ಮೋದಿ 7 ಸಭೆ, 100 ದಿನದ ಅಜೆಂಡಾ ಚರ್ಚೆ

KannadaprabhaNewsNetwork | Updated : Jun 03 2024, 06:16 AM IST

ಸಾರಾಂಶ

ಎಕ್ಸಿಟ್‌ ಪೋಲ್‌ ಬೆನ್ನಲ್ಲೇ ತಯಾರಿ ಶುರು ಮಾಡಿದ್ದು, ಹೊಸ ಸರ್ಕಾರದಲ್ಲಿ ಏನೇನು ಮಾಡಬೇಕು ಮತ್ತು ಮೊದಲ ಸಂಪುಟ ಸಭೆಗೆ ಮಹತ್ವದ ತಯಾರಿ ನಡೆಸಿದ್ದಾರೆ

ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ದೇಶದ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡಿ 200ಕ್ಕೂ ಹೆಚ್ಚು ರ್‍ಯಾಲಿಗಳಲ್ಲಿ ಭಾಗವಹಿಸಿ ಹಾಗೂ ಅದು ಮುಗಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ಸತತ 45 ಗಂಟೆ ಧ್ಯಾನಕ್ಕೆ ಮೊರೆ ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಸತತ 7 ಸಭೆ ನಡೆಸುವ ಮೂಲಕ ವಿವಿಧ ವಿಷಯಗಳ ಕುರಿತು ಅವಲೋಕನ ನಡೆಸಿದ್ದಾರೆ. 

ಇಡೀ 7 ಹಂತದ ಚುನಾವಣಾ ಪ್ರಕ್ರಿಯೆ ಶನಿವಾರ ಮುಗಿಯುತ್ತಿದ್ದಂತೆಯೇ ಭಾನುವಾರ ಬೆಳಗ್ಗೆಯಿಂದಲೇ ಹಿರಿಯ ಅಧಿಕಾರಿಗಳ ಜೊತೆ ಸತತವಾಗಿ ಮೋದಿ ಸಭೆ ನಡೆಸಿದರು. ಕೇಂದ್ರದಲ್ಲಿ ಮರಳಿ ಅಧಿಕಾರಕ್ಕೆ ಬರುವ ಖಚಿತ ವಿಶ್ವಾಸದಲ್ಲಿರುವ ಅವರು, ಹೊಸ ಸರ್ಕಾರದ ಮೊದಲ 100 ದಿನದಲ್ಲಿ ಜಾರಿಗೊಳಿಸಬೇಕಾದ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿದರು. ಈ ಕಾರ್ಯಸೂಚಿ ಕುರಿತು ಹೊಸ ಸರ್ಕಾರದ ಮೊದಲ ಮಂತ್ರಿಮಂಡಲ ಸಭೆಯಲ್ಲೇ ಅನುಮೋದನೆ ಪಡೆಯುವ ಉದ್ದೇಶವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ.

ಇನ್ನು ದೇಶದ ಉತ್ತರ ಮತ್ತು ಪೂರ್ವದ ರಾಜ್ಯಗಳಲ್ಲಿ ಉಷ್ಣಮಾರುತದಿಂದ ಸಂಭವಿಸಿರುವ ಅನಾಹುತ, ಅಗ್ನಿ ಅನಾಹುತದ ಘಟನೆಗಳು, ಅದರಿಂದಾದ ಸಾವು ನೋವಿನ ಕುರಿತು ಪರಾಮರ್ಶೆ ನಡೆಸಿದರು. ಜೊತೆಗೆ ಕಾಲಕಾಲಕ್ಕೆ ಆಸ್ಪತ್ರೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಮತ್ತು ವಿದ್ಯುತ್‌ ಸುರಕ್ಷತಾ ಪರೀಕ್ಷೆ ನಡೆಸಿ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚಿಸಿದರು.

ಅಲ್ಲದೆ ಅರಣ್ಯ ಪ್ರದೇಶಗಳಲ್ಲಿ ಫೈರ್‌ ಲೈನ್‌ ನಿರ್ವಹಣೆ ಮೂಲಕ ಕಾಡ್ಗಿಚ್ಚು ತಡೆಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.

ಜೊತೆಗೆ ಇತ್ತೀಚೆಗೆ ಪೂರ್ವದ ಕರಾವಳಿ ರಾಜ್ಯಗಳ ಮೇಲೆ ಅಪ್ಪಳಿಸಿದ ರೆಮಲ್‌ ಚಂಡಮಾರುತದಿಂದ ಆದ ಹಾನಿ, ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಇದಾದ ನಂತರ, ಜೂ.5ರಂದು ನಡೆಯಲಿರುವ ವಿಶ್ವ ಪರಿಸರ ದಿನದ ಆಚರಣೆ ಹೇಗೆ ನಡೆಯಬೇಕು ಎಂಬುದರ ಕುರಿತೂ ಮೋದಿ ಸಭೆ ನಡೆಸಿದರು.

Share this article