ಅಧಿಕಾರದಲ್ಲಿ ಮೋದಿ 25ನೇ ವರ್ಷಕ್ಕೆ ಪದಾರ್ಪಣೆ

KannadaprabhaNewsNetwork |  
Published : Oct 08, 2025, 01:00 AM ISTUpdated : Oct 08, 2025, 04:29 AM IST
ಮೋದಿ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸರ್ಕಾರದ ಮುಖ್ಯಸ್ಥರಾಗಿ 24 ವರ್ಷಗಳನ್ನು ಪೂರೈಸಿ, 25ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ.2001ರಲ್ಲಿ ಈ ದಿನ ಗುಜರಾತ್ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಇಂದಿನವರೆಗೆ ಅವರು ನಿರಂತರವಾಗಿ  ಅಧಿಕಾರದಲ್ಲಿದ್ದಾರೆ.

  ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸರ್ಕಾರದ ಮುಖ್ಯಸ್ಥರಾಗಿ 24 ವರ್ಷಗಳನ್ನು ಪೂರೈಸಿ, 25ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ.

2001ರಲ್ಲಿ ಈ ದಿನ (ಅ.7) ಗುಜರಾತ್ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಇಂದಿನವರೆಗೆ ಅವರು ನಿರಂತರವಾಗಿ ಸರ್ಕಾರಗಳ ಮುಖ್ಯಸ್ಥರಾಗಿ ಅಧಿಕಾರದಲ್ಲಿದ್ದಾರೆ. ಅರ್ಥಾತ್‌ 2001ರಿಂದ 2014ರ ಮಧ್ಯಭಾಗದ ವರೆಗೆ ಅವರು 13 ವರ್ಷ ಕಾಲ ಗುಜರಾತ್‌ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ನಂತರ 2014ರಲ್ಲಿ ಪ್ರಧಾನಿಯಾಗಿ ಪದೋನ್ನತಿ ಹೊಂದಿದ ಅವರು, ಈವರೆಗೂ ಕಳೆದ 11 ವರ್ಷಗಳಿಂದ ಆ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

ಈ ಬಗ್ಗೆ ಟ್ವೀಟರ್‌ನಲ್ಲಿ ಹರ್ಷ ವ್ಯಕ್ತಪಡಿಸಿರುವ ಮೋದಿ, ತಾವು ಮೊದಲ ಸಲ ಸಿಎಂ ಹಾಗೂ ನಂತರ ಪ್ರಧಾನಿ ಆಗಿ ಪ್ರಮಾಣವಚನ ಸ್ವೀಕರಿಸಿದ ಫೋಟೋ ಹಂಚಿಕೊಂಡಿದ್ದಾರೆ. ‘ಜನರ ಜೀವನವನ್ನು ಸುಧಾರಿಸುವುದು ಮತ್ತು ಈ ಮಹಾನ್ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದು ನನ್ನ ನಿರಂತರ ಪ್ರಯತ್ನವಾಗಿದೆ. ಭಾರತವಾಸಿಗಳ ನಿರಂತರ ಆಶೀರ್ವಾದದಿಂದಾಗಿ, ನಾನು ಸರ್ಕಾರದ ಮುಖ್ಯಸ್ಥನಾಗಿ 25ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಭಾರತದ ಜನರಿಗೆ ನನ್ನ ಕೃತಜ್ಞತೆಗಳು’ ಎಂದು ಹೇಳಿದ್ದಾರೆ.

‘ಇಷ್ಟು ವರ್ಷಗಳಿಂದ, ನಮ್ಮ ಜನರ ಜೀವನವನ್ನು ಸುಧಾರಿಸಲು ಮತ್ತು ನಮ್ಮೆಲ್ಲರನ್ನೂ ಪೋಷಿಸಿದ ಈ ಮಹಾನ್ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ನಾನು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

ಯುಪಿಎಗೆ ತರಾಟೆ:

ಇದೇ ವೇಳೆ, ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ‘ಯುಪಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ನೀತಿ ಸ್ಥಾಗಿತ್ಯದಿಂದ ಹಾನಿಗೊಳಗಾಗಿದ್ದ ಭಾರತ ಇಂದು ವಿಶ್ವದ ಅತಿದೊಡ್ಡ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಯೋಜನೆಗಳ ಮನೆಯಾಗಿದೆ’ ಎಂದು ಹರ್ಷಿಸಿದ್ದಾರೆ.

ಅಭಿನಂದನೆ:

ಮೋದಿ ಅವರನ್ನು ಕೇಂದ್ರ ಸಚಿವ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಜೆ.ಪಿ. ನಡ್ಡಾ ಆದಿಯಾಗಿ ಅನೇಕರು ಅಭಿನಂದಿಸಿದ್ದಾರೆ.

3 ಸಲ ಸಿಎಂ, 3 ಸಲ ಪ್ರಧಾನಿ:

ಗುಜರಾತ್‌ನಲ್ಲಿ ಸತತ 3 ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸಿದ ನಂತರ, ಅವರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ಸತತ 3 ರಾಷ್ಟ್ರೀಯ ಚುನಾವಣೆಗಳಲ್ಲಿ ಗೆಲ್ಲುವಂತೆ ಮಾಡಿದ್ದಾರೆ.

ಮೋದಿ ಎಂದಿಗೂ ಚುನಾವಣಾ ಸೋಲನ್ನು ಎದುರಿಸಿಲ್ಲ. ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಾಗಿ ಅತಿ ದೀರ್ಘಾವಧಿಗೆ ನಿರಂತರವಾಗಿ ಅಧಿಕಾರದಲ್ಲಿರುವ (ಸರ್ಕಾರದ ಮುಖ್ಯಸ್ಥ ಆಗಿರುವ) ಏಕೈಕ ವ್ಯಕ್ತಿ ಎಂಬ ಕೀರ್ತಿ ಮೋದಿ ಅವರಿಗೆ ಇದೆ. ಅರ್ಥಾತ್‌ 13 ವರ್ಷ ಸಿಎಂ ಹಾಗೂ 11 ವರ್ಷ ಪ್ರಧಾನಿಯಾಗಿ ಅವರು ನಿರಂತರವಾಗಿ ಅಧಿಕಾರದಲ್ಲಿದ್ದಾರೆ. ಈ ಹಿಂದಿನ ಯಾವ ಪ್ರಧಾನಿಯೂ ಈ ಸಾಧನೆ ಮಾಡಿರಲಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ