ಪಾಕಿಗೆ ಬಳೆ ತೊಡಿಸುವೆ : ಪ್ರಧಾನಿ ಮೋದಿ

KannadaprabhaNewsNetwork | Updated : May 14 2024, 04:52 AM IST

ಸಾರಾಂಶ

ಪಿಒಕೆ ಬಿಟ್ಟುಕೊಡಲು ಪಾಕ್‌ ಬಳೆ ತೊಟ್ಟಿಲ್ಲ ಎಂದ ಫಾರೂಖ್‌ಗೆ ತಿರುಗೇಟು ನೀಡಿ ಪಾಕ್‌ನ ಅಣ್ವಸ್ತ್ರಕ್ಕೆ ಹೆದರುವ ವಿಪಕ್ಷ ನಾಯಕರು ಹೇಡಿಗಳು ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.

  ಮುಜಾಫರ್‌ಪುರ :  ಪ್ರತಿಪಕ್ಷಗಳು ರಚಿಸಿಕೊಂಡಿರುವ ‘ಇಂಡಿಯಾ’ ಎಂಬುದು ಹೇಡಿಗಳ ಕೂಟ. ಪಾಕಿಸ್ತಾನದ ಅಣ್ವಸ್ತ್ರಕ್ಕೆ ಹೆದರುವ ಹೇಡಿಗಳು ಆ ಕೂಟದಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಅಗತ್ಯ ಬಿದ್ದರೆ ಪಾಕಿಸ್ತಾನಕ್ಕೆ ಬಳೆ ತೊಡಿಸಲೂ ಸಿದ್ಧ ಎಂದು ನ್ಯಾಷನಲ್‌ ಕಾನ್ಪರೆನ್ಸ್‌ ಮುಖ್ಯಸ್ಥ ಫಾರೂಖ್‌ ಅಬ್ದುಲ್ಲಾ ಹೆಸರು ಹೇಳದೆಯೇ ಟಾಂಗ್ ನೀಡಿದ್ದಾರೆ.

ಬಿಹಾರದ ಹಾಜಿಪುರ, ಮುಜಾಫ್ಫರ್‌ಪುರ ಹಾಗೂ ಸರನ್‌ ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ ಸರಣಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದ ಅಣ್ವಸ್ತ್ರಗಳು ಇಂಡಿಯಾ ಕೂಟದ ನಾಯಕರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ. ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನಕ್ಕೆ ಕ್ಲೀನ್‌ಚಿಟ್‌ ನೀಡುವ ಆ ಪಕ್ಷಗಳು, ಸರ್ಜಿಕಲ್‌ ದಾಳಿ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿವೆ. ಆ ಕೂಟದ ಎಡರಂಗದ ನಾಯಕರು ನಮ್ಮ ಅಣ್ವಸ್ತ್ರಗಳನ್ನು ನಾಶಗೊಳಿಸಬೇಕು ಎಂಬ ಬಯಕೆ ವ್ಯಕ್ತಪಡಿಸುತ್ತಾರೆ ಎಂದು ಛೇಡಿಸಿದರು. 

ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಜತೆ ವಿಲೀನವಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಇತ್ತೀಚೆಗೆ ಹೇಳಿದ್ದರು. ಇಂಡಿಯಾ ಕೂಟದ ನಾಯಕರೂ ಆಗಿರುವ ಜಮ್ಮು-ಕಾಶ್ಮೀರದ ಫಾರೂಕ್‌ ಅಬ್ದುಲ್ಲಾ, ಪಾಕ್‌ ಆಕ್ರಮಿತ ಕಾಶ್ಮೀರವು ಭಾರತದ ಜತೆ ವಿಲೀನವಾಗಲು ಪಾಕಿಸ್ತಾನವೇನೂ ಬಳೆ ತೊಟ್ಟು ಕೂತಿಲ್ಲ, ಅದರ ಬಳಿ ಅಣು ಬಾಂಬ್‌ಗಳಿವೆ ಎಂದು ಹೇಳಿದ್ದರು. 

ಇದನ್ನೇ ಆಧಾರವಾಗಿಟ್ಟುಕೊಂಡು ಮೋದಿ ವಾಗ್ದಾಳಿ ನಡೆಸಿದ್ದಾರೆ.ಒಂದು ವೇಳೆ ಪಾಕಿಸ್ತಾನ ಬಳೆ ತೊಡುವುದಿಲ್ಲ ಎಂದಾದರೆ, ಆ ದೇಶ ತೊಡುವಂತೆ ಮಾಡೋಣ ಬಿಡಿ. ಪಾಕಿಸ್ತಾನದಲ್ಲಿ ಆಹಾರ ಧಾನ್ಯಗಳು ಇಲ್ಲ ಎಂದು ನನಗೆ ಗೊತ್ತಿದೆ. ಅವರ ಬಳಿ ಸಾಕಷ್ಟು ಪ್ರಮಾಣದ ಬಳೆಗಳೂ ಇಲ್ಲ ಎಂಬುದು ನನಗೀಗ ಗೊತ್ತಾಗಿದೆ ಎಂದು ಮೋದಿ ಹೇಳಿದರು.ಜಾರಿ ನಿರ್ದೇಶನಾಲಯ (ಇ.ಡಿ.) ರಾಜಕಾರಣಿಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳುತ್ತಿರುವ ಹಣ ದೇಶದ ಬಡವರದ್ದು. ಹಿಂದಿನ ಕಾಂಗ್ರೆಸ್‌ ಆಳ್ವಿಕೆಯ ಅವಧಿಯಲ್ಲಿ ಇ.ಡಿ. ಕೇವಲ 35 ಲಕ್ಷ ರು.ಗಳನ್ನು ವಶಪಡಿಸಿಕೊಂಡಿತ್ತು. ಅದನ್ನು ಶಾಲಾ ಬ್ಯಾಗ್‌ನಲ್ಲಿ ತುಂಬಬಹುದಾಗಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ ಇ.ಡಿ. 2200 ಕೋಟಿ ರು.ಗಳನ್ನು ಜಪ್ತಿ ಮಾಡಿದೆ. ಅದನ್ನು ಸಾಗಿಸಲು 70 ಸಣ್ಣ ಟ್ರಕ್‌ಗಳು ಬೇಕಾಗುತ್ತವೆ ಎಂದು ಹೇಳಿದರು.

ಫಾರೂಖ್‌ ಅಬ್ದುಲ್ಲಾ ಏನು ಹೇಳಿದ್ದರು?ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಜತೆ ವಿಲೀನವಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದ್ದರು. ಅದಕ್ಕೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ, ಪಿಒಕೆ ಬಿಟ್ಟುಕೊಡಲು ಪಾಕಿಸ್ತಾನವೇನೂ ಬಳೆ ತೊಟ್ಟು ಕೂತಿಲ್ಲ, ಅದರ ಬಳಿ ಅಣು ಬಾಂಬ್‌ಗಳಿವೆ ಎಂದಿದ್ದರು.

Share this article