ದೇಶವನ್ನು ನೀವು ಇನ್ನೆಷ್ಟು ಪೀಸ್‌ ಮಾಡಬೇಕು: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಆಕ್ರೋಶ

KannadaprabhaNewsNetwork | Updated : Feb 06 2024, 07:39 AM IST

ಸಾರಾಂಶ

ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕಾಗಲಿದೆ ಎಂಬ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್‌ ಹೇಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ನವದೆಹಲಿ: ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮುಂದುವರೆಸಿದರೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕಾಗಲಿದೆ ಎಂಬ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್‌ ಹೇಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ಭಾರತವನ್ನು ಇಷ್ಟು ಭಾಗಗಳಾಗಿ ಒಡೆದಿದ್ದು ಸಾಲದೇ? ಇನ್ನೆಷ್ಟು ಒಡೆಯಬೇಕು ಎಂಬು ಬಯಸಿದ್ದೀರಿ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

 ಲೋಕಸಭೆಯಲ್ಲಿ ಸೋಮವಾರ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಸುದೀರ್ಘವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕರ ರಾಷ್ಟ್ರ ವಿಭಜನೆ ನೀತಿ, ಭಾರತೀಯರ ಕುರಿತು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಟೀಕೆ, ಒಬಿಸಿ ಸಮುದಾಯದ ಕುರಿತು ಕಾಂಗ್ರೆಸ್‌ನ ನಿರ್ಲಕ್ಷ್ಯ, ವಿಪಕ್ಷವಾಗಿ ಹೊಣೆ ನಿರ್ವಹಿಸಲು ಕಾಂಗ್ರೆಸ್‌ನ ವೈಫಲ್ಯ, ಕಾಂಗ್ರೆಸ್‌ ಮುನ್ನಡೆಸುವಲ್ಲಿ ರಾಹುಲ್‌ ಗಾಂಧಿ ವೈಫಲ್ಯ, ವಿಪಕ್ಷ ನಾಯಕ ಭ್ರಷ್ಟಾಚಾರ ಮೊದಲಾದ ವಿಷಯಗಳ ಕುರಿತು ಕಿಡಿಕಾರಿದರು.

ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370, ಎನ್‌ಡಿಎ ಒಟ್ಟಾರೆ 400ಕ್ಕೂ ಅಧಿಕ ಸ್ಥಾನ ಪಡೆದು 3ನೇ ಬಾರಿಗೆ ಅಧಿಕಾರಕ್ಕೆ ಬರಲಿದೆ. ಈ ಅವಧಿಯಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೆಷ್ಟು ವಿಭಜನೆ ಬೇಕು?
ಸೋಮವಾರ ಲೋಕಸಭೆಯಲ್ಲಿ ಕಾಂಗ್ರೆಸ್‌ ನೀತಿಗಳನ್ನು ಎಳೆಎಳೆಯಾಗಿ ಟೀಕಿಸಿ ತಿರುಗೇಟು ನೀಡಿದ ಪ್ರಧಾನಿ ಮೋದಿ, ‘ಕಾಂಗ್ರೆಸ್‌ನ ಕೆಲ ಸಂಸದರು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡುತ್ತಿದ್ದಾರೆ. 

ಭಾರತವನ್ನು ಈಗಾಗಲೇ ಹಲವು ಭಾಗಗಳಾಗಿ ಒಡೆದಿದ್ದು, ಕಾಂಗ್ರೆಸ್ಸಿಗರಿಗೆ ಸಾಲದಾಗಿದೆಯೇ? ಇನ್ನೂ ದೇಶವನ್ನು ಒಡೆಯಬೇಕೆಂಬ ಅವರ ಮನಸ್ಥಿತಿ ಹೋಗಿಲ್ಲ. 

ನೆಹರೂ ಪ್ರಧಾನಿಯಾಗಿದ್ದಾಗ ಪಾಕಿಸ್ತಾನವನ್ನು ಪ್ರತ್ಯೇಕ ಮಾಡಿದ್ದು ಸಾಲದೆಂಬಂತೆ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ರಚಿಸಿ ಪ್ರತ್ಯೇಕ ರಾಷ್ಟ್ರದಂತೆ ವಿಶೇಷ ಸೌಲಭ್ಯಗಳನ್ನು ನೀಡುವಂತೆ ಕಾನೂನು ರೂಪಿಸಿ ಅಭಿವೃದ್ಧಿಯಿಂದ ಮರೀಚಿಕೆಯಾಗಿತ್ತು. 

ಆದರೆ ಇಂದು 370ನೇ ವಿಧಿ ರದ್ದತಿಯಿಂದ ಜಮ್ಮು ಕಾಶ್ಮೀರವು ವಿಕಸಿತ ಭಾರತದ ಪ್ರತೀಕವಾಗಿ ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದುತ್ತಿದೆ. ದೇಶ ಒಡೆಯುವುದರಿಂದ ಅಭಿವೃದ್ಧಿ ಮರೀಚಿಕೆಯಾಗುತ್ತದೆಯೇ ಹೊರತು ಅಭಿವೃದ್ಧಿ ಹೊಂದುವುದಿಲ್ಲ’ ಎಂದು ಚಾಟಿ ಬೀಸಿದರು.

ಜೊತೆಗೆ, ನೆಹರೂ ಕಾಲದ ಕಾಂಗ್ರೆಸ್‌ನಿಂದಾಗಿ ಅಖಂಡ ಭಾರತವನ್ನು ಪಾಕಿಸ್ತಾನ, ಪೂರ್ವ ಪಾಕಿಸ್ತಾನ (ಬಾಂಗ್ಲಾದೇಶ), ಬರ್ಮಾ ಮುಂತಾದ ದೇಶಗಳನ್ನಾಗಿ ಒಡೆಯಲಾಯ್ತು ಎಂದೂ ಕಾಂಗ್ರೆಸ್‌ ವಿರುದ್ಧ ಮೋದಿ ಕಿಡಿಕಾರಿದರು.

Share this article