ನವದೆಹಲಿ : 79ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಗಳನ್ನು ಕೊಂಡಾಡಿದರು. ಬಹುಶಃ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಂಘವನ್ನು ಹೊಗಳಿದ್ದು ಇದೇ ಮೊದಲು.
‘ಇಂದು ಅಪಾರ ಹೆಮ್ಮೆಯಿಂದ ನಾನು ಒಂದು ಸಂಗತಿಯನ್ನು ಹಂಚಿಕೊಳ್ಳಬೇಕು. 100 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಸಂಘಟನೆ ಹುಟ್ಟಿಕೊಂಡಿತು. ಇದರ 100 ವರ್ಷಗಳ ರಾಷ್ಟ್ರಸೇವೆಯು ಅತ್ಯಂತ ಹೆಮ್ಮೆ ಮತ್ತು ವೈಭವಯುತವಾದ ಪುಟವಾಗಿದೆ. ಸೇವೆ, ಸಮರ್ಪಣೆ, ಸಂಘಟನೆ ಮತ್ತು ಅಪ್ರತಿಮ ಶಿಸ್ತು ಆರ್‌ಎಸ್‌ಎಸ್‌ನ ಗುರುತು. ಇದು ವಿಶ್ವದ ಅತಿದೊಡ್ಡ ಸರ್ಕಾರೇತರ ಸಂಸ್ಥೆ (ಎನ್‌ಜಿಒ)’ ಎಂದರು.
‘ಕಳೆದ 100 ವರ್ಷಗಳಿಂದ ಆರ್‌ಎಸ್‌ಎಸ್ ಸ್ವಯಂಸೇವಕರು ಮಾತೃಭೂಮಿಯ ಕಲ್ಯಾಣಕ್ಕಾಗಿ, ವ್ಯಕ್ತಿನಿರ್ಮಾಣದಿಂದ ರಾಷ್ಟ್ರನಿರ್ಮಾಣ ಎಂಬ ಆಶಯವನ್ನು ಪೂರ್ಣಗೊಳಿಸುವುದಕ್ಕೋಸ್ಕರ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ನಾನಿಂದು ರಾಷ್ಟ್ರಸೇವೆಗಾಗಿ ಶತಮಾನದಿಂದ ಕೊಡುಗೆ ನೀಡಿರುವ ಎಲ್ಲ ಸ್ವಯಂಸೇವಕರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ’ ಎಂದು ಹೇಳಿದರು. ಇದೇ ವೇಳೆ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿಯವರನ್ನು ಸ್ಮರಿಸಿದ ಪ್ರಧಾನಿ, ‘ದೇಶದ ಸಂವಿಧಾನಕ್ಕಾಗಿ ಪ್ರಾಣತ್ಯಾಗ ಮಾಡಿದ ಮೊಟ್ಟ ಮೊದಲ ವ್ಯಕ್ತಿ ಡಾ. ಶ್ಯಾಮಾ ಪ್ರಸಾದ ಮುಖರ್ಜಿ’ ಎಂದರು.
ಕಾಂಗ್ರೆಸ್ ಕಿಡಿ:
ಪ್ರಧಾನಿ ಮೋದಿ ಭಾಷಣದಲ್ಲಿ ಆರ್‌ಎಸ್‌ಎಸ್ ಅನ್ನು ಶ್ಲಾಘಿಸಿದ್ದಕ್ಕೆ ವಿಪಕ್ಷ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ‘ಇದು ಮುಂದಿನ ತಿಂಗಳು ಮೋದಿಯವರ 75ನೇ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ಸಂಘವನ್ನು ಸಮಾಧಾನಪಡಿಸುವ ಹತಾಶ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ವೈಯಕ್ತಿಕ ಮತ್ತು ಸಾಂಸ್ಥಿಕ ಲಾಭಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ರಾಜಕೀಯಗೊಳಿಸುವುದು ಪ್ರಜಾಪ್ರಭುತ್ವ ನೀತಿಗೆ ವಿನಾಶಕಾರಿ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟೀಕಿಸಿದ್ದಾರೆ.
ವಿಕಸಿತ ಭಾರತ ರೋಜಗಾರ್ ಯೋಜನೆಗೆ ಮೋದಿ ಚಾಲನೆ
ನವದೆಹಲಿ : ದೇಶದಲ್ಲಿ 2 ವರ್ಷದಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೆಂಪುಕೋಟೆಯ ಮೇಲೆ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡುವ ವೇಳೆ, ವಿಕಸಿತ ಭಾರತ ರೋಜಗಾರ್ ಯೋಜನೆಗೆ ಚಾಲನೆ ನೀಡಿದರು.
ಜು.1ರಂದು ಕೇಂದ್ರ ಸಚಿವ ಸಂಪುಟ ಯೋಜನೆಗೆ ಅನುಮೋದನೆ ನೀಡಿತ್ತು. ಆ.1ರಿಂದಲೇ ಪೂರ್ವಾನ್ವಯ ಆಗುವಂತೆ ಯೋಜನೆ ಜಾರಿಗೆ ಬಂದಿದೆ. ಆಗಸ್ಟ್ 1ರಿಂದ ಜುಲೈ 2027ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಯೋಜನೆ ಅನ್ವಯವಾಗಲಿದೆ ಎಂದು ಮೋದಿ ಪ್ರಕಟಿಸಿದರು.
ಏನಿದು ಯೋಜನೆ?:
ಯೋಜನೆಯಡಿ ಮೊದಲ ಬಾರಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ (ಇಪಿಎಫ್‌ಒದಲ್ಲಿ ನೋಂದಾಯಿತ) 1 ತಿಂಗಳ ವೇತನ (ಗರಿಷ್ಠ 15 ಸಾವಿರ ರು.) ಹಾಗೂ ಉದ್ಯೋಗದಾತರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಗಾಗಿ 2 ವರ್ಷಗಳ ಕಾಲ ಪ್ರೋತ್ಸಾಹ ಧನ ಸರ್ಕಾರದಿಂದ ಸಿಗಲಿದೆ.ಯೋಜನೆ 2 ಭಾಗಗಳನ್ನು ಹೊಂದಿದ್ದು, ಮೊದಲ ಭಾಗ ನವ ಉದ್ಯೋಗಿಗಳಿಗೆ ಹಾಗೂ 2ನೇ ಭಾಗ ಉದ್ಯೋಗದಾತರಿಗೆ ಸಂಬಂಧಿಸಿದ್ದಾಗಿದೆ.
ಹೊಸ ಉದ್ಯೋಗಿಗಳಿಗೆ ಪ್ರೋತ್ಸಾಹಧನ:ಈ ಭಾಗವು ʻಇಪಿಎಫ್ಒʼನಲ್ಲಿ ನೋಂದಾಯಿತರಾದ ಮೊದಲ ಬಾರಿಯ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದೆ. ಸುಮಾರು ₹1 ಲಕ್ಷ ವರೆಗೆ ವೇತನ ಪಡೆಯುವವರಿಗಷ್ಟೇ ಇದರ ಲಾಭ ಸಿಗಲಿದೆ. ಹೊಸ ಉದ್ಯೋಗಿಗಳಿಗೆ ಗರಿಷ್ಠ 15,000 ರು. ವರೆಗಿನ 1 ತಿಂಗಳ ವೇತನವು, 2 ಕಂತುಗಳಲ್ಲಿ ಪ್ರೋತ್ಸಾಹಧನವಾಗಿ ಸಿಗಲಿದೆ.
ಮೊದಲ ಕಂತನ್ನು ಕೆಲಸಕ್ಕೆ ಸೇರಿದ 6 ತಿಂಗಳಲ್ಲಿ ಮತ್ತು 2ನೇ ಕಂತನ್ನು 12 ತಿಂಗಳ ಸೇವೆ ನಂತರ ನೀಡಲಾಗುತ್ತದೆ.
ಉದ್ಯೋಗಿಗಳಲ್ಲಿ ಉಳಿತಾಯ ಮನೋಭಾವವೃದ್ಧಿಗೆ ಪ್ರೋತ್ಸಾಹಧನದ 1 ಭಾಗ ಡಿಪಾಸಿಟ್ ಖಾತೆಯಲ್ಲಿ ನಿರ್ದಿಷ್ಟ ಅವಧಿ ವರೆಗೆ ಇಡಲಾಗುತ್ತದೆ. ನಿಗದಿತ ದಿನಾಂಕ ಬಳಿಕ ಆ ಹಣ ಹಿಂಪಡೆಯಬಹುದು. ಈ ಪ್ರೋತ್ಸಾಹಧನ ಯೋಜನೆಯಿಂದ 1.92 ಕೋಟಿ ನವ ಉದ್ಯೋಗಿಗಳಿಗೆ ಅನುಕೂಲ ಆಗಲಿದೆ.
ಉದ್ಯೋಗದಾತರಿಗೆ ಪ್ರೋತ್ಸಾಹಧನ ಹೇಗೆ?:
ವಿಶೇಷವಾಗಿ ಉತ್ಪಾದನಾ ಕ್ಷೇತ್ರಕ್ಕೆ ಒತ್ತು ನೀಡಿ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಈ ಯೋಜನೆ ರೂಪಿಸಲಾಗಿದೆ. ಉದ್ಯೋಗದಾತರು ಸೃಷ್ಟಿಸುವ ಪ್ರತಿ ಹೆಚ್ಚುವರಿ ಉದ್ಯೋಗಕ್ಕೆ (ಕನಿಷ್ಠ 6 ತಿಂಗಳವರೆಗೆ ನಿರಂತರ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ) 3 ಸಾವಿರ ರು.ವರೆಗೆ ಪ್ರೋತ್ಸಾಹ ಧನ ಸಿಗಲಿದೆ. ಯೋಜನೆ 1 ಲಕ್ಷ ರು.ವರೆಗಿನ ವೇತನದ ಉದ್ಯೋಗ ಸೃಷ್ಟಿಗೆ ಮಾತ್ರ ಅನ್ವಯವಾಗಲಿದೆ.
ಎಷ್ಟು ಪ್ರೋತ್ಸಾಹಧನ?:
10 ಸಾವಿರ ರು. ವರೆಗಿನ ಮಾಸಿಕ ಇಪಿಎಫ್ ವೇತನ ಹೊಂದಿರುವ ನೌಕರರನ್ನು ನೇಮಿಸಿದ್ದಕ್ಕೆ ತಲಾ 1 ಸಾವಿರ ರು.ವರೆಗೆ, 10,001ರಿಂದ 20 ಸಾವಿರ ವರೆಗಿನ ಉದ್ಯೋಗ ಸೃಷ್ಟಿಗೆ ಮಾಸಿಕ 2 ಸಾವಿರ, 20,001ರಿಂದ 1 ಲಕ್ಷ ವರೆಗಿನ ವೇತನದ ಹೆಚ್ಚುವರಿ ಉದ್ಯೋಗ ಸೃಷ್ಟಿಸಿದ್ದಕ್ಕೆ ಮಾಸಿಕ ತಲಾ 3 ಸಾವಿರದ ವರೆಗೆ ಪ್ರೋತ್ಸಾಹಧನ ಉದ್ಯೋಗದಾತರಿಗೆ ಸಿಗಲಿದೆ.ಈ ಭಾಗವು ಸುಮಾರು 2.60 ಕೋಟಿ ಜನರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರನ್ನು ಪ್ರೋತ್ಸಾಹಿಸುವ ನಿರೀಕ್ಷೆಯಿದೆ.
2 ಹಂತದ ಯೋಜನೆ:
1. ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಿಗೆ 2 ಕಂತುಗಳಲ್ಲಿ ಗರಿಷ್ಠ 15,000 ರು.ವರೆಗೆ 1 ತಿಂಗಳ ವೇತನ
2. 1 ಲಕ್ಷ ರು.ವರೆಗಿನ ವೇತನದ ಉದ್ಯೋಗ ಸೃಷ್ಟಿಗಾಗಿ ಉದ್ಯೋಗದಾತರಿಗೆ 3000 ರು.ವರೆಗೆ ಪ್ರೋತ್ಸಾಹಧನ