ಮಹಾರಾಷ್ಟ್ರ: ವಾರ್ಷಿಕ 1 ಲಕ್ಷ ರು. ಆದಾಯ ಗಳಿಸುವ ಮಹಿಳಾ ಸ್ವಸಹಾಯ ಸಂಘಗಳ ‘ಲಖ್‌ಪತಿ ದೀದಿ’ಗಳ ಜತೆ ಮೋದಿ ಸಂವಾದ

KannadaprabhaNewsNetwork |  
Published : Aug 26, 2024, 01:37 AM ISTUpdated : Aug 26, 2024, 04:35 AM IST
ಮೋದಿ | Kannada Prabha

ಸಾರಾಂಶ

ಮಹಾರಾಷ್ಟ್ರದ ಜಲಗಾವ್‌ನಲ್ಲಿ ಪ್ರಧಾನಿ ಮೋದಿ ವಾರ್ಷಿಕ 1 ಲಕ್ಷ ರು. ಆದಾಯ ಗಳಿಸುವ ಮಹಿಳಾ ಸ್ವಸಹಾಯ ಸಂಘಗಳ ‘ಲಖ್‌ಪತಿ ದೀದಿ’ಗಳ (ಲಕ್ಷಾಧಿಪತಿ ಸೋದರಿಯರು) ಜತೆ ಭಾನುವಾರ ಸಂವಾದ ನಡೆಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಜಲಗಾವ್‌ನಲ್ಲಿ ಪ್ರಧಾನಿ ಮೋದಿ ವಾರ್ಷಿಕ 1 ಲಕ್ಷ ರು. ಆದಾಯ ಗಳಿಸುವ ಮಹಿಳಾ ಸ್ವಸಹಾಯ ಸಂಘಗಳ ‘ಲಖ್‌ಪತಿ ದೀದಿ’ಗಳ (ಲಕ್ಷಾಧಿಪತಿ ಸೋದರಿಯರು) ಜತೆ ಭಾನುವಾರ ಸಂವಾದ ನಡೆಸಿದ್ದಾರೆ.

ತಮ್ಮ ಸರ್ಕಾರದ ಅವಧಿಯಲ್ಲಿ ಲಖ್‌ಪತಿಗಳಾದ ಸ್ವ-ಸಹಾಯ ಗುಂಪುಗಳ 11 ಲಕ್ಷ ಮಹಿಳೆಯರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ, ‘2014ರ ತನಕ ಸ್ವ-ಸಹಾಯ ಗುಂಪುಗಳಿಗೆ 25,000 ಕೋಟಿ ರು.ಸಾಲ ನೀಡಲಾಗುತ್ತಿತ್ತು. ಕಳೆದ ಹತ್ತು ವರ್ಷಗಳಲ್ಲಿ ಇದು 9 ಲಕ್ಷ ಕೋಟಿ ರು. ಏರಿಕೆಯಾಗಿದೆ’ ಎಂದರು.

ಈ ಸಂದರ್ಭದಲ್ಲಿ 4.3 ಲಕ್ಷ ಸ್ವ-ಸಹಾಯ ಗುಂಪುಗಳ 48 ಲಕ್ಷ ಸದಸ್ಯರಿಗೆ ಉಪಯೋಗವಾಗುವಂತೆ 2,500 ಕೋಟಿ ರು. ಬಿಡುಗಡೆ ಮಾಡಿದರು ಹಾಗೂ 2.35 ಗುಂಪುಗಳ 25.8 ಲಕ್ಷ ಸದಸ್ಯರಿಗೆ ಪ್ರಯೋಜನವಾಗುವಂತೆ 5,000 ಕೋಟಿ ರು. ವಿತರಿಸಿದರು.

ಜಾನುವಾರು ಸಾಕಣೆ ಸೇರಿದಂತೆ ಸರ್ಕಾರದ ಯೋಜನೆಗಳಾದ ಕೃಷಿ ಶಕ್ತಿ, ನಮೋ ಡ್ರೋನ್‌ ದೀದಿಗಳಲ್ಲಿಯೂ ಸ್ವ-ಸಹಾಯ ಗುಂಪುಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಇವುಗಳಿಂದ ಗ್ರಾಮೀಣ ಪ್ರದೇಶದಲ್ಲಿ ಅಗತ್ಯವಿರುವ ಕಲೆಗಳು ಕರಗತವಾಗುತ್ತವೆ ಹಾಗೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

==

ಮಾಹಿತಿ ನೀಡದೆ ಪಾಕ್‌ ಆಗಸದಲ್ಲಿ ಮೋದಿ ವಿಮಾನ ಹಾರಾಟ 

ಇಸ್ಲಾಮಾಬಾದ್‌: ಇತ್ತೀಚಿನ ಉಕ್ರೇನ್ ಪ್ರವಾಸದ ವೇಳೆ ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ನೀಡದೆ 46 ನಿಮಿಷಗಳ ಕಾಲ ಆ ದೇಶದ ಆಗಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಮಾನ ಹಾರಾಟ ನಡೆಸಿರುವುದು ಬೆಳಕಿಗೆ ಬಂದಿದೆ.

ವಾಣಿಜ್ಯ ವಿಮಾನಗಳು ಹಾರಾಟ ನಡೆಸುವುದಕ್ಕೆ ಅನುಮತಿ ನೀಡಿರುವ ದೇಶದ ಮೇಲೆ ಪ್ರಧಾನಿ ಅಥವಾ ಗಣ್ಯಾತಿಗಣ್ಯರ ವಿಮಾನ ಹಾರಾಟ ನಡೆಸುವುದಕ್ಕೆ ಯಾವುದೇ ಮಾಹಿತಿ ನೀಡುವ ಅಥವಾ ಅನುಮತಿ ಕೇಳುವ ಅಗತ್ಯವಿಲ್ಲ. ಆದರೂ, ಸಾಮಾನ್ಯವಾಗಿ ಪೂರ್ವಮಾಹಿತಿ ನೀಡುವ ಸಂಪ್ರದಾಯವಿದೆ. ಆದರೆ ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳುವಾಗ ಪ್ರಧಾನಿ ಮೋದಿಯವರನ್ನು ಹೊತ್ತ ವಿಮಾನ ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ನೀಡದೆ ಆ ದೇಶದ ಆಗಸದಲ್ಲಿ ಹಾರಿ ಭಾರತಕ್ಕೆ ಬಂದಿದೆ ಎಂದು ಪಾಕಿಸ್ತಾನದ ಪ್ರಮುಖ ದಿನಪತ್ರಿಕೆಯಾದ ‘ಡಾನ್‌’ ವರದಿ ಮಾಡಿದೆ.

ಚಿತ್ರಾಲ್‌ನಲ್ಲಿ ಪಾಕ್‌ನ ವಾಯುಸೀಮೆಯನ್ನು ಪ್ರವೇಶಿಸಿದ ಮೋದಿ ವಿಮಾನ, ಇಸ್ಲಾಮಾಬಾದ್‌ ಮತ್ತು ಲಾಹೋರ್‌ ಮೇಲೆ ಹಾರಾಟ ನಡೆಸಿ, ಅಮೃತಸರದಲ್ಲಿ ಭಾರತವನ್ನು ಪ್ರವೇಶಿಸಿದೆ. ‘ಪ್ರಧಾನಿಯವರ ವಿಮಾನ ಪಾಕ್‌ನ ಆಗಸದ ಮೇಲೆ ಹಾರಾಡಲು ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ಮೊದಲೇ ಮಾಹಿತಿ ನೀಡಿದ್ದರೆ ಅವರ ವಿಮಾನಕ್ಕೆ ವಿಶೇಷ ಕೋಡ್‌ ನೀಡಿ ಅಡೆತಡೆಯಿಲ್ಲದೆ ವಿಮಾನ ಹಾರಲು ಅನುವು ಮಾಡಿಕೊಡಲಾಗುತ್ತದೆ’ ಎಂದು ಪಾಕಿಸ್ತಾನದ ಸರ್ಕಾರಿ ಮೂಲಗಳು ಹೇಳಿವೆ.ಪಾಕಿಸ್ತಾನದ ಮೇಲೆ ಭಾರತದ ವಾಣಿಜ್ಯ ವಿಮಾನಗಳಿಗೆ ಹಾಗೂ ಭಾರತದ ಮೇಲೆ ಪಾಕಿಸ್ತಾನದ ವಾಣಿಜ್ಯ ವಿಮಾನಗಳಿಗೆ ಹಾರಾಟ ನಡೆಸಲು ಸಂಪೂರ್ಣ ಅನುಮತಿಯಿದೆ. ಆದರೆ ಯುದ್ಧವಿಮಾನ ಹಾರಾಟಕ್ಕೆ ಮಾತ್ರ ನಿರ್ಬಂಧ ಇದೆ.

==

ಶಾಂಘೈ ಶೃಂಗಕ್ಕೆ ಪಾಕ್‌ನಿಂದ ಪ್ರಧಾನಿ ಮೋದಿಗೆ ಆಹ್ವಾನ

ನವದೆಹಲಿ: ಅ.15-16ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಶೃಂಗಕ್ಕೆ ಆಗಮಿಸುವಂತೆ ಪಾಕಿಸ್ತಾನ ಪ್ರಧಾನಿ ನರೇಂದ್ರ ಮೊದಿ ಅವರನ್ನು ಆಹ್ವಾನಿಸಿದೆ. ಆದರೆ ಎರಡೂ ದೇಶಗಳ ನಡುವೆ ಇರುವ ರಾಜತಾಂತ್ರಿಕ ಬಿಕ್ಕಟ್ಟಿನ ಕಾರಣ ಮೋದಿ ತಾವು ಹೋಗುವ ಬದಲು ತಮ್ಮ ಪ್ರತಿನಿಧಿಯಾಗಿ ಮಂತ್ರಿಯೊಬ್ಬರನ್ನು ಕಳಿಸುವ ಸಾಧ್ಯತೆಯಿದೆ.ಈ ಬಾರಿ ಶಾಂಘೈ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವ ಪಾಕಿಸ್ತಾನ ನಿಯಮದಂತೆ ಈ ಆಮಂತ್ರಣ ಕಳಿಸಿದೆ. ಇತ್ತೀಚೆಗೆ ಜಮ್ಮುವಿನಲ್ಲಿ ಹೆಚ್ಚಾಗುತ್ತಿರುವ ಉಗ್ರದಾಳಿ ಹಾಗೂ ಕಾಶ್ಮೀರ ವಿವಾದಗಳ ನಡುವೆ ಪಾಕಿಸ್ತಾನದಲ್ಲಿ ಸಭೆ ನಡೆಯುತ್ತಿದ್ದು, ಭಾರತ ಸರ್ಕಾರ ಈ ಕುರಿತು ತನ್ನ ನಿಲುವನ್ನು ಬಹಿರಂಗಪಡಿಸಿಲ್ಲ.ಈ ಮೊದಲು ಕಜಕಿಸ್ತಾನ್ ಹೊರತುಪಡಿಸಿ ಬೆರೆಲ್ಲಾ ದೇಶಗಳು ಆಯೋಸಿದ್ದ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.

PREV

Recommended Stories

ವಸುಧೈವ ಕುಟುಂಬಕಂ’ ಆಶಯದ ಮೂರ್ತರೂಪ ಮೋಹನ್ ಭಾಗವತ್ ಜೀ
ವಿಶ್ವದ ನಂ.1 ಶ್ರೀಮಂತ ಪಟ್ಟದಿಂದ ಮಸ್ಕ್‌ ಔಟ್‌: ಲ್ಯಾರಿ ಈಗ ನಂ.1