ಶ್ರೀಕೃಷ್ಣ ಪರಮಾತ್ಮನ ಐತಿಹ್ಯದ ಪುರಾತನ ಬೇಟ್ ದ್ವಾರಕೆಗೆ ಸಂಪರ್ಕ ಕಲ್ಪಿಸುವ ದೇಶದ ಅತಿ ಉದ್ದದ ಕೇಬಲ್ ಸೇತುವೆಯನ್ನು ಪ್ರಧಾನಿ ಮೋದಿ ಭಾನುವಾರ ಲೋಕಾರ್ಪಣೆ ಮಾಡಿದರು. ಇದಕ್ಕೆ ಸುದರ್ಶನ ಸೇತು ಎಂದು ಹೆಸರಿಡಲಾಗಿದೆ.
ದ್ವಾರಕಾ: ಶ್ರೀಕೃಷ್ಣ ಪರಮಾತ್ಮನ ಐತಿಹ್ಯದ ಪುರಾತನ ಬೇಟ್ ದ್ವಾರಕೆಗೆ ಸಂಪರ್ಕ ಕಲ್ಪಿಸುವ ದೇಶದ ಅತಿ ಉದ್ದದ ಕೇಬಲ್ ಸೇತುವೆಯನ್ನು ಪ್ರಧಾನಿ ಮೋದಿ ಭಾನುವಾರ ಲೋಕಾರ್ಪಣೆ ಮಾಡಿದರು. ಇದಕ್ಕೆ ಸುದರ್ಶನ ಸೇತು ಎಂದು ಹೆಸರಿಡಲಾಗಿದೆ.
ಹಾಲಿ ದ್ವಾರಕಾ ನಗರದಿಂದ 30 ಕಿ.ಮೀ. ದೂರದಲ್ಲಿರುವ ಓಖಾ ಬಂದರಿನಿಂದ ಪುರಾತನ ದ್ವಾರಕಾಧೀಶ ಮಂದಿರ ಇರುವ ಬೇಟ್ ದ್ವಾರಕೆ ದ್ವೀಪಕ್ಕೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ.
ಓಖಾದಿಂದ ಬೇಟ್ ದ್ವಾರಕಾ ವರೆಗೆ 2.32 ಕಿ.ಮೀ ಉದ್ದದ ಸೇತುವೆಯನ್ನು ಅರಬ್ಬಿ ಸಮುದ್ರದ ಮೇಲೆ ನಿರ್ಮಿಸಲಾಗಿದೆ. ಚತುಷ್ಪಥ ಸೇತುವೆಯು 2.32 ಕಿ.ಮೀ ಉದ್ದ ಮತ್ತು 27.20 ಮೀಟರ್ ಅಗಲವಿದ್ದು, ರಸ್ತೆಯ ಉಭಯ ಬದಿಗಳಲ್ಲಿ ತಲಾ 2.5 ಮೀ. ಅಗಲದ ಪಾದಚಾರಿ ಮಾರ್ಗವನ್ನು ಅಳವಡಿಸಲಾಗಿದೆ.
979 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆಯುಂದ ಇನ್ನು ಮುಂದೆ ದ್ವಾರಕಾ ದ್ವೀಪಕ್ಕೆ ದಿನದ 24 ಗಂಟೆಯೂ ಸಂಪರ್ಕ ಸಿಕ್ಕಂತಾಗಿದೆ. ಭಗವದ್ಗೀತೆ ಕೆತ್ತನೆ:
ಸೇತುವೆಯ ಪಾದಚಾರಿ ಮಾರ್ಗದಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಕೆತ್ತನೆ ಮಾಡಲಾಗಿದೆ. ಅಲ್ಲದೆ ಉಭಯ ತಡೆಗೋಡೆಗಳಲ್ಲಿ ಶ್ರೀಕೃಷ್ಣನ ಚಿತ್ರಗಳನ್ನು ಸಾಲಾಗಿ ವಿನ್ಯಾಸಗೊಳಿಸಲಾಗಿದೆ.
ಈವರೆಗೂ ಹೇಗೆ ಹೋಗಬೇಕಿತ್ತು?
ಇದಕ್ಕೂ ಮೊದಲು ಶ್ರೀಕೃಷ್ಣನ ಪುರಾತನ ದೇಗುಲವನ್ನು ಕಾಣಲು ಭಕ್ತಾದಿಗಳು ಓಖಾ ಬಂದರಿನಿಂದ ಬೋಟ್ ಮೂಲಕ ಕೇವಲ ಹಗಲಿನಲ್ಲಿ ಮಾತ್ರ ಸಂಚರಿಸಲು ಅವಕಾಶವಿತ್ತು. ಆದರೆ ಇನ್ನು ದಿನದ 24 ಗಂಟೆಯೂ ಓಖಾದಿಂದ ಬೇಟ್ ದ್ವಾರಕೆಗೆ ವಾಹನ ಮೂಲಕ ತೆರಳಬಹುದು.