- ಬಾಲ ಬಿಚ್ಚಿದರೆ ಸರ್ವನಾಶ: ಪ್ರಧಾನಿ
ಪಿಟಿಐ ನವದೆಹಲಿ
ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ವಿರುದ್ಧದ ಭಾರತ ಬೃಹತ್ ಸೇನಾ ಕಾರ್ಯಾಚರಣೆ ನಡೆಸಿದ ಬಳಿಕ ಇದೇ ಮೊದಲ ಬಾರಿಗೆ ಯೋಧರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಆಪರೇಷನ್ ಸಿಂದೂರದ ಮೂಲಕ ಪಾಕಿಸ್ತಾನದ ಪಾಲಿಗೆ ಲಕ್ಷ್ಮಣ ರೇಖೆ ಎಳೆಯಲಾಗಿದೆ’ ಎಂದು ಹೇಳಿದ್ದಾರೆ. ಈ ಮೂಲಕ, ‘ಭಾರತದ ಗಡಿ ದಾಟುವ ದುಸ್ಸಾಹಸಕ್ಕೆ ಕೈ ಹಾಕಿದರೆ ಸರ್ವನಾಶ ಖಚಿತ’ ಎಂದು ಪರೋಕ್ಷವಾಗಿ ಎಚ್ಚರಿಸಿದ್ದಾರೆ.ಪಂಜಾಬ್‌ನ ಅದಂಪುರದ ವಾಯುನೆಲೆಯಲ್ಲಿ, ಭಾರತದ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಯಾದ ರಷ್ಯಾ ನಿರ್ಮಿತ ಎಸ್-400 ಮತ್ತು ಮಿಗ್-29 ಮುಂದೆ ನಿಂತು ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನೀವು (ಭಾರತೀಯ ಸೈನಿಕರು) ಮಾಡಿರುವ ಕೆಲಸ ಅಭೂತಪೂರ್ವ, ಅಕಲ್ಪನೀಯ ಮತ್ತು ಅದ್ಭುತ. ನಮ್ಮ ಸೇನೆ ಪೊಳ್ಳು ಅಣುಬೆದರಿಕೆಗೆ ತಕ್ಕ ಉತ್ತರ ನೀಡಿದಾಗ, ವೈರಿಗಳಿಗೆ ಭಾರತ ಮಾತಾ ಕಿ ಜೈ ಘೋಷಣೆಯ ಮಹತ್ವ ಅರಿವಾಗಿದೆ. ಇದು ಕೇವಲ ಘೋಷಣೆಯಲ್ಲ. ನಮ್ಮ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣ ಮುಡಿಪಾಗಿಡುವ ಪ್ರತಿಜ್ಞೆ ಮಾಡಿದ್ದಾರೆ. ನಮ್ಮ ಡ್ರೋನ್ ಮತ್ತು ಕ್ಷಿಪಣಿಗಳು ವೈರಿಯ ಆಯುಧಗಳನ್ನು ಹೊಡೆದಾಗಲೂ ಇದೇ ಘೋಷಣೆ ಕೇಳುತ್ತಿತ್ತು’ ಎಂದರು.
ಇದಕ್ಕೂ ಮೊದಲು ಮೋದಿ ವಾಯುಪಡೆಯ ಸೈನಿಕರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ, ತ್ರಿಶೂಲದ ಚಿಹ್ನೆಯಿದ್ದ ಕ್ಯಾಪ್ ಧರಿಸಿದ್ದರು.