ಬಿಜೆಪಿ ಗೆಲುವಿಗೆ ಮೋದಿ ಮಂತ್ರ: 18,18,18!

KannadaprabhaNewsNetwork | Updated : Feb 19 2024, 07:39 AM IST

ಸಾರಾಂಶ

18 ವರ್ಷ ತುಂಬಿದ ಹೊಸ ಮತದಾರರ ಸೆಳೆಯಲು ಶ್ರಮಿಸಿ, 18ನೇ ಲೋಕಸಭೆಗೆ ಸದಸ್ಯರ ಆರಿಸುವಂತೆ ನೋಡಿಕೊಳ್ಳಿ ಎಂದು 18ನೇ ತಾರೀಖಿನಂದು ಬಿಜೆಪಿಗರಿಗೆ ಪ್ರಧಾನಿಯಿಂದ ಕರೆ ನೀಡಲಾಗಿದೆ.

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಗೆಲ್ಲುವ ಸಂಬಂಧ ಶನಿವಾರವಷ್ಟೇ 370, 370, 370 ಎಂಬ ಮಂತ್ರ ಜಪಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ 18, 18, 18 ಎಂಬ ಮತ್ತೊಂದು ಗೆಲುವಿನ ಮಂತ್ರವನ್ನು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಹೇಳಿಕೊಟ್ಟಿದ್ದಾರೆ.

ಜೊತೆಗೆ ಮುಂದಿನ 100 ದಿನಗಳ ಕಾಲ ಇಂಥದ್ದೊಂದು ಕಾರ್ಯತಂತ್ರವನ್ನು ಮುಂದಿಟ್ಟುಕೊಂಡು ಶ್ರಮಿಸಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಗುರಿಯನ್ನು ಅವರು ನೀಡಿದ್ದಾರೆ.

ಇಲ್ಲಿನ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಪಕ್ಷದ ಪದಾಧಿಕಾರಿಗಳ ರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಭಾನುವಾರ ಮಾತನಾಡಿದ ಪ್ರಧಾನಿ ಮೋದಿ, ‘ನಾನು ಅಧಿಕಾರದ ಆಸೆಗಾಗಿ ಮೂರನೇ ಬಾರಿ ಆಯ್ಕೆ ಬಯಸುತ್ತಿಲ್ಲ, ಬದಲಾಗಿ ದೇಶದ ಅಭಿವೃದ್ಧಿಗಾಗಿ ಮರು ಆಯ್ಕೆ ಬಯಸುತ್ತಿದ್ದೇನೆ. ಏಕೆಂದರೆ ವಿಕಸಿತ ಭಾರತದ ಕನಸು ನನಸು ಮಾಡುವುದು ಕೇವಲ ಬಿಜೆಪಿಯಿಂದ ಮಾತ್ರವೇ ಸಾಧ್ಯ’ ಎಂದು ಹೇಳಿದರು.

ಜೊತೆಗೆ ‘ಇಂದು ಫೆ.18. ಮುಂದಿನ ಕೆಲ ದಿನಗಳಲ್ಲೇ ದೇಶದ ಲಕ್ಷಾಂತರ ಯುವ ಸಮೂಹ 18ನೇ ವಯಸ್ಸಿನ ಮಹತ್ವದ ಮೈಲುಗಲ್ಲು ದಾಟಲಿದೆ. ಇವರೆಲ್ಲಾ 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶ ಪಡೆಯಲಿದ್ದಾರೆ. 

ಹೀಗಾಗಿ ಈ ಹೊಸ ಮತದಾರರನ್ನು ತಲುಪಿ ಅವರಿಗೆ ಬಿಜೆಪಿ ಬಗ್ಗೆ ನಂಬಿಕೆ ಬರುವಂತೆ ಮಾಡಬೇಕು. ಇದಕ್ಕಾಗಿ ನಾವು ಮುಂದಿನ 100 ದಿನಗಳ ಕಾಲ ಹೊಸ ಚೈತನ್ಯ, ಶಕ್ತಿ ಮತ್ತು ಉತ್ಸಾಹದಿಂದ ಕೆಲಸ ಮಾಡಬೇಕು’ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಶನಿವಾರ ಇದೇ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 370 ಎಂಬುದು ನಮಗೆ ಕೇವಲ ಸಂಖ್ಯೆಯಲ್ಲ. ಅದೊಂದು ಭಾವನಾತ್ಮಕ ವಿಷಯ. ಏಕೆಂದರೆ ಪಕ್ಷದ ಸಂಸ್ಥಾಪಕ ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರ ಕನಸಾಗಿದ್ದ 370ನೇ ವಿಧಿಯನ್ನು ನಾವು ರದ್ದು ಮಾಡಿದ್ದೇವೆ. 

ಜೊತೆಗೆ ಮುಂದಿನ 100 ದಿನಗಳಲ್ಲಿ ಲೋಕಸಭಾ ಚುನಾವಣೆಗಳು ನಮ್ಮ ಮುಂದಿರುತ್ತವೆ. ಹೀಗಾಗಿ ತಡ ಮಾಡದೇ ಪ್ರತಿ ನಾಯಕರು, ಕಾರ್ಯಕರ್ತರು ಪಕ್ಷವು ಏಕಾಂಗಿಯಾಗಿ 370 ಸ್ಥಾನ ಗೆಲ್ಲುವುದನ್ನು ಖಾತರಿಪಡಿಸಬೇಕು. 

ಜೊತೆಗೆ ಪ್ರತಿ ಬೂತ್‌ನಲ್ಲೂ 2019ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿಗೆ ಲಭ್ಯವಾಗಿದ್ದಕ್ಕಿಂತ 370 ಹೆಚ್ಚು ಮತಗಳು ಬರುವಂತೆ ನೋಡಿಕೊಳ್ಳಬೇಕು’ ಎಂದು ಕರೆ ನೀಡಿದ್ದರು.

100 ದಿನ ವಿಶ್ರಾಂತಿ ಇಲ್ಲದೆ ಕೆಲಸ ಮಾಡಿ: ಮೋದಿ
ಕೇಂದ್ರದಲ್ಲಿ ಮೂರನೇ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಕ್ಷದ ಕಾರ್ಯಕರ್ತರು ಮುಂದಿನ 100 ದಿನಗಳ ಕಾಲ ಅತ್ಯಂತ ಉತ್ಸಾಹ ಮತ್ತು ಭರವಸೆಯೊಂದಿಗೆ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

ಜುಲೈ, ಆಗಸ್ಟ್‌ನಲ್ಲೂ ವಿದೇಶ ಪ್ರವಾಸಕ್ಕೆ ಕರೆ: ಇನ್ನೂ ಲೋಕಸಭೆ ಚುನಾವಣೆಯೇ ಘೋಷಣೆಯಾಗಿಲ್ಲ. ಆದರೂ ಹಲವು ದೇಶಗಳು ಮುಂದಿನ ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ಗಳಲ್ಲಿ ನನಗೆ ಆಹ್ವಾನವನ್ನು ನೀಡಿವೆ. ನಾವು ಗೆಲ್ಲುವುದು ನಿಶ್ಚಯವಾಗಿದೆ. ಆದರೆ ಗೆಲುವಿನ ಅಂತರವನ್ನು ಹೆಚ್ಚಿಸಲು ಶ್ರಮಿಸಬೇಕು ಎಂದಿದ್ದಾರೆ.

Share this article