ಕದನ ವಿರಾಮ ಘೋಷಣೆ ಬಳಿಕವೂ ಸಮರ ನಡೆಸಿದ್ದ ಪಾಕ್‌ ಈಗ ಥಂಡಾ

KannadaprabhaNewsNetwork |  
Published : May 12, 2025, 12:03 AM ISTUpdated : May 12, 2025, 05:19 AM IST
ಮೋದಿ ಮೀಟಿಂಗ್  | Kannada Prabha

ಸಾರಾಂಶ

ಕದನ ವಿರಾಮದ ಬಳಿಕವೂ ಗಡಿಯಲ್ಲಿ ಪಾಕಿಸ್ತಾನ ಮುಂದುವರಿಸಿದ್ದ ಶೆಲ್ ದಾಳಿ ಮತ್ತು ಡ್ರೋನ್ ದಾಳಿಗಳ ಬಗ್ಗೆ ತೀವ್ರ ಕೆಂಡಾಮಂಡಲರಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ  

  ನವದೆಹಲಿ : ಕದನ ವಿರಾಮದ ಬಳಿಕವೂ ಗಡಿಯಲ್ಲಿ ಪಾಕಿಸ್ತಾನ ಮುಂದುವರಿಸಿದ್ದ ಶೆಲ್ ದಾಳಿ ಮತ್ತು ಡ್ರೋನ್ ದಾಳಿಗಳ ಬಗ್ಗೆ ತೀವ್ರ ಕೆಂಡಾಮಂಡಲರಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ‘ಆಪರೇಷನ್‌ ಸಿಂದೂರ ಇನ್ನೂ ಮುಗಿದಿಲ್ಲ. ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ. ಪಾಕ್‌ನ ಗುಂಡಿನ ದಾಳಿಗೆ ಭಾರತ ಬಾಂಬ್‌ ಮೂಲಕ ಉತ್ತರಿಸಲಿದೆ. ಭಾರತದ ಮೇಲೆ ಅಣ್ವಸ್ತ್ರ ದಾಳಿ ಮಾಡುತ್ತೇವೆ ಎಂದು ಬೆದರಿಸಿ ಭಯೋತ್ಪಾದನೆ ಮಾಡಿದರೆ ಸುಮ್ಮನಿರುವುದಿಲ್ಲ. ಭಾರತ ಇನ್ನು ಮುಂದೆ ಪಾಕ್‌ ಅಟಾಟೋಪಕ್ಕೆ ವಜ್ರಮುಷ್ಟಿಯಿಂದ ತಿರುಗೇಟು ನೀಡಲಿದೆ’ ಎಂದು ಗುಡುಗಿದ್ದಾರೆ.

ಈ ಮೂಲಕ ಪಾಕಿಸ್ತಾನ ಮುಂದಿನ ದಿನಗಳಲ್ಲಿ ಯಾವುದೇ ಉಗ್ರ ಚಟುವಟಿಕೆ ನಡೆಸಿದರೆ ಅದನ್ನು ಯುದ್ದ ಎಂದೇ ಪರಿಗಣಿಸಿ ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು ಶತ್ರು ದೇಶಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಸಂಜೆಯಿಂದೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾನುವಾರ ಸೇನೆ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ ಅವರು, ‘ಅವರು (ಪಾಕಿಗಳು) ಗುಂಡು ಹಾರಿಸಿದರೆ, ನೀವು ಬಾಂಬ್‌ನಿಂದ ಉತ್ತರಿಸಿ’ ಎಂದು ಸಶಸ್ತ್ರ ಪಡೆಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

‘ಐಎಸ್‌ಐ ಜತೆ ನಿಕಟ ಸಂಬಂಧ ಹೊಂದಿದ್ದ ಮುರೀದ್‌ಕೆ ಮತ್ತು ಬಹಾವಲ್ಪುರದ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಭಾರತದ ರಾಜಧಾನಿ ನವದೆಹಲಿ ದೃಷ್ಟಿ ಕಳೆದುಕೊಂಡಿಲ್ಲ. ನಾವು ನಿಮ್ಮ ಕೇಂದ್ರ ಕಚೇರಿಯ ಮೇಲೆಯೇ ದಾಳಿ ಮಾಡುತ್ತೇವೆ. ಬಲಿಪಶುಗಳು ಮತ್ತು ಅಪರಾಧಿಗಳನ್ನು ಸಮೀಕರಿಸಲು ಸಾಧ್ಯವಿಲ್ಲ ಎಂದು ಭಾರತ ಜಗತ್ತಿಗೆ ಸ್ಪಷ್ಟಪಡಿಸಿದೆ’ ಎಂದು ಮೋದಿ ಹೇಳಿದ್ದಾರೆ.

‘ಪಾಕಿಸ್ತಾನವು ಇನ್ನು ಭಾರತದ ಮೇಲೆ ಅಣ್ವಸ್ತ್ರ ದಾಳಿ ಮಾಡುವ ಬೆದರಿಕೆ ಹಾಕಿ ಇಲ್ಲಿ ಉಗ್ರವಾದಕ್ಕೆ ಮುಂದಾಗಬಹುದು. ಇದಕ್ಕೆ ನಾವು ವಜ್ರಮುಷ್ಟಿಯಿಂದ ಉತ್ತರ ಕೊಡುತ್ತೇವೆ. ಅಣುಬಾಂಬ್‌ ದಾಳಿಯ ಬೆದರಿಕೆ ಇನ್ನೆಂದೂ ಪಾಕಿಸ್ತಾನವನ್ನು ಕಾಪಾಡಲ್ಲ. ಪಾಕಿಸ್ತಾನ ಗುಂಡಿನ ದಾಳಿ ನಡೆಸಿದರೆ ನೀವು ಬಾಂಬ್‌ನಿಂದ ಉತ್ತರ ನೀಡಬೇಕು. ಅವರ ಪ್ರತಿ ದಾಳಿಗೂ ದುಪ್ಪಟ್ಟು ದಾಳಿ ನಡೆಸಬೇಕು; ಎಲ್ಲೇ ಅಡಗಿ ಕುಳಿತರೂ ಉಗ್ರರನ್ನು ಹೊಡೆದು ಹಾಕಲಾಗುವುದು. ಈಗಾಗಲೇ ಆಪರೇಶನ್‌ ಸಿಂದೂರದ ಮೂಲಕ ಈ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ’ ಎಂದು ಸಶಸ್ತ್ರ ಪಡೆಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕದನ ವಿರಾಮಕ್ಕೆ

ಏನು ಕಾರಣ?

1. ಪಾಕ್‌ ಸೇನೆಯ ಕೇಂದ್ರ ಕಚೇರಿ ಇರುವ ರಾವಲ್ಪಿಂಡಿಯ ಮೇಲೂ ಭಾರತ ದಾಳಿ ಮಾಡಿತು. ಒಂದು ದಾಳಿಯಂತೂ ಆ ದೇಶದ ಸೇನಾ ಮುಖ್ಯಸ್ಥರ ಮನೆಯಿಂದ 10 ಕಿ.ಮೀ. ದೂರದವರೆಗೆ ಹೋಗಿತ್ತು. ಜತೆಗೆ ಆ ಸ್ಥಳ ಪಾಕ್‌ ಅಣ್ವಸ್ತ್ರ ನಿರ್ವಹಣೆಯ ಕಮಾಂಡ್‌ ಕೇಂದ್ರದ ಸನಿಹದಲ್ಲೇ ಇತ್ತು. ಭಾರತ ಮುಂದಿನ ಹಂತದಲ್ಲಿ ತಾನು ಅಣ್ವಸ್ತ್ರಗಳನ್ನು ರಹಸ್ಯವಾಗಿಟ್ಟಿರುವ ಕಿರಾನಾ ಬೆಟ್ಟಕ್ಕೂ ದಾಳಿ ಮಾಡಬಹುದು ಎಂಬ ಮಾಹಿತಿ ಸಿಕ್ಕಿತು. ಇದರಿಂದ ಬೆಚ್ಚಿದ ಪಾಕ್‌ ಕದನ ವಿರಾಮಕ್ಕಾಗಿ ಅಮೆರಿಕದ ಅಂಗಲಾಚಿತು. ಅಮೆರಿಕ ಭಾರತದ ಮೇಲೆ ಒತ್ತಡ ಹೇರಿತು.

2. ಭಾರತ ಶುಕ್ರವಾರ ರಾತ್ರಿ ಪಾಕಿಸ್ತಾನದ 4 ವಾಯುನೆಲೆಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿತ್ತು. ಇಂಥ ದಾಳಿಯನ್ನು ಪಾಕ್‌ ನಿರೀಕ್ಷಿಸಿರಲಿಲ್ಲ. ಭಾರತವನ್ನು ಎದುರಿಸಲು ಅಣ್ವಸ್ತ್ರಗಳ ಬಳಕೆ ಬಗ್ಗೆ ಪಾಕಿಸ್ತಾನದಲ್ಲಿ ಚರ್ಚೆ ಆರಂಭವಾಗಿತ್ತು. ಯುದ್ಧ ಕೈಮೀರಿ ಹೋಗುತ್ತಿದೆ ಎಂಬುದನ್ನು ಅರಿತ ಅಮೆರಿಕ ಮಧ್ಯಪ್ರವೇಶಿಸಿ ಕದನ ವಿರಾಮಕ್ಕೆ ಸೂಚಿಸಿತು. ಭಾರತದ ಜತೆ ಮೊದಲು ಮಾತನಾಡಲು ಪಾಕ್‌ಗೆ ತಾಕೀತು ಮಾಡಿತು.

ನುಗ್ಗಿ ಹೊಡೆದಿದ್ದೇವೆ,

ಪಹಲ್ಗಾಂ ದಾಳಿಗೆ

ಪ್ರತೀಕಾರ ಆಗಿದೆ

ಪಾಕಿಸ್ತಾನ ಸೇನೆಯ ಮುಖ್ಯ ಕಚೇರಿ ಇರುವ ರಾವಲ್ಪಿಂಡಿ ಮೇಲೂ ನುಗ್ಗಿ ಹೊಡೆಯುವ ಮೂಲಕ ಭಾರತ ತನ್ನ ಸೇನಾ ಸಾಮರ್ಥ್ಯ ತೋರಿಸಿಕೊಟ್ಟಿದೆ. ಪಹಲ್ಗಾಂ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ‘ಆಪರೇಷನ್‌ ಸಿಂದೂರ’ ಸೇನಾ ಕಾರ್ಯಾಚರಣೆ ಅಷ್ಟೇ ಆಗಿರಲಿಲ್ಲ, ಉಗ್ರವಾದದ ವಿರುದ್ಧದ ಭಾರತದ ರಾಜಕೀಯ, ಸಾಮಾಜಿಕ ಮತ್ತು ವ್ಯೂಹಾತ್ಮಕ ಸಂಕಲ್ಪದ ಪ್ರತೀಕವಾಗಿತ್ತು. ಈ ಕಾರ್ಯಾಚರಣೆ ದೇಶದ ಮಿಲಿಟರಿ ಸಾಮರ್ಥ್ಯವನ್ನೂ ಜಗತ್ತಿಗೆ ತೋರಿಸಿಕೊಟ್ಟಿದೆ.

- ರಾಜನಾಥ ಸಿಂಗ್‌, ರಕ್ಷಣಾ ಸಚಿವ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

10 ಮಿನಿಟ್ಸ್‌ ಡೆಲಿವರಿ ಇನ್ನು ನಿಮಗೆ ಸಿಗಲ್ಲ!
ಬೀದಿನಾಯಿ ಇಷ್ಟ ಆದ್ರೆ ಮನೇಲಿ ಸಾಕಿ : ಸುಪ್ರೀಂ