿಸಲು ತಟ್ಟೆ ಬಾರಿಸಿ: ಸ್ತ್ರೀಯರಿಗೆ ಮೋದಿ ಕರೆ

KannadaprabhaNewsNetwork | Published : May 22, 2024 12:50 AM

ಸಾರಾಂಶ

ತಟ್ಟೆ ಬಾರಿಸುತ್ತಾ ಮಹಿಳೆಯರು ಮೆರವಣಿಗೆ ಮಾಡಿದರೆ ಮತದಾನ ಪ್ರಮಾಣ ಹೆಚ್ಚುತ್ತೆ ಎಂದು ವಾರಾಣಸಿ ನಾರಿ ಶಕ್ತಿ ಸಮ್ಮೇಳನದಲ್ಲಿ ಮೋದಿ ಸಲಹೆ ನೀಡಿದ್ದಾರೆ.

ವಾರಾಣಸಿ: ‘ಪ್ರತಿ ಮತಗಟ್ಟೆಯಲ್ಲಿ 20-25 ಮಹಿಳೆಯರು ಸೇರಿಕೊಂಡು ತಟ್ಟೆ, ನಗಾರಿ ಬಾರಿಸುತ್ತಾ ಹಾಡು ಹಾಡುತ್ತಾ 10 ಮೆರವಣಿಗೆ ಮಾಡಿ ಜಾಗೃತಿ ಮೂಡಿಸಿದರೆ ಮತದಾನ ಪ್ರಮಾಣ ತನ್ನಿಂತಾನೇ ಹೆಚ್ಚಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳವಾರ ಸಂಜೆ ಸ್ವಕ್ಷೇತ್ರ ವಾರಾಣಸಿಯಲ್ಲಿ ನಡೆದ ನಾರಿ ಶಕ್ತಿ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ‘ಬಿಜೆಪಿಗರು 20-25 ಮಹಿಳೆಯರನ್ನು ಸೇರಿಸಬೇಕು. ಈ ಮಹಿಳೆಯರು ನಗಾರಿ ಬಾರಿಸುತ್ತಾ, ತಟ್ಟೆ ಬಾರಿಸುತ್ತಾ, ಹಾಡು ಹೇಳುತ್ತಾ ಮತಗಟ್ಟೆಗೆ ವ್ಯಾಪ್ತಿಯಲ್ಲಿ 8-10 ಮೆರವಣಿಗೆಗಳನ್ನು ನಡೆಸಿದರೆ, ಮತದಾನದ ಅಂಕಿಅಂಶಗಳು ಚಿಗುರೊಡೆಯುತ್ತವೆ’ ಎಂದರು.

ಈ ಹಿಂದೆ ಕೋವಿಡ್‌ ಮಹಾಮಾರಿಯ ವೇಳೆ ಕೂಡ ಮೋದಿ ಅವರು ತಟ್ಟೆ ಬಾರಿಸಿ ಜಾಗೃತಿ ಮೂಡಿಸುವ ಚಳವಳಿಗೆ ಕರೆ ನೀಡಿ ಗಮನ ಸೆಳೆದಿದ್ದರು.

ಮುಲಾಯಂಗೆ ಟಾಂಗ್‌:

ಇದೇ ವೇಳೆ, ಮಹಿಳೆ ಮೇಲೆ ಅತ್ಯಾಚಾರ ನಡೆದ ಪ್ರಕರಣದಲ್ಲಿ ಹುಡುಗರನ್ನು ಸಮರ್ಥಿಸಿಕೊಂಡು ‘ಲಡಕೇ ಲಡಕೇ ಹೋತೇ ಹೈ’ (ಹುಡುಗರು ಹುಡುಗರೇ ಬಿಡಿ.. ಹುಡುಗರು ತಪ್ಪು ಮಾಡುವುದು ಸಹಜ) ಎಂದಿದ್ದ ಎಸ್ಪಿ ನೇತಾರ ಮುಲಾಯಂ ಸಿಂಗ್ ಯಾದವ್ ಬಗ್ಗೆ ಲೇವಡಿ ಮಾಡಿದ ಮೋದಿ, ‘ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಆಡಳಿತದಲ್ಲಿ ಹೆಣ್ಣು ಮಕ್ಕಳನ್ನು ನಿರ್ಲಕ್ಷಿಸಲಾಗುತ್ತಿತ್ತು. ಆದರೆ, ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಯಾರೂ ಈ ರೀತಿ ತಪ್ಪು ಮಾಡುವುದಕ್ಕೆ ಧೈರ್ಯ ತೋರುವುದಿಲ್ಲ’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಕೊಂಡಾಡಿದರು.

20-25 ಸ್ತ್ರೀಯರು ಮೆರವಣಿಗೆ ಮಾಡಲಿಬಿಜೆಪಿಗರು 20-25 ಮಹಿಳೆಯರನ್ನು ಸೇರಿಸಬೇಕು. ಈ ಮಹಿಳೆಯರು ನಗಾರಿ ಬಾರಿಸುತ್ತಾ, ತಟ್ಟೆ ಬಾರಿಸುತ್ತಾ, ಹಾಡು ಹೇಳುತ್ತಾ ಮತಗಟ್ಟೆಗೆ ವ್ಯಾಪ್ತಿಯಲ್ಲಿ 8-10 ಮೆರವಣಿಗೆಗಳನ್ನು ನಡೆಸಿದರೆ, ಮತದಾನದ ಅಂಕಿ- ಅಂಶಗಳು ಚಿಗುರೊಡೆಯುತ್ತವೆ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.

Share this article